ಬೆಂಗಳೂರು: ರಸ್ತೆ ಗುಂಡಿ ತಪ್ಪಿಸಲು ಹೋಗಿ ಬ್ರೇಕ್ ಹಾಕಿ ಬಿದ್ದು ಬಸ್ ಅಡಿ ಸಿಲುಕಿದ್ದ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಿಬಿಎಂಪಿ ಇದರ ಹೊಣೆ ಹೊರಬೇಕು ಎಂದು ಆಗ್ರಹ ವ್ಯಕ್ತವಾಗಿತ್ತು. ಆದರೆ ಈಗ ದುರ್ಘಟನೆಗೆ ಕೆಎಸ್‌ಆರ್‌ಟಿಸಿ ಬಸ್ ಚಾಲಕನನ್ನು ಅಪರಾಧಿಯನ್ನಾಗಿಸಲಾಗಿದೆ.
ಸುಜಾತ ಥಿಯೇಟರ್ ಬಳಿ ನಿನ್ನೆ ಮುಂಜಾನೆ ದುರ್ಘಟನೆ ಸಂಭವಿಸಿದ್ದು, ಉಮಾದೇವಿ ತೀವ್ರವಾಗಿ ಗಾಯಗೊಂಡಿದ್ದರು. ಮಧ್ಯಾಹ್ನ ಅವರನ್ನು ರಾಜಾಜಿನಗರದ ಇಎಸ್‌ಐ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಇಂದು ಬೆಳಗ್ಗೆ ೧೦ ಗಂಟೆಗೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.
ಬೆಂಗಳೂರಿನ ರಾಜಾಜಿನಗರ ಸಮೀಪದ ನಿವಾಸಿಯಾಗಿರುವ ಉಮಾ ಅವರು ಮೃತರಾದವರು. ಸೋಮವಾರ ಬೆಳಗ್ಗೆ ಉಮಾ ಅವರು ಮಗಳು ವನಿತಾ ಅವರನ್ನು ಹೋಂಡಾ ಆಕ್ಟೀವಾದಲ್ಲಿ ಕೂರಿಸಿಕೊಂಡು ರಾಜಾಜಿನಗರದ ಕಡೆಗೆ ಹೋಗುತ್ತಿದ್ದರು. ಈ ಭಾಗದಲ್ಲಿ ರಸ್ತೆಯಲ್ಲಿ ವಿಪರೀತ ಗುಂಡಿಗಳಿದ್ದು, ಒಂದು ದೊಡ್ಡ ಗುಂಡಿಯ ಹತ್ತಿರ ಬಂದಿದ್ದರು. ಅದನ್ನು ತಪ್ಪಿಸಲು ಹೋದ ಸಂದರ್ಭದಲ್ಲಿ ಒಮ್ಮೆಗೇ ಆಯತಪ್ಪಿ ಬಿದ್ದು ಬಿಟ್ಟಿದ್ದಾರೆ. ಈ ವೇಳೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಸರ್ಕಾರಿ ಬಸ್ ಅವರ ಮೇಲೆ ಹರಿದುಹೋಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಕರಣದ ಸಂಬಂಧ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮಾರುತಿ ರಾವ್ ಎಂಬವರನ್ನು ಮಲ್ಲೇಶ್ವರಂ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಮೃತ ಉಮಾದೇವಿ ಪುತ್ರಿ ವನಿತಾ ಈ ಕುರಿತು ದೂರು ದಾಖಲಿಸಿದ್ದು, ದೂರಿನ ಹಿನ್ನೆಲೆಯಲ್ಲಿ ಬಸ್ ಚಾಲಕ ಮಾರುತಿ ರಾವ್ ವಿರುದ್ಧ FIR ದಾಖಲು ಮಾಡಲಾಗಿದೆ.
ಇದನ್ನೂ ಓದಿ | Road tragedy | ರಾಜಧಾನಿಯಲ್ಲಿ ರಸ್ತೆ ಗುಂಡಿ ಅವಾಂತರ: ಸ್ಕೂಟರ್ ಸಹಿತ ಉರುಳಿದ ಮಹಿಳೆಯ ಕಾಲಿನ ಮೇಲೆ ಹರಿದ ಬಸ್