ಬೆಂಗಳೂರು: ಇಲ್ಲಿನ ರಾಜಾಜಿನಗರದ ರಾಜಕುಮಾರ್ ರೋಡ್ ಬಳಿ ರಸ್ತೆ ಗುಂಡಿಗೆ (Pothole) ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸೋಮವಾರ (ನ.14) ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಆ್ಯಕ್ಟಿವ್ ಹೋಂಡಾದಲ್ಲಿ ಬಂದ ಸವಾರ, ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿದ್ದಾರೆ. ಈ ವೇಳೆ ಸ್ಕಿಡ್ ಆಗಿ ಸವಾರ ನೆಲಕ್ಕೆ ಬಿದ್ದಿದ್ದಾರೆ. ಅವರ ಸ್ಕೂಟರ್ ಪಕ್ಕದಲ್ಲಿಯೇ ಬರುತ್ತಿದ್ದ ಟ್ರ್ಯಾಕ್ಟರ್‌ವೊಂದು ಸವಾರನ ಮೇಲೆ ಹರಿದಿದೆ. ಇದರಿಂದ ಆ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅಕ್ಕಪಕ್ಕದಲ್ಲಿದ್ದ ಜನರು ಅವರ ರಕ್ಷಣೆಗೆ ಮುಂದಾದರಾದರೂ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.
ಬೈಕ್ ಸವಾರ ಅದೇ ಏರಿಯಾದಲ್ಲಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಉಳಿದಂತೆ ಸವಾರನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ರಸ್ತೆ ಅಗೆದು ಹಲವು ದಿನಗಳು ಕಳೆದರೂ ಇದರ ದುರಸ್ತಿಗೆ ಅಧಿಕಾರಿಗಳು ಮುಂದಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಮತ್ತೆಷ್ಟು ಬಲಿ ಬೇಕೆಂದು ನಾಗರಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ | Pothole | ರಸ್ತೆ ಗುಂಡಿ ತಪ್ಪಿಸಲು ಹೋಗಿ ಪ್ರಾಣ ತೆತ್ತ ನಿವೃತ್ತ ಯೋಧ