Site icon Vistara News

Pothole | ಬೆಂಗಳೂರು ರಸ್ತೆ ಗುಂಡಿಯಿಂದಾಗಿ ಬೈಕ್‌ ಸವಾರ ಸಾವು

pothole 1

ಬೆಂಗಳೂರು: ಈಗಾಗಲೆ ಬೆಂಗಳೂರು ವಾಹನ ಸವಾರರನ್ನು ಹೈರಾಣಾಗಿಸಿರುವ ರಸ್ತೆ ಗುಂಡಿಯ ಕಾರಣಕ್ಕೆ ಯುವಕನೊಬ್ಬ ಕೊನೆಯುಸಿರೆಳೆದಿದ್ದಾನೆ. ಕೇರಳ ಮೂಲದ ಯುವಕ ಅರ್ಷದ್‌ ಮೃತ ದುರ್ದೈವಿ.

ಜಕ್ಕೂರು ಸಮೀಪದ ಸ್ವಾಮಿ ವಿವೇಕನಂದ ಶಾಲೆ ಬಳಿ ಘಟನೆ ನಡೆದಿದೆ, ಬೈಕ್‌ನಲ್ಲಿ ತೆರಳುತ್ತಿದ್ದ ಅರ್ಷದ್, ಎದುರಿಗೆ ಭಾರೀ ಗಾತ್ರದ ಗುಂಡಿ ಇದ್ದದ್ದನ್ನು ಗಮನಿಸಿ ಬ್ರೇಕ್‌ ಹಾಕಿದ್ದಾನೆ. ಈ ವೇಳೆ ಸ್ಕಿಡ್‌ ಆಗಿದೆ.

ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿಯಾಗಿದೆ. ನಿಯಂತ್ರಣ ತಪ್ಪಿ ಕೆಳ ಬಿದ್ದ ಅರ್ಷದ್ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಬೈಕ್‌ ಸವಾರನನ್ನು ತಪ್ಪಿಸಲು ಹೋಗಿ ತಾನೂ ಆಳವಾದ ಗುಂಡಿಯಲ್ಲಿಳಿದ ಕಾರು ಪಲ್ಟಿಯಾಗಿ ಬಿದ್ದಿದೆ. ಅಪಘಾತದ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಬೈಕ್‌ನಲ್ಲಿದ್ದ ಮತ್ತೊಬ್ಬರಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಚಾಲಕನನ್ನು ವಶಕ್ಕೆ ಪಡೆದು ಸಂಚಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಗಸ್ಟ್‌ನಲ್ಲಿ, ಬಿಟಿಎಂ ಲೇಔಟ್‌ನ ಕುವೆಂಪು ನಗರ ಬಸ್ ನಿಲ್ದಾಣದ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ಪರಿಣಾಮ ಬಿಎಂಟಿಸಿ ಬಸ್‌ ಹರಿದು ಶಿವಕುಮಾರ್‌ (35) ಎಂಬ ದ್ವಿಚಕ್ರ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ವರದಿಯಾಗಿತ್ತು.

ಕಳೆದ ವಾರವಷ್ಟೆ, ಜೆ.ಸಿ.ನಗರದ ನಿವಾಸಿಯಾಗಿರುವ ೩೮ ವರ್ಷದ ಬಾಲಾಜಿ ಎಂಬುವರು ಯಶವಂತಪುರದ ಬಿಇಎಲ್ ಸರ್ಕಲ್ ಬೈಕ್‌ನಲ್ಲಿ ಬರುವಾಗ ರಸ್ತೆ ಗುಂಡಿಯಿಂದಾಗಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಬಿದ್ದ ರಭಸಕ್ಕೆ ಬಾಲಾಜಿಯ ಕತ್ತು, ಭುಜದ ಮೂಳೆ ಮುರಿದು ಹೋಗಿತ್ತು. ಜತೆಗೆ ಕಾಲಿಗೆ ತೀವ್ರ ಪೆಟ್ಟಾಗಿ, ವ್ಹೀಲ್‌ ಚೇರ್‌ ಗತಿಯಾಗಿತ್ತು.

ಇದೇ ಸಮಯದಲ್ಲಿ ಸುಜಾತಾ ಥಿಯೇಟರ್‌ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಬ್ರೇಕ್‌ ಹಾಕಿ ಬಿದ್ದು ಬಸ್ ಅಡಿ ಸಿಲುಕಿದ್ದ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ರಸ್ತೆ ಗುಂಡಿ ಸಮಸ್ಯೆ ವಿರುದ್ಧ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ್ದರೆ, ಇತ್ತ ಇಂಗ್ಲಿಷ್‌ ಮಾಧ್ಯಮಗಳಲ್ಲೂ ಈ ವಿಚಾರ ದೊಡ್ಡ ಸುದ್ದಿಯಾಗಿ ಬೆಂಗಳೂರಿನ ಘನತೆಯನ್ನು ಮಣ್ಣುಪಾಲು ಮಾಡಿತ್ತು.

ಇದನ್ನೂ ಓದಿ | Bike Accident | ರಸ್ತೆ ಗುಂಡಿ ತಪ್ಪಿಸಲು ಹೋಗಿ ಬಿಎಂಟಿಸಿ ಬಸ್‌ ಅಡಿ ಸಿಲುಕಿ ಬೈಕ್‌ ಸವಾರ ಸ್ಥಳದಲ್ಲೇ ಸಾವು

Exit mobile version