Site icon Vistara News

Pralhad Joshi : ಕುವೆಂಪುಗೆ ಅಪಮಾನ, ಸರ್ಕಾರದ ಮುಠ್ಠಾಳತನ ; ಹಾಸ್ಟೆಲ್‌ ಘೋಷವಾಕ್ಯ ಬದಲಿಗೆ ಜೋಶಿ ಆಕ್ಷೇಪ

Pralhad Joshi Slogan Change

ಹುಬ್ಬಳ್ಳಿ: ಸರ್ಕಾರಿ ವಸತಿ ಶಾಲೆಗಳಲ್ಲಿರುವ (Government Hostel) ʻಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿʼ ಎಂಬ ಘೋಷವಾಕ್ಯವನ್ನು ಬದಲಿಸಿ (Change of slogan) ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿʼ ಎಂದು ಬರೆಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮುಠ್ಠಾಳತನ ಪ್ರದರ್ಶಿಸಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ (Pralhad Joshi) ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ರೀತಿ ಏಕಾಏಕಿಯಾಗಿ ತಿದ್ದುಪಡಿ ಮಾಡಿರುವುದು ಕಾಂಗ್ರೆಸ್‌ನ ತುಷ್ಟೀಕರಣದ ಪರಮಾವಧಿ ಎಂದು ಕಿಡಿ ಕಾರಿದರು.

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂಬುದು ರಾಷ್ಟ್ರಕವಿ ಕುವೆಂಪು ಅವರ ಕವಿ ಸಾಲು.. ಇದನ್ನು ತಿದ್ದುಪಡಿ ಮಾಡುವ ಮೂಲಕ ಕುವೆಂಪು ಅವರಿಗೂ ಈ ಸರ್ಕಾರ ಅವಮಾನ ಮಾಡಿದೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು. ಈ ಸರ್ಕಾರ, ಕುವೆಂಪು ಅವರ ಘೋಷ ವಾಕ್ಯವನ್ನೇ ಬದಲಾಯಿಸಿದೆ. ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ದೃಷ್ಟಿಯಲ್ಲಿ ಕುವೆಂಪು ಜಾತ್ಯಾತೀತರಲ್ಲವೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ : Residential Schools: ಮತ್ತೆ ಬದಲಾಯಿತು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ! ಆಕ್ರೋಶಕ್ಕೆ ಮಣಿದ ಸರ್ಕಾರ

Pralhad Joshi : ಕಾಂಗ್ರೆಸ್‌ ಸರ್ಕಾರದ ಹಿಂದೂ ವಿರೋಧಿ ನಡೆ

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂದಿರುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿರುವ ಜೋಶಿ ಅವರು, ಇದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನಡೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ತುಷ್ಟೀಕರಣದ ಪರಾಕಾಷ್ಠೆ ರಾಜ್ಯ ಕಾಂಗ್ರೆಸ್ ಸರ್ಕಾರ ತುಷ್ಟೀಕರಣದ ಪರಾಕಾಷ್ಠೆ ತಲುಪಿದೆ. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಎಷ್ಟರ ಮಟ್ಟಿಗೆ ಹಿಂದೂ ವಿರೋಧಿ ನಡೆ ಅನುಸರಿಸುತ್ತಿದೆ ಮತ್ತು ಯಾವ ಹಂತಕ್ಕೆ ತುಷ್ಟೀಕರಣ ಮಾಡುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಸಚಿವ ಜೋಶಿ ಕಿಡಿ ಕಾರಿದರು.

ವಿಧಾನಸಭೆ, ವಿಧಾನ ಪರಿ‌ಷತ್‌ನಲ್ಲಿ ಚರ್ಚೆ

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂಬುದನ್ನು ಅಳಿಸಿ ಹಾಕಿ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ತಿದ್ದುಪಡಿ ಮಾಡಿರುವ ಬಗ್ಗೆ ಬಹುತೇಕ ಇಂದು ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಬಿಜೆಪಿ ಚರ್ಚೆ ಮಾಡಲಿದೆ ಎಂದು ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ಏನಿದು ಘೋಷ ವಾಕ್ಯ ಬದಲಾವಣೆ ವಿವಾದ?

ರಾಜ್ಯದ ಎಲ್ಲ ಸರ್ಕಾರಿ ಹಾಸ್ಟೆಲ್‌ಗಳ ಪ್ರವೇಶ ದ್ವಾರದಲ್ಲಿ ʻಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾʼ ಎಂಬ ಘೋಷ ವಾಕ್ಯವಿದೆ. ಈ ನಡುವೆ, ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿರುವ ಕೆ. ಮಣಿವಣ್ಣನ್‌ ಅವರು ರಾತ್ರೋರಾತ್ರಿ ಟೆಲಿಗ್ರಾಂ ಗ್ರೂಪ್‌ ಮೂಲಕ ಆದೇಶವನ್ನು ಹೊರಡಿಸಿ, ಈ ಘೋಷ ವಾಕ್ಯವನ್ನು ʻಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿʼ ಎಂದು ಬದಲಾಯಿಸಲು ಸೂಚಿಸಿದ್ದರು. ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾಗದದಲ್ಲಿ ಬರೆದು ಅಂಟಿಸಿದ್ದಾರೆ.

ಇದು ಮುಂಜಾನೆಯ ಹೊತ್ತಿಗೆ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಬದಲಾವಣೆಯ ಅಗತ್ಯವನ್ನು ಪ್ರತಿಪಕ್ಷಗಳು ಪ್ರಶ್ನೆ ಮಾಡಿದವು. ಇದರ ನಡುವೆ ಕೆಲವು ಹಾಸ್ಟೆಲ್‌ಗಳಲ್ಲಿ ಈ ರೀತಿ ಬದಲಾವಣೆಯನ್ನು ಮರು ಸ್ಥಾಪಿಸಲಾಗಿದೆ.

Exit mobile version