Site icon Vistara News

Kannada Name plate: ಧರ್ಮದ್ದಾದರೆ ಕೇಸ್‌ ವಾಪಸ್‌; ಕನ್ನಡದ ಹೋರಾಟವಾದರೆ ಯಾಕಿಲ್ಲ: ಪ್ರವೀಣ್‌ ಶೆಟ್ಟಿ ಗುಡುಗು

Karave Praveen Shetty

ಬೆಂಗಳೂರು: ಕನ್ನಡ ನಾಮಫಲಕ ಕಡ್ಡಾಯ (Kannada Name plate Compulsory) ವಿಚಾರವಾಗಿ ಪರಭಾಷಿಕ ಉದ್ಯಮಿ, ವ್ಯಾಪಾರಸ್ಥರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (Kannada Rakshana Vedike) ಸಿಡಿದೆದ್ದು ಪ್ರತಿಭಟನೆ ನಡೆಸುವಾಗ ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡರನ್ನು (TA Narayana Gowda) ಅವರನ್ನು ಬಂಧಿಸಿರುವ ಸರ್ಕಾರದ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ವೇಳೆ ಕರವೇ ಪ್ರವೀಣ್‌ ಶೆಟ್ಟಿ, “ಧರ್ಮದ ಪರ ಹೋರಾಟ ಮಾಡಿದವರ ವಿರುದ್ಧ ಹಾಕಿರುವ ಕೇಸ್ ಅನ್ನು ವಾಪಸ್‌ ತೆಗೆದುಕೊಳ್ಳುತ್ತೀರಿ. ಆದರೆ, ರಾಜ್ಯದ, ಕನ್ನಡದ ಪರ ಹೋರಾಟ ಮಾಡಿದವರ ಕೇಸ್‌ ಅನ್ನು ಯಾಕೆ ವಾಪಸ್‌ ತೆಗೆಯುತ್ತಿಲ್ಲ” ಎಂದು ಪ್ರಶ್ನೆ ಮಾಡಿದ್ದಾರೆ.

ಈ ಸಂಬಂಧ ಕರವೇ ಬಣಗಳು ಒಂದಾಗಿದ್ದು, ಕರವೇ ಪ್ರವೀಣ್ ಶೆಟ್ಟಿ ಬಣದ ನೇತೃತ್ವದಲ್ಲಿ ವಸಂತ ನಗರದ ಟೆನ್ನಿಸ್ ಕ್ಲಬ್‌ನಲ್ಲಿ ಸಭೆ ನಡೆಸಲಾಗಿದೆ. ಈ ವೇಳೆ ಸಾಹಿತಿಗಳು ಸೇರಿದಂತೆ ಕನ್ನಡಪರ ಸಂಘಟನೆಗಳವರು ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರವೀಣ್ ಶೆಟ್ಟಿ, ನಮ್ಮಲ್ಲಿ ಸಾವಿರ ಭಿನಾಭಿಪ್ರಾಯಗಳು ಇರಬಹುದು. ಆದರೆ, ಕನ್ನಡದ ವಿಚಾರ ಬಂದಾಗ ನಾವೆಲ್ಲ ಒಂದೇ ಆಗಿದ್ದೇವೆ. ಅಮಾಯಕರನ್ನು ಇವತ್ತು ಜೈಲಿಗೆ ಹಾಕಿದ್ದಾರೆ. ವಾರಕ್ಕೆ ಮೂರು ಬಾರಿ ಕೋರ್ಟ್‌ನಲ್ಲಿ ಓಡಾಡುವ ಸ್ಥಿತಿ ಬಂದಿದೆ. ಯಾವುದೇ ರಾಜಕೀಯ ಪಕ್ಷಗಳು ವಿರೋಧ ಪಕ್ಷದಲ್ಲಿ ಇದ್ದಾಗ ನಮಗೆ ಬೆಂಬಲ ನೀಡುತ್ತಾರೆ. ಆದರೆ, ಅಧಿಕಾರಕ್ಕೆ ಬಂದ ಮೇಲೆ ನಮ್ಮ ಮೇಲೆ ಲಾಠಿ ಏಟು ಕೊಡುತ್ತಾರೆ. ನಾವು ಉದ್ದೇಶಪೂರ್ವಕವಾಗಿ ಕಲ್ಲು ಹೊಡೆದಿಲ್ಲ. ಹೋರಾಟ ಮಾಡುವಾಗ ಒಂದೆರಡು ಕಲ್ಲು ಬಿಸಾಡಿರಬಹುದು. ಬೆಂಗಳೂರಿನಲ್ಲಿ ಕನ್ನಡಿಗರು ಬದುಕಲು ಆಗುತ್ತಿಲ್ಲ. ಧರ್ಮದ ಪರ ಹೋರಾಟ ಮಾಡಿದವರ ವಿರುದ್ಧ ಹಾಕಿರುವ ಕೇಸ್ ಅನ್ನು ವಾಪಸ್‌ ಪಡೆಯುತ್ತೀರಿ. ಅದೇ ರಾಜ್ಯಕ್ಕಾಗಿ, ಕನ್ನಡಕ್ಕಾಗಿ ಹೋರಾಟ ಮಾಡಿದವರ ಮೇಲೆ ಹಾಕಲಾಗಿರುವ ಕೇಸ್‌ ಅನ್ನು ಏಕೆ ವಾಪಸ್‌ ತೆಗೆಯುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.

ವಾಣಿಜ್ಯ ಮಳಿಗೆಗಳಲ್ಲಿ ಶೇ. 60ರಷ್ಟು ಕನ್ನಡ ಬಳಸುವ ಕಾನೂನನ್ನು ಸರ್ಕಾರ ಮಾಡಿದೆ. ಆದರೆ, ಪ್ರತಿ ಸರ್ಕಾರವು ವಿರೋಧ ಪಕ್ಷದಲ್ಲಿದ್ದಾಗ ನಮಗೆ ಬೆಂಬಲ ನೀಡುತ್ತದೆ. ಆದರೆ, ಆಡಳಿತಕ್ಕೆ ಬಂದಾಗ ಬೂಟೇಟು ನೀಡುತ್ತದೆ. ನಮಗೂ ಹೆಂಡತಿ ಮಕ್ಕಳು ಇದ್ದಾರೆ ಸ್ವಾಮಿ. ಫೆಬ್ರವರಿ ಒಳಗೆ ಶೇ. 60ರಷ್ಟು ಕನ್ನಡ ನಾಮಫಲಕ ಜಾರಿಯಾಗಬೇಕು ಎಂದು ಪ್ರವೀಣ್‌ ಶೆಟ್ಟಿ ಆಗ್ರಹಿಸಿದರು.

ಹಳೇ ದಿನ ನೆನಪು ಮಾಡಿಕೊಳ್ಳಿ; ಸಿಎಂ-ಡಿಸಿಎಂಗೆ ದೊಡ್ಡರಂಗೇಗೌಡ ಸಲಹೆ

ಸಾಹಿತಿ ದೊಡ್ಡರಂಗೇಗೌಡ ಮಾತನಾಡಿ, ವಿಷಮ ಸ್ಥಿತಿಯಲ್ಲಿ ನಾವು ಸಿಲುಕಿಕೊಂಡಿದ್ದೇವೆ. ಇದೇ ವಿಷಮ ಸ್ಥಿತಿ ತಮಿಳುನಾಡಿಗೆ ಬಂದಿದ್ದರೆ ಅದರ ಕಥೆಯೇ ಬೇರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಿಲುವು ಸರಿಯಲ್ಲ. ಹೋಗಿ ಹೋಗಿ ಕನ್ನಡದ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಅವರೆಲ್ಲ ತಮ್ಮ ತಾರುಣ್ಯದ ದಿನಗಳನ್ನು ನೆನಪು ಮಾಡಿಕೊಳ್ಳಲಿ ಎಂದು‌ ಕಿಡಿಕಾರಿದರು.

ಅವರೆಲ್ಲ ಹೋರಾಟ ಮಾಡುವಾಗ ಕನ್ನಡ ಇರಲಿಲ್ವಾ? ಈಗ ಅಧಿಕಾರ ಸಿಕ್ಕ ಕೂಡಲೇ ಕ್ರಮ ತೆಗೆದುಕೊಳ್ಳುವುದೇ? ನಾವು ಸುಮ್ಮನೆ ಜಗಳಕ್ಕೆ ಹೋಗಲ್ಲ. ಲಾಠಿ ಇದೆ ಅಂತಾ ಎಲ್ಲರನ್ನು ಹೊಡೆದುಕೊಂಡು ಬಂದರೆ ಸುಮ್ಮನೆ ಇರಲ್ಲ. ಸರ್ಕಾರ ಪ್ರತಿಭಟನೆಯನ್ನು ಕೊಂದು ಹಾಕುತ್ತಿದೆ. ಎಲ್ಲವೂ ಸುಸೂತ್ರವಾಗಿದ್ದರೆ ನಾವು ಹೋರಾಟ ಮಾಡುತ್ತೇವಾ? ಮುಗ್ದ ಕನ್ನಡಿಗರ ಮೇಲೆ ಲಾಠಿ ಪ್ರಹಾರ ಮಾಡುತ್ತೀರಾ? ಎಂದು ದೊಡ್ಡರಂಗೇಗೌಡ ಪ್ರಶ್ನೆ ಮಾಡಿದರು.

ನೀವು ಕನ್ನಡ ಕಲಿಯಲೇ ಬೇಕು!

ಬೇರೆ ಬೇರೆ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿರುವವರಿಗೆ ಒಂದು ಮಾತನ್ನು ಹೇಳುತ್ತೇನೆ. ನೀವು ಕನ್ನಡ ಕಲಿಯಲೇಬೇಕು, ಕಲಿಯುವ ಹಾಗೇ ನಾವು ಮಾಡುತ್ತೇವೆ ಎಂದು ದೊಡ್ಡರಂಗೇಗೌಡ ಹೇಳಿದರು.

ನಾವು ಇನ್ನು ಮುಂದೆ ಇದನ್ನು ಸಹಿಸುವುದಿಲ್ಲ. ನಮಗೂ ಸ್ವಾಭಿಮಾನ ಇದೆ. ಅಕ್ಕರೆಯ ಸ್ವಾಭಿಮಾನವೇ ನಮ್ಮ ಅಸ್ತ್ರ. ಸರ್ಕಾರ ಇದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳೋಕೆ ಸಾಧ್ಯ ಇಲ್ಲ. ಕನ್ನಡದ ಎಲ್ಲ ಶಕ್ತಿಗಳು ಇದನ್ನು ಖಂಡಿಸಬೇಕಾಗಿದೆ. ಸ್ಫೋಟವಾಗುವ ಕಾಲ ಸಮೀಪವಿದೆ. ನಾವು ಸುಮ್ಮ ಸುಮ್ಮನೆ ಕಾಲು ಕೆರದುಕೊಂಡು ಜಗಳಕ್ಕೆ ಬರೋದಿಲ್ಲ. ಈ ರೀತಿ ನಮ್ಮನ್ನು ಶೋಷಣೆ ಮಾಡಿ ಹಿಂಸೆ ಕೊಟ್ಟರೆ ನಾವು ಏನು ಮಾಡುವುದು? ಅನ್ಯಾಯ ಆಗುತ್ತಿರುವಾಗ ನಾವು ಪ್ರತಿಭಟನೆ ಮಾಡುತ್ತೇವೆ. ಸರ್ಕಾರದ ಧೋರಣೆಯನ್ನು ನಾವು ಖಂಡಿಸುತ್ತೇವೆ ಎಂದು ದೊಡ್ಡರಂಗೇಗೌಡ ಹೇಳಿದರು.

ನಿಮ್ಮ ಸಂಕಲ್ಪವನ್ನು ಬದಲಿಸುವ ಮಾರ್ಗ ನಮಗೆ ಗೊತ್ತು

ಎಲ್ಲ ಸಾಹಿತಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತೇವೆ. ಎಲ್ಲ ಮನೆ ಮನಗಳಲ್ಲಿ ಕನ್ನಡ ರಾರಾಜಿಸಬೇಕು. ಬೇರೆ ರಾಜ್ಯದಿಂದ ಬಂದು ಇಲ್ಲಿ ಇರುವವರು ಕನ್ನಡ ಕಲಿಯಲೇಬೇಕು. ಅನ್ನ ಕೊಡುವ ತಾಯಿಯನ್ನು ಲೆಕ್ಕಿಸದೆ ನೀವು ಇಲ್ಲಿ ಬದುಕುತ್ತಿದ್ದೀರಾ? ನಿಮ್ಮ ಸಂಕಲ್ಪವನ್ನು ಬದಲಿಸುವ ಮಾರ್ಗ ನಮಗೆ ಗೊತ್ತು. ನಾರಾಯಣ ಗೌಡರೇ ನಿಮ್ಮ ಜತೆ ನಾವಿದ್ದೇವೆ. ನಿಮಗೆ ಯಾವುದೇ ತೊಂದರೆ ಆಗದಂತೆ ನಾವಿದ್ದೇವೆ. ಪೊಲೀಸರೇ ಲಾಠಿ ಇದೆಯೆಂದು ಬೀಸುವುದಲ್ಲ. ನಾವು ಒಗ್ಗಟ್ಟಿನ ಬೆಂಬಲವನ್ನು ಕೊಡುತ್ತೇವೆ ಎಂದು ದೊಡ್ಡರಂಗೇಗೌಡ ಹೇಳಿದರು.

ಮಗನನ್ನು ಬಿಡದೇ ಇದ್ದರೆ ಅನ್ನ – ನೀರು ಬಿಟ್ಟು ಸಾಯುವೆ: ಗೌರಮ್ಮ

ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ ಅವರ ತಾಯಿ ಗೌರಮ್ಮ ಮಾತನಾಡಿ, ನನ್ನ ಮಗ ಕನ್ನಡಪರ ಹೋರಾಟ ಮಾಡುತ್ತಿದ್ದಾನೆ. ನಿಮ್ಮಗೆ ನಾಚಿಕೆ ಆಗಲ್ವಾ? ನನ್ನ ಮಗನನ್ನು ಏಕೆ ಜೈಲಿಗೆ ಹಾಕಿದ್ದೀರಾ? ನನ್ನ ಮಗನನ್ನು ಬಿಡದೇ ಹೋದರೆ ನಾನು ಅನ್ನ ನೀರು ಬಿಟ್ಟು ಸಾಯುತ್ತೇನೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕೇವಲ ಪೇಪರ್‌ನಲ್ಲಿ ಆದೇಶ

ಚಿತ್ರ ನಿರ್ಮಾಪಕ ಸಾರಾ ಗೋವಿಂದ್ ಮಾತನಾಡಿ, ಡಾ.ರಾಜಕುಮಾರ್ ಅವರ ಜತೆ ಕನ್ನಡ ಹೋರಾಟ ಮಾಡಿಕೊಂಡು ಬಂದಿದ್ದು, ಇದೀಗ 41 ವರ್ಷಕ್ಕೆ ಕಾಲಿಟ್ಟಿದ್ದೇನೆ. ನಮ್ಮಲ್ಲಿ ಎಷ್ಟೇ ಭಿನಾಭಿಪ್ರಾಯ ಇರಲಿ. ಇಂತಹ ಸಂದರ್ಭದಲ್ಲಿ ನಾವೆಲ್ಲ ಕನ್ನಡ ಹೋರಾಟಗಾರರ ಪರವಾಗಿ ಇರಬೇಕು. ನಮ್ಮಲ್ಲಿಯೇ ಅಪಸ್ವರ ಇರಬಾರದು. ಕರ್ನಾಟಕ ಇವತ್ತು ಎಷ್ಟು ಬೆಳೆದಿದೆ ಎಂಬುದನ್ನು ಒಮ್ಮ ಅವಲೋಕನ ಮಾಡಿಕೊಳ್ಳಿ. ನಾನು ಒಬ್ಬ ಮುಖ್ಯಮಂತ್ರಿಗೆ ಹೇಳಲ್ಲ. ಎಲ್ಲ ಮುಖ್ಯಮಂತ್ರಿಗಳಿಗೆ ಹೇಳುತ್ತೇನೆ. ಕನ್ನಡಿಗರಿಗೆ ಉದ್ಯೋಗ ನೀಡಬೇಕು, ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದೆಲ್ಲ ಇದುವರೆಗೂ ಎಲ್ಲರೂ ಆದೇಶ ಮಾಡಿದ್ದಾರೆ. ಇದು ಕೇವಲ‌ ಪೇಪರ್‌ನಲ್ಲಿ ಇರುವ ಆದೇಶವಾಗಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Karave Protest: ಇಂಗ್ಲಿಷ್‌ ನಾಮಫಲಕಕ್ಕೆ ಮಸಿ ಬಳಿಯಬೇಡಿ; ಹೀಗಾದ್ರೆ ಹೂಡಿಕೆಗೆ ಯಾರೂ ಬರಲ್ಲ: ಎಂ.ಬಿ. ಪಾಟೀಲ್

ಕರವೇ ಅಧ್ಯಕ್ಷ ನಾರಾಯಣಗೌಡರು ಮತ್ತು ಕಾರ್ಯಕರ್ತರನ್ನು ಬಂಧಿಸಿರುವ ಕ್ರಮ ಪ್ರಶ್ನಿಸಿ ಕನ್ನಡ ಪರ ಹೋರಾಟಗಾರರು ಬೆಂಗಳೂರಿನ ಫ್ರೀಡಂ ಪಾರ್ಕ್‌‌ನಲ್ಲಿ ಪ್ರತಿಭಟನೆ ನಡೆಸಿದರು. ಆಪ್‌ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಜತೆಗಿದ್ದರು.

ಕಾವೇರಿಗಾಗಿ ನಾವು ಹೋರಾಟ ಮಾಡಬೇಕು, ಕಳಸಾ ಬಂಡೂರಿಗಾಗಿಯೂ ನಾವೇ ಹೋರಾಟ ಮಾಡಬೇಕು. ಎಲ್ಲದಕ್ಕೂ ನಾವೇ ಹೋರಾಟ ಮಾಡಿದ್ದೇವೆ. ಆಗ ಕೆಲವರು ನೈತಿಕ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದರು. ಅದೆಲ್ಲ ಈಗ ಬೇಡ ನಾವು ಈಗ ಜೈಲಿನಲ್ಲಿರುವವರ ಪರವಾಗಿ ನೇರವಾಗಿ ಬೆಂಬಲ ನೀಡುತ್ತಾ ಇದ್ದೇವೆ ಎಂದು ಸಾರಾ ಗೋವಿಂದ್‌ ಹೇಳಿದರು.

Exit mobile version