ಬೆಂಗಳೂರು: “ಬೆಲೆ ಏರಿಕೆ, ಜಿಎಸ್‌ಟಿ ಹೊರೆ, ನಿರುದ್ಯೋಗ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಿಜವಾದ ಗ್ಯಾರಂಟಿ” ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ (DK Suresh) ವಾಗ್ದಾಳಿ ನಡೆಸಿದರು.
ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ದಕ್ಷಿಣದ ವಿವಿಧೆಡೆ ಭಾನುವಾರ ಪ್ರಚಾರ ನಡೆಸಿದ ಅವರು, “ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದ ಕೇಳಲು ನಾನು ಬಂದಿದ್ದೇನೆ. ಈ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 10 ವರ್ಷವಾಗಿದೆ. ರಾಜ್ಯದ ಜನರ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು 10 ತಿಂಗಳಾಗಿವೆ. ಕಾಂಗ್ರೆಸ್ ಸರ್ಕಾರದ ಈ ಹತ್ತು ತಿಂಗಳ ಸಾಧನೆ ಏನು, ಕೇಂದ್ರ ಬಿಜೆಪಿ ಸರ್ಕಾರ 10 ವರ್ಷಗಳ ಸಾಧನೆ ಏನು ಎಂಬುದನ್ನು ಈ ಚುನಾವಣೆಯಲ್ಲಿ ಚರ್ಚೆ ಮಾಡಬೇಕು ಎಂದರು.
ನೀವೆಲ್ಲರೂ ಟಿವಿಗಳಲ್ಲಿ ಕಾಂಗ್ರೆಸ್‌ನ ಐದು ಗ್ಯಾರಂಟಿ ಹಾಗೂ ಮೋದಿ ಗ್ಯಾರಂಟಿ ಬಗ್ಗೆ ಜಾಹೀರಾತು ನೋಡುತ್ತಿದ್ದೀರಿ. ಇಲ್ಲಿರುವ ಜನರ ಪೈಕಿ ಮೋದಿ ಗ್ಯಾರಂಟಿ ಎಷ್ಟು ಜನರಿಗೆ ತಲುಪಿದೆ ಕೈ ಎತ್ತಿ. ಯಾರ ಖಾತೆಗೆ 15 ಲಕ್ಷ ಬಂದಿದೆ ಕೈ ಎತ್ತಿ. ಮೋದಿ ಬಹಳ ಒಳ್ಳೆಯವರು, ಅವರು 15 ಲಕ್ಷ ದುಡ್ಡು ಕೊಟ್ಟಿರಬೇಕು. ಇಲ್ಲೇ ಯಾರೋ ಮಧ್ಯದಲ್ಲಿ ಅದನ್ನು ತಿಂದಿರಬೇಕು. ನಿಮ್ಮ ಖಾತೆಗೆ ಬರಬೇಕಾದ 15 ಲಕ್ಷ ಹಣವನ್ನು ಯಾರ ಖಾತೆಗೆ ಕೊಟ್ಟಿದ್ದಾರೆ? ಅದಾನಿ ಖಾತೆಗೋ, ಅಂಬಾನಿ ಖಾತೆಗೋ? ಬಡವರ ಖಾತೆಗಾ? ರೈತರ ಖಾತೆಗಾ? ಯಾರ ಖಾತೆಗೆ ಎಂದು ನೀವು ಹುಡುಕಬೇಕು ಎಂದು ಹೇಳಿದರು.
ಬೆಲೆ ಏರಿಕೆ ಕಡಿಮೆ ಆಗಿದೆಯಾ? ಅಡುಗೆ ಎಣ್ಣೆ, ಅಕ್ಕಿ, ಸಕ್ಕರೆ, ಚಿನ್ನದ ಬೆಲೆ ಕಮ್ಮಿ ಆಗಿದೆಯಾ? ಚಿನ್ನ ಕೊಳ್ಳುವುದು ಇರಲಿ, ಚಿನ್ನದ ಅಂಗಡಿ ಕಡೆ ನೋಡಂಗೂ ಇಲ್ಲ. ಚಿನ್ನ 1 ಗ್ರಾಂಗೆ 7500 ಆಗಿದೆ. ನಮ್ಮ ಸರ್ಕಾರ ಬೆಲೆ ಏರಿಸಿದೆ ಎಂದು ನೀವೆಲ್ಲ ಟೀಕೆ ಮಾಡುತ್ತಿದ್ದಿರಿ. ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಾಗ 10 ಗ್ರಾಂಗೆ 27-28 ಸಾವಿರ ಇದ್ದ ಚಿನ್ನ, ಈಗ 75 ಸಾವಿರ ಆಗಿದೆ. ಇನ್ನು ಮನೆ ಕಟ್ಟಲು ಕಬ್ಬಿಣವಾದರೂ ತಗೋಬಹುದಾ? ಅದೂ ಇಲ್ಲ. ಅದರ ದರವನ್ನು 30 ಸಾವಿರದಿಂದ 75 ಸಾವಿರ ಮಾಡಿದ್ದಾರೆ. ಇದನ್ನೆಲ್ಲ ಯಾರಿಗೆ ಹೇಳಬೇಕು? ಎಂದು ಕಿಡಿಕಾರಿದರು.
ನಾನು ನಿಮ್ಮ ಕೆಲಸ ಮಾಡುವವನು, ಕೂಲಿ ಕೇಳಲು ಬಂದಿದ್ದೇನೆ
ನೀರಿನ ವಿಚಾರವಾಗಿ ಇಲ್ಲಿ ಅನೇಕರು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಇಲ್ಲಿನ ನಿವಾಸಿಗಳು ನೀರು, ರಸ್ತೆ, ಆಟದ ಮೈದಾನ ಸೇರಿದಂತೆ ಅಭಿವೃದ್ಧಿ ಕೆಲಸಗಳ ಬಗ್ಗೆ ಮನವಿ ನೀಡಿದ್ದಾರೆ. ಈ ಬಾರಿ ಚುನಾವಣೆ ಸಮೀಪಿಸುತ್ತಿದ್ದು, ನಾನು ಮತ್ತೆ ಸ್ಪರ್ಧೆ ಮಾಡಿದ್ದೇನೆ. ನಾನು ನಿಮ್ಮ ಕೆಲಸ ಮಾಡುವವನು, ಕೂಲಿ ಕೇಳಲು ಬಂದಿದ್ದೇನೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದೆ. ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಗಳಾಗಿ ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದಾರೆ. ನಿಮ್ಮ ಎಲ್ಲಾ ಸಮಸ್ಯೆಗಳು ಅವರ ಇಲಾಖೆ ವ್ಯಾಪ್ತಿಯಲ್ಲಿ ಬರಲಿದೆ ಎಂದು ಡಿ.ಕೆ.ಸುರೇಶ್ ಹೇಳಿದರು.
ನೀವು ನನಗೆ ಆಶೀರ್ವಾದ ಮಾಡಿದರೆ, ನಾನು ನಿಮಗೆ ಹೆಚ್ಚಿನ ಸಹಾಯ ಮಾಡಬಹುದು. ನಾನು ಇಲ್ಲಿ ಹೊಲ ಬಿತ್ತಿ, ಬೇರೆಕಡೆ ಫಸಲು ಕೀಳಲು ಆಗುವುದಿಲ್ಲ. ಹಳ್ಳಿ ಭಾಷೆಯಲ್ಲಿ ಎಲ್ಲಿ ನಾವು ಉಳುಮೆ ಮಾಡುತ್ತೇವೋ ಅಲ್ಲೇ ಫಸಲು ತೆಗೆಯಬೇಕು ಎಂಬ ಮಾತಿದೆ. ಅದೇ ರೀತಿ ನಿಮಗೆ ಕೆಲಸ ಮಾಡಿಕೊಟ್ಟು ಬೇರೆಯವರಿಗೆ ಮತ ಕೇಳಲು ಆಗುವುದಿಲ್ಲ ಎಂದು ತಿಳಿಸಿದರು.
ಈ ಭಾಗಕ್ಕೆ ನಾನು ನೀರು ಪೂರೈಸಿರುವ ಕಾರಣ ನಿಮ್ಮ ಭೂಮಿ ಬೆಲೆ ಚದರಡಿಗೆ 8-10 ಸಾವಿರ ಇದೆ. ನೀರು ಇಲ್ಲವಾಗಿದ್ದರೆ ನಿಮ್ಮ ಆಸ್ತಿ ಮೌಲ್ಯ 3-4 ಸಾವಿರ ಇನ್ನು ಕಡಿಮೆಯಾಗಿರುವುದು. ರಾಜಕಾರಣ ಐದು ವರ್ಷಕ್ಕೊಮ್ಮೆ ಬರುತ್ತದೆ. ನಾವು ಯಾವುದಕ್ಕೂ ಹಿಂದೆ ಮುಂದೆ ನೋಡದೇ ಈ ಭಾಗದ ಅನುಕೂಲವಾಗಲಿ ಎಂದು ಕೆಲಸ ಮಾಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಯಾರು ಕೆಲಸ ಮಾಡಿರುತ್ತಾರೋ ಅವರಿಗೆ ನೀವು ಸಹಕಾರ ನೀಡಬೇಕು.
ಇದನ್ನೂ ಓದಿ | Lok Sabha Election 2024: 10 ವರ್ಷದಲ್ಲಿ ಅಚ್ಚೇದಿನ್ ತರಲಾಗದವರು ಈಗ 23 ವರ್ಷ ಕೇಳುತ್ತಿರುವುದು ಹಾಸ್ಯಾಸ್ಪದ: ದಿನೇಶ್ ಗುಂಡೂರಾವ್
ಇಲ್ಲಿರುವ ನೀರಿನ ಬವಣೆಯನ್ನು ಬಗೆಹರಿಸುವ ಶಕ್ತಿ ದೇವರು ನಮಗೆ ನೀಡಿದ್ದು, ನೀವು ಆಶೀರ್ವಾದ ಮಾಡಬೇಕು. ನೀವು ಆಶೀರ್ವಾದ ಮಾಡಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕಿ ಕೊಡುತ್ತೇನೆ. ನಾನು ಕೆಲಸ ಮಾಡುತ್ತೇನೆ, ಕೆಲಸ ಮಾಡುವವರನ್ನು ಉಪಯೋಗಿಸಿಕೊಳ್ಳಿ. ಉಪಯೋಗಿಸಿಕೊಳ್ಳದೇ, ಅಪಪ್ರಚಾರಗಳಿಗೆ ಬಲಿಯಾಗಬೇಡಿ ಎಂದು ಹೇಳಿದರು.