ಬೆಂಗಳೂರು: ಕಾಂಗ್ರೆಸ್ ಶಾಸಕ ಹಾಗೂ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಟ್ವಿಟರ್ ಖಾತೆ ಹ್ಯಾಕ್ ಆಗಿದೆಯಾ? ಈ ಪ್ರಶ್ನೆಯನ್ನು ಟ್ವಿಟರ್‌ನಲ್ಲೇ ಒಬ್ಬರು ಕೇಳಿದ್ದಾರೆ.
ಅಷ್ಟಕ್ಕೂ ನಿಜವಾಗಿ ಪ್ರಿಯಾಂಕ್ ಖರ್ಗೆ ಟ್ವಿಟರ್ ಖಾತೆ ಹ್ಯಾಕ್ ಆಗಿಲ್ಲ. ಆದರೆ ಈ ರೀತಿ ಟ್ವಿಟರ್ ಬಳಕೆದಾರರು ಈ ರೀತಿ ಹೇಳಲು ಕಾರಣ ಇದೆ. ಅದೂ ಸಹ ಪ್ರಿಯಾಂಕ್ ಮಾಡಿರುವ ಒಂದು ಟ್ವೀಟ್.
ಇತ್ತೀಚೆಗೆ ವಾರಾಣಸಿಗೆ ಭೇಟಿ ನೀಡಿದ ಪ್ರಿಯಾಂಕ್ ಖರ್ಗೆ, ಅಲ್ಲಿನ ಫೋಟೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಅಂತಹ ಒಂದು ಫೋಟೊದಲ್ಲಿ, ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಪ್ರಿಯಾಂಕ್ ನಿಂತಿದ್ದಾರೆ. ಇಂಗ್ಲಿಷ್‌ನಲ್ಲಿ ಈ ಕುರಿತು ಬರೆದಿರುವ ಪ್ರಿಯಾಂಕ್ ಖರ್ಗೆ, “ಇತಿಹಾಸದ ಉದ್ದಕ್ಕೂ ಕಾಶಿಯು ತೋರಿದ ಪ್ರತಿರೋಧ ಗಮನೀಯವಾದದ್ದದು. ಕಾಶಿ ವಿಶ್ವನಾಥ್ ಕಾರಿಡಾರ್ ಅನ್ನು, ತೀರ್ಥಯಾತ್ರಿಗಳಿಗೆ ಅನುಗುಣವಾಗಿ ಅತ್ಯುತ್ತಮವಾಗಿ ರೂಪಿಸಲಾಗಿದೆ. ಸ್ವತಃ ಪ್ರಧಾನಿಯೇ ಇಲ್ಲಿನ ನೇತೃತ್ವ ವಹಿಸಿರುವಾಗ ನಗರದ ಮತ್ತಷ್ಟು ವೈಭವವನ್ನು ಕಾಣಬಹುದಾಗಿದೆ” ಎಂದಿದ್ದರು.
ಪ್ರಿಯಾಂಕ್ ಖರ್ಗೆ ಅವರ ಈ ಟ್ವೀಟ್ ಅನೇಕರನ್ನು ಅಚ್ಚರಿಗೆ ದೂಡಿದೆ. ಸದಾ ಬಿಜೆಪಿಯನ್ನು, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಕುರಿತು ಟೀಕೆ ಮಾಡುವ ಇವರು ಹೀಗೇಕೆ ಟ್ವೀಟ್ ಮಾಡಿದ್ದಾರೆ ಎಂದು ಅಚ್ಚರಿ ಪಟ್ಟಿದ್ದಾರೆ. ಇಲ್ಲಿವರೆಗೆ ಸುಮ್ಮನಿದ್ದು ಚುನಾವಣೆ ಸಮಯದಲ್ಲಿ ಹಿಂದು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದೀರ, ಇದು ರಾಜಕೀಯ ನಾಟಕ ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು, ಬಿಜೆಪಿ ಐಟಿ ಸೆಲ್ ಈ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದೆ ಎಂದು ಹಾಸ್ಯ ಮಾಡಿದ್ದಾರೆ. ಕಾಶಿ ಕುರಿತು ಪ್ರಿಯಾಂಕ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಮಣಿಕರ್ಣೀಕಾ ಘಾಟ್ ಚಿತ್ರ ಹಾಕಿರುವ ಪ್ರಿಯಾಂಕ್ ಖರ್ಗೆ, ಇಲ್ಲಿನ ದೃಶ್ಯ ಬಹಳ ಜಿಜ್ಞಾಸೆ ಹುಟ್ಟಿಸುತ್ತದೆ. ಇಲ್ಲಿನ ಅಗ್ನಿಯು ಮೊದಲನೇ ಶತಮಾನದಿಂದಲೂ ನಂದಿಲ್ಲ. ಇಲ್ಲಿ ಅಂತಿಮ ಸಂಸ್ಕಾರಕ್ಕೆ ಒಳಪಟ್ಟವರು ಶಿವನಲ್ಲಿ ಸೇರುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ. ಈ ಟ್ವೀಟ್ ಕುರಿತೂ ಅನೇಕರು ಅದೇ ರೀತಿಯ, ಕಾಲೆಳೆಯುವ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಸಂತಸವನ್ನೂ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಕರ್ನಾಟಕ ಕಾಂಗ್ರೆಸ್‌ಗೆ 27 ಮುಖ್ಯ ವಕ್ತಾರರು, 41 ವಕ್ತಾರರು !: ಜಂಬೊ ಸಮಿತಿ ಘೋಷಿಸಿದ ಪ್ರಿಯಾಂಕ್ ಖರ್ಗೆ