ಬೆಂಗಳೂರು: ಕರುನಾಡಿನಲ್ಲಿ ಇದೀಗ ಎಲೆಕ್ಷನ್ ಫೀವರ್. 2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಜನ ಯಾವ ಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರ ಹವಾ ಇದೆ? ವಲಯವಾರು ಯಾವ ರಿಸಲ್ಟ್ ಬರಬಹುದು? ಹೀಗೆ ಒಟ್ಟು 13 ಪ್ರಶ್ನೆಗಳನ್ನು ರಾಜ್ಯದ ಜನತೆಯ ಮುಂದಿಟ್ಟು ನಾಡಿಮಿಡಿತವನ್ನ ಅರಿಯುವ ಪ್ರಯತ್ನವನ್ನು ವಿಸ್ತಾರ ನ್ಯೂಸ್ ನಡೆಸಿದೆ. ಇದಕ್ಕಾಗಿ ವಿಸ್ತಾರ ನ್ಯೂಸ್, ರಾಜ್ಯದ ಪ್ರತಿಷ್ಟಿತ ಪೊಲಿಟಿಕಲ್ ಅನಾಲಿಸಿಸ್ ಸಂಸ್ಥೆಯಾದ ಅಖಾಡ ಜೊತೆಗೂಡಿ ರಾಜ್ಯದ ಮೂಲೆಮೂಲೆಗೆ ತೆರಳಿ ಸ್ಥಳೀಯರ ಪಲ್ಸ್ ಅರಿಯುವ ಕೆಲಸ ಮಾಡಿದೆ. ಇದುವೇ ಪಲ್ಸ್ ಆಫ್ ಕರ್ನಾಟಕ.
ಪಲ್ಸ್ ಆಫ್ ಕರ್ನಾಟಕ ಹಿಂದೆಂದೂ ಕರ್ನಾಟಕದಲ್ಲಿ ನಡೆದಿರದಂತಹ ಅತಿದೊಡ್ಡ ಸರ್ವೇ. ರಾಜ್ಯದ ಮೂಲೆಮೂಲೆಯಲ್ಲಿ ನಮ್ಮ 300ಕ್ಕೂ ಹೆಚ್ಚು ಸಿಬ್ಬಂದಿಯ ಜೊತೆಗೆ ಅಖಾಡದ ಅತಿದೊಡ್ಡ ತಂಡ ಮನೆಮನೆ ಬಾಗಿಲಿಗೆ ತೆರಳಿ ಸಂಗ್ರಹಿಸಿರೋ ಮಾಹಿತಿ ಇದು. ಕರುನಾಡಿನ ಜನರ ನಾಡಿಮಿಡಿತ ಅರಿಯಲು ಉದ್ಯಮಿಗಳು, ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಗಳ ಸಿಬ್ಬಂದಿ, ಮಹಿಳೆಯರು, ವಿದ್ಯಾರ್ಥಿಗಳು, ರೈತರು, ಹಿಂದುಳಿದ ವರ್ಗದ ಜನ, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗ, ಸಮುದಾಯವನ್ನು ಪ್ರತಿನಿಧಿಸಿ ಈ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಸ್ಥಳೀಯ, ಜಿಲ್ಲಾವಾರು, ರಾಜ್ಯ ಮತ್ತು ಕೇಂದ್ರ ನಾಯಕರು ಹೀಗೆ ಎಲ್ಲಾ ವಲಯ, ವಿಚಾರ, ನಾಯಕರಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಲಾಗಿದ್ದು, ನೂರಕ್ಕೆ ನೂರರಷ್ಟು ಯಶ ಪಡೆಯಲಾಗಿದೆ.
ಈ ಸರ್ವೇಯಲ್ಲಿ ಕರ್ನಾಟಕವನ್ನ ಭೌಗೋಳಿಕವಾಗಿ ಆರು ಭಾಗಗಳಾಗಿ ಗುರುತಿಸಲಾಗಿದೆ. ಅದರಲ್ಲಿ ಹಳೆ ಮೈಸೂರು, ಮಧ್ಯ ಕರ್ನಾಟಕ, ಕರಾವಳಿ & ಮಲೆನಾಡು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ವಲಯಗಳಾಗಿ ಗುರುತಿಸಿ ಅದರಡಿ ಬರೋ ವಿಧಾನಸಭಾ ಕ್ಷೇತ್ರಗಳ ಮತದಾರರ ಪಲ್ಸ್ ಅರಿತು ಆ ಸರ್ವೇ ರಿರ್ಪೋಟ್ ಅನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ. ಇದರ ಜೊತೆಗೆ ರಾಜಧಾನಿ ಬೆಂಗಳೂರಿನಲ್ಲೂ ಯಾರ ಹವಾ ಹೇಗಿದೆ ಅನ್ನೋದನ್ನ ನಿಮಗೆ ತಿಳಿಸಲಿದ್ದೇವೆ.
ಕಳೆದ ಬುಧವಾರ, ಗುರುವಾರ ಹಾಗೂ ಶುಕ್ರವಾರ ರಾಜ್ಯದ ವಿವಿಧ ಪ್ರಾಂತ್ಯಗಳ ಮತದಾರರ ನಾಡಿ ಮಿಡಿತವನ್ನು ನೋಡಿದ್ದೇವು. ಇದೀಗ ಬೆಂಗಳೂರು ನಗರ ಹಾಗೂ ಗ್ರಾಂತರದ ಜನತೆಯ ಪಲ್ಸ್ ಹೇಗಿದೆ ನೋಡೋಣ ಬನ್ನಿ
ಪ್ರಶ್ನೆ 1 – ಈಗ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಬಹುಮತ ನೀಡುತ್ತೀರಿ?
ಬೆಂಗಳೂರಿನ ಏಳು ಸಚಿವರು ಈಗಿನ ಸರ್ಕಾರದಲ್ಲಿದ್ದು, ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರು ಉಸ್ತುವಾರಿ ನೋಡಿಕೊಳ್ಳುತ್ತಿರುವುದಕ್ಕೆ ಜನರಿಂದ ಮನ್ನಣೆ ಸಿಕ್ಕಿದೆ ಎನ್ನಬಹುದು. ಸಂಚಾರ ದಟ್ಟಣೆಯು ಸಾಕಷ್ಟು ದೊಡ್ಡ ಸಮಸ್ಯೆಯೇ ಆಗಿದ್ದರೂ ಇತ್ತೀಚೆಗೆ ಉನ್ನತ ಮಟ್ಟದ ಐಪಿಎಸ್ ಅಧಿಕಾರಿಯನ್ನು ಸಂಚಾರ ವಿಭಾಗಕ್ಕೆ ನೇಮಿಸಿದಾಗಿನಿಂದ ಸಾಕಷ್ಟು ಸಮಸ್ಯೆ ಕಡಿಮೆಯಾಗಿದೆ. ಚುನಾವಣೆ ಹತ್ತಿರವಾದಂತೆ ಹಾಗೂ ಹೈಕೋರ್ಟ್ ಪದೇಪದೆ ಚಾಟಿ ಬೀಸಿದ ನಂತರ ಸಾಕಷ್ಟು ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಬೆಂಗಳೂರಿನ ಬಹಳಷ್ಟು ಕಡೆಗಳಲ್ಲಿ ಕಾಮಗಾರಿಗಳು ನಡೆಯುತ್ತಿರುವುದು, ಜನರಲ್ಲಿ ಆಶಾಭಾವನೆ ಮೂಡಿಸಿರಲೂ ಸಾಕು.
ಪ್ರಶ್ನೆ 2 – ನೀವು ಈ ಬಾರಿ ಮತ ಚಲಾಯಿಸಲು ಇವುಗಳಲ್ಲಿ ಅತಿಹೆಚ್ಚು ಪ್ರಾಮುಖ್ಯತೆ ನೀಡುವ ವಿಚಾರ ಯಾವುದು.?
ಬಿಜೆಪಿ ಹಾಗೂ ಕಾಂಗ್ರೆಸ್‌ನ ಅನೇಕ ಅಭ್ಯರ್ಥಿಗಳು ತಮ್ಮ ವರ್ಚಸ್ಸಿನ ಕಾರಣದಿಂದ ಗೆದ್ದು ಬರುವವರಿದ್ದಾರೆ. ಬಿಜೆಪಿಗೆ ಆಗಮಿಸಿದ ಭೈರತಿ ಬಸವರಾಜು, ಮುನಿರತ್ನ, ಕೆ. ಗೋಪಾಲಯ್ಯ ಅವರುಗಳೂ ವೈಯಕ್ತಿಕ ವರ್ಚಸ್ಸು ಉಳಿಸಿಕೊಂಡಿದ್ದಾರೆ. ಬಿಜೆಪಿಯ ಆರ್. ಅಶೋಕ್, ಡಾ. ಸಿ.ಎನ್. ಅಶ್ವತ್ಥನಾರಾಯಣ, ಎಸ್.ಆರ್. ವಿಶ್ವನಾಥ್ ಸೇರಿ ಅನೇಕರು, ಕಾಂಗ್ರೆಸ್‌ನ ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ ಅವರಂಥವರೂ ಪಕ್ಷಕ್ಕಿಂತಲೂ ದೊಡ್ಡ ಇಮೇಜ್ ಬೆಳೆಸಿಕೊಂಡಿದ್ದಾರೆ. ಆದ್ಧರಿಂದ ಪಕ್ಷಕ್ಕಿಂತಲೂ ಹೆಚ್ಚಾಗಿ ಅಭ್ಯರ್ಥಿಗೆ ಮತದಾರರು ಮಣೆ ಹಾಕಿದ್ದಾರೆ. ಮುಖ್ಯಮಂತ್ರಿ ಯಾರು ಆಗುತ್ತಾರೆ ಎನ್ನುವುದಕ್ಕಿಂತಲೂ, ತಮ್ಮ ದಿನನಿತ್ಯದ ಸಮಸ್ಯೆಗಳನ್ನು ಬಗೆಹರಿಸುವ, ತಮ್ಮ ಜತೆಗೆ ಒಡನಾಡುವ ಸ್ಥಳೀಯ ನಾಯಕನೇ ಮುಖ್ಯ ಎನ್ನುವುದು ಮತದಾರರ ಇಂಗಿತ ಎಂದು ಕಾಣುತ್ತಿದೆ.
ಪ್ರಶ್ನೆ 3 – ಈ ಚುನಾವಣೆಯಲ್ಲಿ ಯಾರಿಗೆ ಮತ ನೀಡಬೇಕು ಎಂಬುದನ್ನು ಇವುಗಳಲ್ಲಿ ಯಾವುದರ ಆಧಾರದಲ್ಲಿ ನಿರ್ಧಾರ ಮಾಡುತ್ತೀರಿ?
ಕರ್ನಾಟಕದ ಬೇರೆ ಭಾಗಗಳಿಗೆ ಹೋಲಿಕೆ ಮಾಡಿದರೆ ಅಭಿವೃದ್ಧಿಗೆ ಬೆಂಗಳೂರಿನ ಮತದಾರರು ಹೆಚ್ಚು ಒತ್ತು ನೀಡಿದ್ದಾರೆ. ಮುಖ್ಯವಾಗಿ ಮೂಲಸೌಕರ್ಯ ಅಭಿವೃದ್ಧಿ ಆದರೆ ಮಾತ್ರವೇ ತಮ್ಮ ಜೀವನ ಸುಧಾರಿಸುತ್ತದೆ ಎನ್ನುವುದನ್ನು ಮತದಾರರು ಮನಗಂಡಿದ್ದಾರೆ. ಆದರೆ ಕೆಲವು ಭಾಗಗಳಿಗಿಂತಲೂ ಹೆಚ್ಚಾಗಿ, ಧರ್ಮವನ್ನು ನೋಡಿ ಮತ ನೀಡುತ್ತೇವೆ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ. ಬಿಜೆಪಿಯ ಹಿಂದುತ್ವ ಅಜೆಂಡಾವು ಬೆಂಗಳೂರಿನಲ್ಲೂ ಸಾಕಷ್ಟು ಪ್ರಮಾಣದಲ್ಲಿ ಕ್ರಿಯಾಶೀಲವಾಗಿರುವುದು, ಕೋವಿಡ್ ಅವಧಿಯಲ್ಲಿ ಒಂದು ಸಮುದಾಯದ ವಿಚಾರವಾಗಿ ನಡೆದ ಹೆಚ್ಚಿನ ಚರ್ಚೆಗಳಿಂದಾಗಿ ಬಹುಸಂಖ್ಯಾಥ ಹಿಂದುಗಳಲ್ಲಿ ಧರ್ಮದ ಕುರಿತು ಆಸಕ್ತಿ ಹೆಚ್ಚಾಗಿರುವ ಸಾಧ್ಯತೆಯಿದೆ.
ಪ್ರಶ್ನೆ 4 – ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಕುರಿತು ನಿಮ್ಮ ಅಭಿಪ್ರಾಯ
ಬಿಜೆಪಿಗೇ ಮತ ನೀಡುತ್ತೇವೆ ಎಂದು ಈ ಹಿಂದಿನ ಪ್ರಶ್ನೆಗಳಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಹೇಳಿದ್ದಾರಾದರೂ ಬಿಜೆಪಿಯ ಆಡಳಿತದ ಮೇಲೆ ತೀರಾ ಸಂತಸಗೊಂಡಿಲ್ಲ ಎಂದು ಇದು ಸೂಚಿಸುತ್ತದೆ. ಅತ್ಯುತ್ತಮ ಎಂದು ಕೇವಲ ಅಂದಾಜು 20 ಪರ್ಸೆಂಟ್ ಮತದಾರರು ಹೇಳಿರುವುದು, ಬಿಜೆಪಿ ತನ್ನ ಸಾಂಪ್ರದಾಯಿಕ ಮತದಾರರ ಮನವನ್ನೂ ಪೂರ್ಣ ಗೆಲ್ಲಲಿಲ್ಲ ಎನ್ನುವುದನ್ನು ಸೂಚಿಸುವಂತಿದೆ. ಕಾಲು ಭಾಗದಷ್ಟು ಜನರು ಕಳಪೆ ಎಂದು ಹೇಳಿರುವುದು, ಬಹುಶಃ ಬಿಜೆಪಿ ವಿರೋಧಿ ಮತಗಳಿರಬಹುದು. ಕಾಂಗ್ರೆಸ್ ಮತದಾರರೂ ಬಿಜೆಪಿ ಸರ್ಕಾರದ ಆಡಳಿತಕ್ಕೆ ಉತ್ತಮ ಅಥವಾ ಸಾಮಾನ್ಯ ಎಂಬಷ್ಟು ಸಮಾಧಾನ ನೀಡಿರುವಂತೆ ಕಾಣುತ್ತಿದೆ.
ಪ್ರಶ್ನೆ 5 – ಈ 5 ವರ್ಷಗಳಲ್ಲಿ ನಿಮ್ಮ ಕ್ಷೇತ್ರದ ಶಾಸಕರ ಕಾರ್ಯ ನಿರ್ವಹಣೆ ತೃಪ್ತಿ ನೀಡಿದೆಯೇ?
ಬಿಬಿಎಂಪಿಯಲ್ಲಿ ಚುನಾವಣೆ ನಡೆಯದೇ ಇರುವ ಕಾರಣ ಕಾರ್ಪೊರೇಟರ್‌ಗಳ ಬದಲಿಗೆ ಶಾಸಕರೇ ನೇರವಾಗಿ ಜನರ ಸಂಪರ್ಕದಲ್ಲಿದ್ದಾರೆ. ಕೋವಿಡ್ ಸಮಯದಲ್ಲಿ ಬಹುತೇಕ ಶಾಸಕರು ಜನರ ನೆರವಿಗೆ ಧಾವಿಸಿದ್ದಾರೆ ಎನ್ನುವುದು, ಹೌದು ಹಾಗೂ ಪರವಾಗಿಲ್ಲ ಎಂದು ಹೇಳಿರುವವರ ಒಟ್ಟು ಪ್ರಮಾಣ ಹತ್ತಿರತ್ತಿರ 60 ಪರ್ಸೆಂಟ್ ಇರುವುದನ್ನು ನೋಡಿದರೆ ಕಂಡುಬಂದಿದೆ. ಮುಖ್ಯವಾಗಿ ಆಹಾರ ಧಾನ್ಯಗಳ ಸರಬರಾಜು, ಔಷಧಗಳ ವಿತರಣೆ, ಸ್ಯಾನಿಟೈಸಿಂಗ್ ಕುರಿತು ಎಲ್ಲ ಶಾಸಕರೂ ತಮ್ಮ ಕ್ಷೇತ್ರವನ್ನು ನಿಭಾಯಿಸಿದ್ದಾರೆ. ತೃಪ್ತಿ ತಂದಿಲ್ಲ ಎಂದು ಕಾಲು ಭಾಗದಷ್ಟು ಜನರು ಹೇಳಿದ್ದು, ಬಹುಶಃ ಕೋವಿಡ್ ಸಮಯದಲ್ಲಿ ಆಕ್ಸಿಜನ್ ಹಾಗೂ ಆಸ್ಪತ್ರೆ ಬೆಡ್‌ಗಾಗಿ ನಡೆದ ಪರದಾಟದಿಂದ ಜನರಿಗೆ ಬೇಸರ ಆಗಿರಬಹುದು.
ಪ್ರಶ್ನೆ 6 – ಮುಂದಿನ ಚುನಾವಣೆ ಬಳಿಕ ಯಾರು ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತೀರಿ?
ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಉಸ್ತುವಾರಿ ಆಗಿದ್ದರೂ ಬೆಂಗಳೂರಿನ ಮತದಾರರು ಸಿದ್ದರಾಮಯ್ಯ ಕುರಿತು ಒಲವು ಹೊಂದಿರುವುದು ಆಡಳಿತಾರೂಢ ಪಕ್ಷಕ್ಕೆ ನಿಜಕ್ಕೂ ಮುಖಭಂಗ ಎನ್ನಬಹುದು. ಸಿದ್ದರಾಮಯ್ಯ ಹಾಗೂ ಬಸವರಾಜ ಬೊಮ್ಮಾಯಿ ಇಬ್ಬರೂ ಬೆಂಗಳೂರಿನವರಲ್ಲದ ಕಾರಣ ಯಾರ ಮೇಲೆಯೂ ಮಮಕಾರದ ಅಭಿಪ್ರಾಯ ಇರಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಬಿಜೆಪಿ ಕುರಿತು ಉತ್ತಮ ಅಭಿಪ್ರಾಯವಿದ್ದರೂ ಬೊಮ್ಮಾಯಿ ಅವರ ಕುರಿತು ಅಷ್ಟು ಒಲವಿಲ್ಲದಿರುವುದು, ಅವರ ನಾಯಕತ್ವ ಗುಣವು ಜನರ ಮನಸ್ಸಿಗೆ ನಾಟಿಲ್ಲ ಎನ್ನುವುದನ್ನು ತೋರಿಸುತ್ತಿದೆ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿಯೂ, ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಜನಪ್ರಿಯತೆಯೂ ಸಿದ್ದರಾಮಯ್ಯ ಅವರಿಗಿಂತ ಕಡಿಮೆ ಇರುವುದು, ಸಿದ್ದರಾಮಯ್ಯ ಅವರ ನಾಯಕತ್ವ ಗುಣವನ್ನು ಸೂಚಿಸುತ್ತಿದೆ.
ಪ್ರಶ್ನೆ 7- ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಬಲ್ಲ ಕೇಂದ್ರದ ನಾಯಕ ಯಾರು?
ನಗರ ಪ್ರದೇಶವೂ ಹಾಗೂ ಮೆಟ್ರೋಪಾಲಿಟನ್ ನಗರವೂ ಆಗಿರುವುದರಿಂದ ಸಹಜವಾಗಿಯೇ ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚಾಗಿದೆ. ಇದೀಗ ಬಿಜೆಪಿಯೇ ಆಡಳಿತದಲ್ಲಿರುವುದರಿಂದ ಹಾಗೂ ಬಿಬಿಎಂಪಿಯ ಕಡೆಯ ಅವಧಿಯಲ್ಲಿ ಬಿಜೆಪಿ ಆಡಳಿತವನ್ನು ಜನರು ನೋಡಿರುವುದರಿಂದ ಆಡಳಿತ ವಿರೋಧಿ ಅಲೆಯಿದ್ದು, ಸಾಕಷ್ಟು ಜನರಿಗೆ ಕಾಂಗ್ರೆಸ್ ಕುರಿತು ಒಲವು ಇರುವಂತೆ ಕಾಣುತ್ತಿದೆ. ನಗರ ಪ್ರದೇಶದಲ್ಲಿ ಮೊದಲಿಗೆ ಹೆಜ್ಜೆ ಇಡುವ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಬೆಂಗಳೂರಿನಲ್ಲಿ ಸಮಾವೇಶವೊಂದನ್ನೂ ಮಾಡಿದ್ದರು. ಆದರೂ ಅವರ ಜನಪ್ರಿಯತೆ ಹೇಳಿಕೊಳ್ಳುವಷ್ಟಿಲ್ಲ. ಆದರೆ, ಎಐಸಿಸಿ ಅಧ್ಯಕ್ಷರೂ ಆಗಿರುವ ಕನ್ನಡಡಿಗ ಖರ್ಗೆ ಅವರನ್ನೂ ಮೀರಿಸಿ ಅರವಿಂದ ಕೇಜ್ರಿವಾಲ್ ನಾಯಕತ್ವ ಜನಪ್ರಿಯತೆ ಹೊಂದಿದ್ದಾರೆ.
ಪ್ರಶ್ನೆ 8 – ರಾಜ್ಯದಲ್ಲಿ ಸ್ಪಷ್ಟ ಬಹುಮತ ಬರದಿದ್ದರೆ ಯಾವ ಮೈತ್ರಿಕೂಟ ನಿಮಗಿಷ್ಟ?
ಸದ್ಯ ಬೆಂಗಳೂರಿನ 28 ಶಾಸಕರಲ್ಲಿ 15 ಬಿಜೆಪಿಯವರೇ ಇದ್ದಾರೆ ಹಾಗಾಗಿ ಮೈತ್ರಿಕೂಟಕ್ಕೆ ಬಿಜೆಪಿಯೇ ಹೆಚ್ಚು ಸೂಕ್ತ ಎಂಬ ಭಾವನೆ ವ್ಯಕ್ತವಾಗಿದೆ. ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಸರ್ಕಾರ ಸಾಕಷ್ಟು ಉತ್ತಮ ಕೆಲಸ ಮಾಡಿದ ನೆನಪು ಜನರಿಗೆ ಇರಬಹುದು. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಆದ ನಿರಂತರ ಗದ್ದಲಗಳ ಕಾರಣಕ್ಕೆ ಆ ಸಮ್ಮಿಶ್ರ ಸರ್ಕಾರ ಬೇಡ ಎಂದು ಅನೇಕರು ತಿಳಿಸಿರುವ ಸಾಧ್ಯತೆಯಿದೆ.
ಪ್ರಶ್ನೆ 9 – ಬಿಜೆಪಿಯವರು ಮತಕ್ಕಾಗಿ ಇವುಗಳಲ್ಲಿ ಯಾವ ಅಂಶವನ್ನು ನೆಚ್ಚಿಕೊಂಡಿದ್ದಾರೆ?
ನರೇಂದ್ರ ಮೋದಿ ಅಲೆಯು ಬೆಂಗಳೂರಿನಲ್ಲಿ ಹೆಚ್ಚಾಗಿರುವುದು, ಇತ್ತೀಚೆಗೆ ಪ್ರಧಾನಿ ಮೋದಿ ಬೆಂಗಳೂರಿಗೆ ಅನೇಕ ಬಾರಿ ಆಗಮಿಸಿರುವುದು ಪ್ರಭಾವ ಬೀರಿರಬಹುದು. ಇದೀಗ ಮತ್ತೂ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸುವ ಸರಣಿ ಕಾರ್ಯಕ್ರಮಗಳು ನಿಗದಿಯಾಗಿವೆ. ರಾಜ್ಯ ನಾಯಕತ್ವವನ್ನು ಬಿಜೆಪಿ ಲೆಕ್ಕಕ್ಕೆ ಇರಿಸಿಲ್ಲ ಎಂಬ ಕಾಂಗ್ರೆಸ್‌ನ ಪ್ರಚಾರಾಂದೋಲನವು ಮತದಾರರ ಮೇಲೆ ಪ್ರಭಾವ ಬೀರಿರುವ ಸಾಧ್ಯತೆಯಿದೆ, ಹಾಗಾಗಿಯೇ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರಿಗಿಂತಲೂ ಸಿದ್ದರಾಮಯ್ಯ ಹೆಚ್ಚು ಜನಪ್ರತಿಯವಾಗಿದ್ದಾರೆ ಎನ್ನುವುದು ಈ ಹಿಂದಿನ ಪ್ರಶನೆಯಿಂದ ತಿಳಿದುಬಂದಿದೆ.
ಪ್ರಶ್ನೆ 10 – 40% ಕಮಿಷನ್ ಅಥವಾ ಭ್ರಷ್ಟಾಚಾರ ಆರೋಪ ಬಿಜೆಪಿಗೆ ಹಿನ್ನಡೆ ತರುತ್ತಾ?
ರಾಜ್ಯದ ಇತರ ಕಡೆಗಳಲ್ಲಿ ಇರುವಷ್ಟು ತೀವ್ರವಾಗಿ 40 ಪರ್ಸೆಂಟ್ ಕಮಿಷನ್ ವಿಚಾರ ಜನರಿಗೆ ಪ್ರಭಾವ ಬೀರಿಲ್ಲ ಎನ್ನುವುದು ವಿಶೇಷವಾಗಿದೆ. 40 ಪರ್ಸೆಂಟ್ ಕಮಿಷನ್, ಪೇಸಿಎಂ ಸೇರಿ ಕಾಂಗ್ರೆಸ್‌ನ ಅನೇಕ ವಿಚಾರಗಳು ಬೆಂಗಳೂರು ಕೇಂದ್ರಿತವಾಗಿಯೇ ನಡೆದರೂ ಬೇರೆ ಭಾಗದಲ್ಲಿರುವಷ್ಟು ಪ್ರಮಾಣದಲ್ಲಿ ಬಿಜೆಪಿ ಸರ್ಕಾರದ ಕುರಿತು ಆಕ್ರೋಶ ಜನರಲ್ಲಿ ಇರುವಂತೆ ಕಾಣುತ್ತಿಲ್ಲ. ಆದರೂ 40 ಪರ್ಸೆಂಟ್ ಜನರು ಬಿಜೆಪಿಗೆ ಈ ವಿಚಾರ ತೊಂದರೆ ಉಂಟು ಮಾಡುತ್ತದೆ ಎಂದು ಹೇಳಿರುವುದು ಆಡಳಿತಾರೂಢ ಪಕ್ಷಕ್ಕೆ ಎಚ್ಚರಿಕೆ ಘಂಟೆ ಎಂದೇ ಹೇಳಬಹುದು.
ಪ್ರಶ್ನೆ 11 – ಕಾಂಗ್ರೆಸ್ ಒಳಜಗಳ ಚುನಾವಣೆಯ ವೇಳೆ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಾ?
ಕಾಂಗ್ರೆಸ್‌ನ ಒಳಜಗಳದ ಕುರಿತು ಜನರು ಹೆಚ್ಚು ಆಲೋಚನೆ ಮಾಡುತ್ತಿರುವುದನ್ನು ಕಾಣಬಹುದು. ಕಾಂಗ್ರೆಸ್‌ನ ಎರಡು ಬಣಗಳು ಪ್ರತಿಭಟನೆ ವೇಳೆಯೂ ಅನೇಕ ಬಾರಿ ಪರಸ್ಪರರಿಂದ ದೂರ ಉಳಿದಿರುವುದನ್ನು ಮತದಾರರು ಕಂಡಿರಬಹುದು. ಯಾವುದೇ ಪಕ್ಷದ ಭಿನ್ನಾಭಿಪ್ರಾಯವರು ಆ ಪಕ್ಷಕ್ಕೆ ತೊಂದರೆ ನೀಡುತ್ತದೆ ಎನ್ನುವುದು ಸತ್ಯವಾಗಿದ್ದು, ಇಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಪ್ರಬಲ ನಾಯಕರೇ ಆಗಿರುವಾಗ ಪರಿಣಾಮ ಬೀರುತ್ತದೆ ಎಂದು ಮತದಾರರು ಭಾವಿಸಿರುವುದರಲ್ಲಿ ಅಚ್ಚರಿಯೇನಿಲ್ಲ.
ಪ್ರಶ್ನೆ 12 – ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಗಳಿಂದ ಮತ ಸೆಳೆಯಲು ಸಾಧ್ಯವೇ?
ಹೆಚ್ಚಾಗಿ ದುಡಿಯುವ ವರ್ಗ ಹಾಗೂ ಅಭಿವೃದ್ಧಿಗೆ ಒತ್ತು ನೀಡುವ ಮತದಾರರಿರುವ ಕಾರಣ ಉಚಿತ ಘೋಷಣೆಗಳ ಕಡೆಗೆ ಅಷ್ಟಾಗಿ ಆಸಕ್ತಿಯನ್ನು ತೋರಿಸಿಲ್ಲ. ನಗರ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗಾವಕಾಶಗಳೂ ಇರುವುದರಿಂದ, ಉಚಿತ ಕೊಡುಗೆಗಳ ಕುರಿತು ಅಷ್ಟಾಗಿ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ. ಆದರೂ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ನಗರ ಬಡವರು ಇರುವುದು, ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಕೆಳ ಮಧ್ಯಮ ವರ್ಗವು ಒಂದಷ್ಟು ಉಚಿತ ಯೋಜನೆಗಳ ಕಡೆಗೆ ಆಶಾ ಭಾವನೆಯಿಂದ ನೋಡುತ್ತಿರುವಂತೆ ರಿಪೋರ್ಟ್ ಹೇಳುತ್ತಿದೆ.
ಪ್ರಶ್ನೆ 13 – ರಸ್ತೆ ಗುಂಡಿ, ಮೂಲ ಸೌಕರ್ಯ ಕೊರತೆ ಈ ಬಾರಿಯ ಚುನಾವಣೆಯ ಮೇಲೆ ಪರಿಣಾಮ ಬೀರಬಲ್ಲವೇ?
ದಿನನಿತ್ಯ ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುವ ಮತದಾರರಿಗೆ ಮೂಲಸೌಕರ್ಯಕ್ಕಿಂತ ಹೆಚ್ಚಿನ ಸೌಲಭ್ಯ ಇನ್ನೊಂದಿಲ್ಲ ಎನ್ನುವಂತೆ ಕಾಣುತ್ತಿದೆ. ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗಿ ದೋಣಿಗಳ ಮೂಲಕ ಪರಿಹಾರ ಕಾರ್ಯಾಚರಣೆಯನ್ನು ಕಂಡಿರುವ ಬೆಂಗಳೂರಿಗರಿಗೆ ಮೂಲ ಸೌಕರ್ಯ ಒದಗಿಸಿಕೊಡುವುದೇ ಸರ್ಕಾರದ ಆದ್ಯ ಕರ್ತವ್ಯ ಎನ್ನುವಷ್ಟು ಮನಸ್ಸಿನಲ್ಲಿ ವಿಚಾರ ನಾಟಿದೆ ಎನ್ನುವುದು ಕಾಣುತ್ತಿದೆ. ಮುಂದಿನ ಚುನಾವಣೆಯಲ್ಲಿ ಬೆಂಗಳೂರಿಗರಿಗೆ ಯಾವ ವಿಚಾರಗಳು ಮುಖ್ಯವಾಗುತ್ತವೆ ಎಂಬ ಸಂದೇಶವನ್ನೂ ಈ ರಿಪೋರ್ಟ್ ನೀಡುತ್ತಿದೆ.