ಬೆಂಗಳೂರು: ಕಾಂಗ್ರೆಸ್ ವತಿಯಿಂದ ಸೋಮವಾರ ಆಯೋಜನೆ ಮಾಡಲಾಗಿರುವ ಫ್ರೀಡಂ ಮಾರ್ಚ್ ಕಾರ್ಯಕ್ರಮಕ್ಕೆ ಸಂಬಂಧಿಸಿ ಅಳವಡಿಸಿದ್ದ ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹರಿದ ಆರೋಪದಲ್ಲಿ ಹಿಂದೂ ಪರ ಸಂಘಟನೆಯ ಪುನೀತ್ ಕೆರೆಹಳ್ಳಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಶಿವಪ್ಪನಾಯಕ ಮಾಲ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೊಟೊಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಭಾವಚಿತ್ರವನ್ನು ಅಳವಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಎಸ್‌ಡಿಪಿಐ ಸಂಘಟನೆ ಕಾರ್ಯಕರ್ತರು ಅದನ್ನು ತೆರವುಗೊಳಿಸುವಂತೆ ಹೇಳಿದ್ದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕ ಮನೆಮಾಡಿತ್ತು. ಸಾವರ್ಕರ್ ಭಾವಚಿತ್ರ ಬೇಡ ಎಂದರೆ ಟಿಪ್ಪು ಸುಲ್ತಾನ್ ಭಾವಚಿತ್ರ ಬೇಡ ಎಂದು ಬೆಂಗಳೂರಿನ ಹಡ್ಸನ್ ವೃತ್ತದಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಫ್ಲೆಕ್ಸ್ ಅನ್ನು ಪುನೀತ್ ಕೆರೆಹಳ್ಳಿ ಹಾಗೂ ಸಂಗಡಿಗರು ಹರಿದಿದ್ದರು ಎಂದು ಆರೋಪಿಸಲಾಗಿದೆ.
ಈ ಕುರಿತು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕುರಿತು ಹಲಸೂರು ಗೇಟ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಗರದ ಹೊರವಲಯದ ನೆಲಗದರನಹಳ್ಳಿಯಲ್ಲಿರುವ ಚಿಕ್ಕಪ್ಪನ ಮನೆಯಿಂದ ಪುನೀತ್ ಕೆರೆಹಳ್ಳಿಯನ್ನು ಬಂಧಿಸಲಾಗಿದೆ. ಫ್ಲೆಕ್ಸ್ ಹರಿದ ನಂತರ ಫೋನ್ ಆನ್ ಮಾಡಿಟ್ಟುಕೊಂಡಿದ್ದ ಪುನೀತ್, ತುಮಕೂರಿನವರೆಗೆ ತೆರಳಿ ಅಲ್ಲಿ ಫೋನ್ ಸ್ವಿಚ್ಡ್ ಆಫ್ ಮಾಡಿದ್ದ. ಆನಂತರ ಬೆಂಗಳೂರು ಕಡೆಗೆ ವಾಪಸಾಗಿ, ನೆಲಗದರನಹಳ್ಳಿಗೆ ತೆರಳಿದ್ದಾನೆ.
ಫೋನ್ ಟವರ್ ಹಿಂಬಾಲಿಸಿದ ಪೊಲೀಸರು, ಸಾವರ್ಕರ್ ಫೋಟೊ ವಿವಾದವಾಗಿದ್ದ ಶಿವಮೊಗ್ಗಕ್ಕೆ ಹೋಗಿರಬಹುದು ಎಂದು ಭಾವಿಸಿದ್ದರು. ಆದರೆ ಮೂಲಗಳಿಂದ ಮಾಹಿತಿ ಪಡೆದು ನೆಲಗದರನಹಳ್ಳಿಗೆ ಧಾವಿಸಿದ್ದಾರೆ. ಪೊಲೀಸರನ್ನು ದಾರಿ ತಪ್ಪಿಸಲು ಪುನೀತ್ ಹೀಗೆ ಮಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಸತ್ಯನಾರಾಯಣ ಪೂಜೆಯಲ್ಲಿ ಭಾಗಿ
ನೆಲಗದರನಹಳ್ಳಿಗೆ ಪೊಲೀಸರು ತೆರಳಿದಾಗ, ತಾನು ಸತ್ಯನಾರಾಯಣ ಪೂಜೆಯಲ್ಲಿರುವುದಾಗಿ ಪುನೀತ್ ಹೇಳಿದ್ದಾನೆ. ಪೂಜೆ ಮುಗಿಸಿ ಬರುವುದಾಗಿ ತಿಳಿಸಿದ್ದು, ಸುಮಾರು ಒಂದು ಗಂಟೆ ಪೊಲೀಸರು ಕಾದಿದ್ದಾರೆ. ಪೂಜೆ ಮುಗಿದ ನಂತರ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ. ಪುನೀತ್ ಕೆರೆಹಳ್ಳಿ ಜತೆಗೆ ಅನಂತ ರಾವ್, ಕುಮಾರ್ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಇಬ್ಬರ ಬಂಧನಕ್ಕೆ ಶೋಧ ನಡೆಯುತ್ತಿದೆ. ವಶಕ್ಕೆ ಪಡೆದ ಮೂವರನ್ನೂ ಬೌರಿಂಗ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಸಾವಿರ ಬಾರಿ ಜೈಲಿಗೆ ಹೋಗಲು ಸಿದ್ಧ
ಪೊಲೀಸರು ಬಂಧಿಸಿ ಕರೆದೊಯ್ಯುವ ವೇಳೆ ಪ್ರತಿಕ್ರಿಯಿಸಿರುವ ಪುನೀತ್ ಕೆರೆಹಳ್ಳಿ, ವೀರ ಸಾವರ್ಕರ್‌ಗಾಗಿ ಇನ್ನೂ ಸಾವಿರ ಬಾರಿ ಜೈಲಿಗೆ ಹೋಗಲು ಸಿದ್ಧವಾಗಿದ್ದೇವೆ. ನಾವು ಟಿಪ್ಪು ಸುಲ್ತಾನ್ ಫೋಟೊ ಕಿತ್ತ ಕಡೆಗಳಲ್ಲಿ ಕಾಂಗ್ರೆಸ್‌ನವರು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಫೋಟೊ ಹಾಕಿದ್ದಾರೆ, ಇದು ಸಂತೋಷದ ವಿಚಾರ ಎಂದು ಪ್ರತಿಕ್ರಿಯಿಸಿದ್ದಾನೆ.
ಇದನ್ನೂ ಓದಿ | ಶಿವಮೊಗ್ಗ ಸಾವರ್ಕರ್ ಫೋಟೊ ವಿವಾದ: ಕನ್ನಡಿಗರ ರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಡಿ ಷರೀಫ್ ಬಂಧನ