Site icon Vistara News

R Ashok : ಸರ್ಕಾರಕ್ಕೆ ಬುದ್ಧಿ ಬರಲು ಇನ್ನೆಷ್ಟು ಬಾಂಬ್‌ ಬ್ಲಾಸ್ಟ್‌ ಆಗಬೇಕು; ಆರ್‌ ಅಶೋಕ್‌ ಪ್ರಶ್ನೆ

R Ashok Bangalore Blast

ಬೆಂಗಳೂರು: ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ (Minority Community) ಮನಸ್ಸನ್ನು ಪೂರ್ತಿ ಕಲ್ಮಶ ಮಾಡುತ್ತಿದೆ. ನೀವು ನಮಗೆ ಮತ ಹಾಕಿದರೆ ಸಾಕು, ಏನು ಬೇಕಾದರೂ ಮಾಡಬಹುದು ಎಂಬ ಮನೋಸ್ಥಿತಿಯನ್ನು ನಿರ್ಮಾಣ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok) ಅವರು ಅವರು ವಿಶ್ಲೇಷಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಸರಕಾರ (Congress Government) ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಬಾಂಬ್ ಬ್ಲಾಸ್ಟ್ ಆಗಬೇಕು? (How many Blasts required?) ಈ ಸರಕಾರ ಯಾಕೆ ಕಣ್ಮುಚ್ಚಿ ಕುಳಿತಿದೆ? ಯಾರನ್ನು ಓಲೈಸುತ್ತಿದೆ? ಎಫ್‍ಎಸ್‍ಎಲ್ ವರದಿ ಬಿಡುಗಡೆ ಮಾಡದೆ ಇರಲು ಸರಕಾರದ ಮೇಲೆ ಸೋನಿಯಾ ಗಾಂಧಿ- ರಾಹುಲ್ ಗಾಂಧಿಯವರ ಒತ್ತಡ ಇದೆಯೇ? ಎಂದು ಪ್ರಶ್ನೆಗಳನ್ನು ಮುಂದಿಟ್ಟರು.

ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಮುಖ್ಯಮಂತ್ರಿ ಮಾತ್ರವಲ್ಲ ಇಡೀ ಸರಕಾರ ರಾಜೀನಾಮೆ ಕೊಟ್ಟರೆ ಮಾತ್ರ ಜನತೆಗೆ ಶಾಂತಿ- ನೆಮ್ಮದಿಯ ಭರವಸೆ ಲಭಿಸಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಹೇಳಿದರು.

ಅಲ್ಪಸಂಖ್ಯಾತರು ತಮಗೆ ಮತ ಹಾಕಿದರೆ ಸಾಕು; ಬಹುಸಂಖ್ಯಾತರನ್ನು ಬಗ್ಗು ಬಡಿಯುತ್ತೇವೆ ಎಂಬ ನೀತಿ ಕಾಂಗ್ರೆಸ್ ಪಕ್ಷದ್ದು ಎಂದು ಅವರು ತಿಳಿಸಿದರು. ನೀವೇನಾದರೂ ಮಾಡಿ; ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ಗಲಭೆ ಮಾಡಿ. ಮೈಸೂರಿನಲ್ಲಿ ಅವರ ಶಾಸಕರ ಹತ್ಯೆ ಪ್ರಯತ್ನ ಮಾಡಿದರೂ ಏನೂ ಮಾಡುವುದಿಲ್ಲ ಎಂಬ ಕರ್ನಾಟಕದ ಕಾಂಗ್ರೆಸ್ ಮನಸ್ಥಿತಿ ಗಂಡಾಂತರ ತರುವಂತಿದೆ ಎಂದು ಆಕ್ಷೇಪ ಸೂಚಿಸಿದರು.

ಇದನ್ನೂ ಓದಿ: Blast in Bengaluru: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಕೇಸ್‌; ಅಗತ್ಯ ಬಿದ್ರೆ ಎನ್‌ಐಎಗೆ ವಹಿಸುತ್ತೇವೆ ಎಂದ ಸಿಎಂ

ಕಾಂಗ್ರೆಸ್‌ ಆಡಳಿತದಲ್ಲಿ ಇಲಿಗಳೂ ಹುಲಿಗಳಾಗಿವೆ!

ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದಕರೆಂಬ ಇಲಿಗಳು ಬಿಲಕ್ಕೆ ಬಂದು ಹುಲಿಗಳಾಗಿವೆ. ನಮ್ಮನ್ನೇನೂ ಮಾಡುವುದಿಲ್ಲ ಎಂಬ ಮನಸ್ಥಿತಿ ಭಯೋತ್ಪಾದಕರದ್ದಾಗಿದೆ. ಇದು ದೊಡ್ಡ ಆಘಾತ ತಂದಿದೆ ಎಂದು ವಿವರಿಸಿದರು. ಸರಕಾರವು ಅವರ ಬಗ್ಗೆ ಸಹಾನುಭೂತಿ ತೋರುವುದು ಆಘಾತಕಾರಿ ವಿಚಾರ ಎಂದು ತಿಳಿಸಿದರು.

ರಾಜ್ಯ ಸರಕಾರವು ಕೋಮುವಾದದ ಕಡೆ ವಾಲುತ್ತಿದೆ. ರಾಜ್ಯ ಕಾಂಗ್ರೆಸ್ ಸರಕಾರದಿಂದ ಅಲ್ಪಸಂಖ್ಯಾತರ ಓಲೈಕೆಯ ಪ್ರವೃತ್ತಿ ಮುಂದುವರೆದಿದೆ. ಅಲ್ಪಸಂಖ್ಯಾತರ ಬಗ್ಗೆ ಬರುವ ವಿಷಯಗಳನ್ನು ಕಾಂಗ್ರೆಸ್ಸಿಗರು ನಿರಂತರವಾಗಿ ಮುಚ್ಚಿಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ದಾರಿ ತಪ್ಪಿಸಲು ಯತ್ನಿಸುತ್ತಿರುವ ಡಿ.ಕೆ. ಶಿವಕುಮಾರ್‌, ಪ್ರಿಯಾಂಕ್‌ ಖರ್ಗೆ, ಗುಂಡೂರಾವ್‌

ಬಾಂಬ್ ಸ್ಫೋಟದ ಆರೋಪಿಗಳನ್ನು ಅಮಾಯಕರು, ಮೈ ಬ್ರದರ್ಸ್ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದು ಟೀಕಿಸಿದರು. ವಿಧಾನಸೌಧದಲ್ಲಿ ಕೆಲದಿನಗಳ ಹಿಂದೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ. ‘ಆ ರೀತಿ ಹೇಳಿಲ್ಲ; ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ‘ಫಾರೆನ್ಸಿಕ್ ವರದಿಯಲ್ಲಿ ಹಾಗೆ ಆಗಿಲ್ಲ ಎಂದು ಬರಲಿದೆ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಮಾಧ್ಯಮಗಳು ‘ಘೋಷಣೆ ಕೂಗಿದ್ದು ನಿಜ’ ಎಂದು ಪ್ರಕಟಿಸಿದರೂ ಕಾಂಗ್ರೆಸ್‍ನವರು ಅದನ್ನು ಮುಚ್ಚಿಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಆಗಿದೆ. ಆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಹೋಗಿ, ‘ಇದು ಬಿಸಿನೆಸ್ ರೈವಲ್ರಿ; ತಿಂಡಿ ವಿಚಾರದಲ್ಲಿ ಒಳಜಗಳ’ ಎಂದಿದ್ದರು. ಈಗ ಅದು ಭಯೋತ್ಪಾದಕರ ಕೃತ್ಯ ಎಂದು ಗೊತ್ತಾಗಿದೆ. ಆದರೂ ಅದನ್ನು ಮುಚ್ಚಿಡುತ್ತಿದ್ದಾರೆ ಎಂದು ಟೀಕಿಸಿದರು.

ಟಿಕೆಟ್‌ ಕೊಡೋದು ಹೈಕಮಾಂಡ್‌ ಎಂದ ಆರ್‌ ಅಶೋಕ್‌

ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿರುವ ಹಿರಿಯ ನಾಯಕ ವಿ. ಸೋಮಣ್ಣ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಬಗ್ಗೆ ಕೇಳಿದಾಗ, ʻʻಸೋಮಣ್ಣ ಅವರು ಫೋನ್ ಮಾಡಿದ್ರು. ಹೋಗಿ ಭೇಟಿಯಾಗಿ ಮನಸ್ಸಲ್ಲಿ‌ ಇರೋದನ್ನ ಹೇಳಿಕೊಳ್ಳಿ ಎಂದಿದ್ದೆ. ವಿ.ಸೋಮಣ್ಣ‌ ತುಮಕೂರಿಗೆ ಕೇಳಿದಾರೆ. ಜನರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಆದರೆ, ಅಂತಿಮ ತೀರ್ಮಾನ ಮಾಡುವುದು, ಟಿಕೆಟ್ ಕೊಡೋದು ಹೈಕಮಾಂಡ್ʼʼ ಎಂದರು.

ಬಾಂಬ್‌ ಬೆಂಗಳೂರು: ಡಿಕೆಶಿ ಕಿಡಿಗೆ ಅಶೋಕ್‌ ತಿರುಗೇಟು

ಬೆಂಗಳೂರನ್ನು ಬ್ರಾಂಡ್‌ ಬೆಂಗಳೂರು ಬದಲು ಬಾಂಬ್‌ ಬೆಂಗಳೂರು ಮಾಡಲಾಗುತ್ತಿದೆ ಎಂಬ ಬಿಜೆಪಿ ಟ್ವೀಟ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅದಕ್ಕೆ ತಿರುಗೇಟು ನೀಡಿದ ಆರ್‌ ಅಶೋಕ್‌ ಅವರು, ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಅಮೆರಿಕ, ಮಂಡ್ಯ, ಬೆಳಗಾವಿಯಲ್ಲಿ ಆಗಿಲ್ಲ. ಬೆಂಗಳೂರಲ್ಲಿ ಆಗಿದ್ದಕ್ಕೆ ಬಾಂಬ್ ಬೆಂಗಳೂರು ಅಂದಿದೀನಿ. ಡಿಕೆಶಿ ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರೆ, ಆದ್ರೆ ಅದು ಬಾಂಬ್ ಬೆಂಗಳೂರು ಆಗ್ತಿದೆ. ಅದನ್ನೇ ನಾನು ಹೇಳಿರೋದುʼʼ ಎಂದು ಆರ್‌ ಅಶೋಕ್‌ ನುಡಿದರು.

ಕಾಂಗ್ರೆಸ್‌ ಸರ್ಕಾರ ಟ್ರ್ಯಾಕ್ ತಪ್ಪಿದೆ. ಸಿದ್ದರಾಮಯ್ಯ ಅವಧಿ ಮುಗೀತಾ ಬಂದಿದೆ. ಮುಂದೆ ಯಾರು ಬರ್ತಾರೆ, ಸರ್ಪ್ರೈಸ್ ಗಿರಾಕಿ ಬರ್ತಾರಾ..? ಇವರೇ ಮುಂದುವರೀತಾರಾ ಏನೋ ಗೊತ್ತಿಲ್ಲ ಎಂದು ಆರ್‌. ಅಶೋಕ್‌ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದರು.

Exit mobile version