ಬೆಂಗಳೂರು: ರೇಬಿಸ್ ರೋಗಕ್ಕೆ (Rabies disease) ತುತ್ತಾಗಿ ಆಸ್ಪತ್ರೆಯಲ್ಲಿ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದ ಯುವಕನೊಬ್ಬ ತನ್ನ ಪ್ರೇಯಸಿಗೆ ವಿಡಿಯೊ ಕಾಲ್ ಮಾಡಿ, ಮಾತನಾಡುತ್ತಲೇ ಜೀವ ಬಿಟ್ಟಿದ್ದಾನೆ.
ಬೆಂಗಳೂರು ಗ್ರಾಮಾಂತರದ ನೆಲಮಂಗಲ ನಿವಾಸಿ ಕಿರಣ್ (22) ಮೃತ ದುರ್ದೈವಿ. ಕಿರಣ್ ರೇಬಿಸ್ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಹೀಗಾಗಿ ನಗರದ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರೇಬಿಸ್ ಉಲ್ಬಣಗೊಂಡು ತೀವ್ರ ಅಸ್ವಸ್ಥಗೊಂಡಿದ್ದ ಕಿರಣ್, ತಾನಿನ್ನೂ ಬದುಕುವುದಿಲ್ಲ ಎಂದು ತಿಳಿದು ಪ್ರಿಯತಮೆಗೆ ವಿಡಿಯೊ ಕಾಲ್ ಮಾಡಿದ್ದಾನೆ.
ಆಸ್ಪತ್ರೆಯ ಬೆಡ್ ಮೇಲೆ ಮಲಗಿಯೇ ವಿಡಿಯೊ ಮಾಡಿದ್ದ ಕಿರಣ್, ನಾನಿನ್ನು ಹೆಚ್ಚು ದಿನಗಳು ಬದುಕುವುದಿಲ್ಲ. ಇನ್ನೊಟ್ಟಿಗೆ ಬದುಕುವ ಅದೃಷ್ಟ ನನಗಿಲ್ಲ. ನಿಮ್ಮ ತಂದೆ ಹೇಳಿದಂತೆ ಕೇಳು. ಅವರು ತೋರುವ ಹುಡುಗನನ್ನು ಮದುವೆ ಆಗು, ನಿನಗೆ ಹುಟ್ಟುವ ಮಗುವಿಗೆ ನನ್ನ ಹೆಸರಿಡು ಪ್ಲೀಸ್ ಎಂದಿದ್ದ. ನನ್ನ ಅಂತ್ಯಕ್ರಿಯೆಗೆ ನೀನು ಬಂದು ಹೋಗಲೇ ಬೇಕು ಎಂದು ಹೇಳಿ ಗೆಳತಿಗೆ ಕೈ ಮುಗಿಯುತ್ತಲೇ ಪ್ರಾಣ ಬಿಟ್ಟಿದ್ದಾನೆ. ಈ ಘಟನೆ ಆಸಗ್ಟ್ 9ರಂದೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಾಲ್ಗೆಜ್ಜೆ ಕೂಡಿಸಿದ್ದ ಕಿರಣ್
ಕಿರಣ್ ತಾನು ಪ್ರೀತಿಸಿದ್ದ ಯುವತಿಗೆ ಉಂಗುರ ಹಾಗೂ ಕಾಲ್ಗೆಜ್ಜೆಯನ್ನು ಕೂಡಿಸಿದ್ದ ಎನ್ನಲಾಗಿದೆ. ಈ ವಿಷಯ ತಿಳಿದ ಯುವತಿ ತಂದೆ ಪ್ರೀತಿಯನ್ನು ನಿರಾಕರಿಸಿ, ಬೈದು ಬುದ್ಧಿ ಹೇಳಿದ್ದರಂತೆ. ಆದರೆ ಇತ್ತ ಕಿರಣ್ ಕುಟುಂಬಸ್ಥರು ನನ್ನ ಮಗನಿಗೆ ಯುವತಿ ಕುಟುಂಬಸ್ಥರೇ ಏನೋ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಯುವಕ ರೇಬಿಸ್ ಕಾಯಿಲೆ ಉಲ್ಬಣಗೊಂಡು ಆಸ್ಪತ್ರೆ ಸೇರಿದ್ದ ಎಂದು ಹೇಳಲಾಗುತ್ತಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ