ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ (Rajakaluve Encroachment) ಮೂರನೇ ದಿನಕ್ಕೆ ಕಾಲಿಟ್ಟಿದೆ. ಬುಲ್ಡೋಜರ್ ಆಪರೇಷನ್‌ನ 3ನೇ ಹಂತಕ್ಕೆ ಕಂದಾಯ ಇಲಾಖೆಗೆ ಜೆಸಿಬಿ ಮತ್ತು ಸರ್ವೇಯರ್ ಕೊರತೆ ಎದುರಾಗಿದ್ದು ತೆರವು ಕಾರ್ಯಾಚರಣೆಗೆ ಭಾರಿ ಹಿನ್ನಡೆ ಆಗಿದೆ.
ಸರ್ವೇಯರ್ಸ್ ಕಡಿಮೆ ಇರುವುದರಿಂದ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಕೆಲಸ ಕುಂಟುತ್ತಾ ಸಾಗಿದೆ. ಈಗಾಗಲೇ 100ಕ್ಕೂ ಹೆಚ್ಚು ಮನೆಗಳಿಗೆ ನೋಟಿಸ್ ಜಾರಿ ಮಾಡಿರುವ ಕಂದಾಯ ಇಲಾಖೆ, ಮನೆ ಖಾಲಿ ಮಾಡುವಂತೆ ಮೌಖಿಕ ಸೂಚನೆ ನೀಡಿದ್ದಾರೆ.
ಮಾರ್ಕಿಂಗ್ ಜಾಗದಲ್ಲಿ ಜೆಸಿಬಿ ಗರ್ಜನೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯ ವ್ಯಾಪ್ತಿಯ ಶಾಂತಿನಿಕೇತನ ಲೇಔಟ್, ಸ್ಪೈಸಿ ಗಾರ್ಡನ್, ಪಾಪಯ್ಯ ರೆಡ್ಡಿ ಲೇಔಟ್ ಹಾಗೂ ಚೆಲ್ಲಘಟ್ಟದ ಬಳಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದೆಂದು ಮಹದೇವಪುರ ವಲಯದ ಮುಖ್ಯ ಅಭಿಯಂತರರಾದ ಬಸವರಾಜ ಕಬಾಡೆ ರವರು ತಿಳಿಸಿದ್ದಾರೆ. ಮಂಗಳವಾರ ಮಹದೇವಪುರ ವಲಯ ಹಾಗೂ ಯಲಹಂಕ ವಲಯ ಸೇರಿದಂತೆ ಒಟ್ಟು 18 ಒತ್ತುವರಿಗಳನ್ನು ತೆರವುಗೊಳಿಸಲಾಗಿತ್ತು.
ಒತ್ತುವರಿ ಜಾಗದಲ್ಲಿ ಪ್ರತಿಷ್ಠಿತರ ಬಿಲ್ಡಿಂಗ್ ಇದ್ದರೆ ಡೋಂಟ್ ಟಚ್ !
ಪ್ರಭಾವಿಗಳ ಜಾಗದಲ್ಲಿ ಒತ್ತುವರಿ ಆಗಿದ್ದರೆ ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಇಲ್ಲದ ಸಬೂಬುಗಳನ್ನು ಹೇಳಿ ಕಾಲಹರಣ ಮಾಡುತ್ತಿರುವುದಾಗಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಜತೆಗೆ ಡೆಮಾಲಿಷನ್‌ಗೆ ಜೆಸಿಬಿ ಕೊರತೆ ಇರುವುದಾಗಿ ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ಡಬಲ್ ಸ್ಟಾಂಡ್ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.
ಮಂಗಳವಾರ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಒಡೆತನದ ನಲಪಾಡ್ ಅಕಾಡೆಮಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡದೇ ಹೈಡ್ರಾಮಾ ನಡೆದಿತ್ತು. ಸಂಜೆವರೆಗೂ ಅಕಾಡೆಮಿ ಒಳಗೆ ಹೋಗಲು ಹಿಂದೇಟು ಹಾಕಿದ್ದ ಅಧಿಕಾರಿಗಳು, ಬುಧವಾರ ಬೆಳಗ್ಗೆಯೇ ಕೆಲಸ ಶುರು ಮಾಡುವುದಾಗಿ ಹೇಳಿದ್ದರು.
ಮೃದುಧೋರಣೆ ಯಾಕೆ?
ತೆರವು ಕಾರ್ಯಾಚರಣೆ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರನ್ನು ಪ್ರಶ್ನಿಸಿದರೆ ಸಮರ್ಪಕ ಮಾಹಿತಿ ನೀಡದೇ ಜಾರಿಕೊಂಡಿದ್ದಾರೆ. ಬಾಗ್‌ಮನೆ ಟೆಕ್‌ಪಾರ್ಕ್ ಹಿಂದೆ ಪೂರ್ವಂಕರ ಇದ್ದು, ಅವರು ನಾಲೆಗೆ ಗೋಡೆ ಕಟ್ಟಿದ್ದಾರೆ. ಗೋಡೆ ಒಡೆದರೆ ಆ ಪ್ರದೇಶ ಸಂಪೂರ್ಣ ಪ್ರವಾಹ ಎದುರಾಗುತ್ತೆ. ಹಾಗಾಗಿ ಸಮಯ ಕೊಡಿ ನಾವೇ ತೆರವು ಮಾಡುತ್ತೇವೆ ಎಂದಿದ್ದಾರೆ. ಹಾಗಾಗಿ ಬಾಗ್‌ಮನೆ ತೆರವು ನೋಡಿಕೊಂಡು ಮಾಡಿ ಎಂದು ಹೇಳಿದ್ದೇವೆ ಎಂದು ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಮಹಾದೇವಪುರ ಅಥವಾ ಬೊಮ್ಮನಹಳ್ಳಿ ವಲಯ ಮಾತ್ರವಲ್ಲದೇ ಬೇರೆ ವಲಯದಲ್ಲೂ ಕಾರ್ಯಾಚರಣೆ ಆರಂಭ ಮಾಡುವುದಾಗಿ ಮಾಹಿತಿ ನೀಡಿದ್ದಾರೆ. ಸರ್ವೆಯರ್‌ಗಳು ಎಲ್ಲಾ ಮಾರ್ಕಿಂಗ್ ಪ್ಲ್ಯಾನ್ ಮಾಡುತ್ತಿದ್ದು, ಶೀಘ್ರದಲ್ಲೆ ಬೇರೆ ವಲಯದಲ್ಲಿ ತೆರವು ಕಾರ್ಯಾಚರಣೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.
ಒತ್ತಡಕ್ಕೆ ಮಣಿಯುವುದಿಲ್ಲ
ನಲಪಾಡ್ ಅಕಾಡೆಮಿ ತೆರವು ಕಾರ್ಯಾಚರಣೆ ವಿಚಾರದಲ್ಲಿ ನಾವು ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ ತೆರವು ಕಾರ್ಯಾಚರಣೆ ಮಾಡುತ್ತೇವೆ ಎಂದರು. ಐಟಿ ಕಂಪನಿಗಳಿಂದ ಮುಖ್ಯಮಂತ್ರಿಗಳಿಗೆ ಪತ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಸುಳ್ಳು. ಯಾವುದೇ ರೀತಿಯ ಬೇಧಭಾವ ಮಾಡಿಲ್ಲ, ನಾನು ಸರ್ಕಾರ ಕೈ ಕೆಳಗಡೆ ಕೆಲಸ ಮಾಡುವ ಅಧಿಕಾರಿ. ಸರ್ಕಾರಕ್ಕೆ ಮನವಿ ಮಾಡಿದರೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಇದನ್ನೂ ಓದಿ | Rajakaluve Encroachment | ಬಡವರ ಮನೆ ಮೇಲೆ ಬಿಬಿಎಂಪಿ ಸಿಂಹ ಗರ್ಜನೆ; ಪ್ರಭಾವಿಗಳಿಗೆ ಮೃದು ಧೋರಣೆ!