Site icon Vistara News

Rajakaluve Encroachment | 9ನೇ ದಿನ ಒತ್ತುವರಿ ತೆರವು ಕಾರ್ಯಾಚರಣೆ; ಒಂದಂತಸ್ತಿನ ಕಟ್ಟಡ ನೆಲಸಮ

ಬೆಂಗಳೂರು: ಬಿಬಿಎಂಪಿ ಹಾಗೂ ಕಂದಾಯ ಅಧಿಕಾರಿಗಳಿಂದ ೯ನೇ ದಿನದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ (Rajakaluve Encroachment) ಅಂತ್ಯವಾಗಿದೆ. ಗುರುವಾರ ಬಿಬಿಎಂಪಿ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಿಕೊಂಡಿದ್ದ, 1 ಮತ್ತು 4 ಅಂತಸ್ತಿನ ಕಟ್ಟಡವನ್ನು ನೆಲಸಮ ಮಾಡಲಾಯಿತು.

ಮುನ್ನೇನಕೊಳಲು ಬಳಿಯ ಶಾಂತಿನಿಕೇತನ ಲೇಔಟ್‌ನಲ್ಲಿ ಒಂದು ಅಂತಸ್ತಿನ ಕಟ್ಟಡ(G +1)ವನ್ನು ರಾಜಕಾಲುವೆ ಮೇಲೆ ನಿರ್ಮಾಣ ಮಾಡಲಾಗಿತ್ತು. ಮನೆಯಲ್ಲಿ ವಾಸವಿದ್ದವರಿಗೆ ಕೂಡಲೇ ಮನೆಯನ್ನು ಖಾಲಿ ಮಾಡಲು ಕಂದಾಯ ಇಲಾಖೆಯ ತಹಸೀಲ್ದಾರ್ ನೋಟಿಸ್ ನೀಡಿದ್ದರು. ಅದರಂತೆ ಮನೆ ಖಾಲಿ ಮಾಡಿದ್ದರಿಂದ ಗುರುವಾರ ಹಿಟಾಚಿಯ ಬ್ರೇಕರ್ ಮೂಲಕ ಸಂಪೂರ್ಣ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.

ಮತ್ತೊಂದು ಕಡೆ ಪಾಪಯ್ಯ ರೆಡ್ಡಿ ಲೇಔಟ್‌ನಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದ 4 ಅಂತಸ್ತಿನ ಕಟ್ಟಡ(G +4)ಕ್ಕೆ ಸಂಬಂಧಿಸಿ ಈ ಮೊದಲು ಕಾಂಪೌಂಡ್ ಅನ್ನು ಒಡೆಯಲಾಗಿತ್ತು. ಆ ವೇಳೆ ಮನೆಯಲ್ಲಿ ವಾಸವಿರುವವರಿಗೆ ಬೇರೆಡೆ ಸ್ಥಳಾಂತರವಾಗಲು ನೋಟಿಸ್ ನೀಡಲಾಗಿತ್ತು. ಆ ಬಳಿಕ ಕಟ್ಟಡ ಮುಂಭಾಗದ ಕೆಲಭಾಗವನ್ನು ಗುರುವಾರ ತೆರವುಗೊಳಿಸಲಾಯಿತು.

ಮುನ್ನೇನಕೊಳಲು, ಪಾಪಯ್ಯ ರೆಡ್ಡಿ ಲೇಔಟ್‌ನಲ್ಲಿ 4 ಅಂತಸ್ತಿನ ಕಟ್ಟಡ ತೆರವು ಕಾರ್ಯಾಚರಣೆಯ ವೇಳೆ ಮಹದೇವಪುರ ವಲಯ ಆಯುಕ್ತ ಡಾ. ತ್ರಿಲೋಕ್ ಚಂದ್ರ, ವಲಯ ಜಂಟಿ ಆಯುಕ್ತರಾದ ವೆಂಕಟಾಛಲಪತಿ, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ ಉಪಸ್ಥಿತರಿದ್ದರು.

ಈ ವೇಳೆ ವಲಯ ಆಯುಕ್ತ ತ್ರಿಲೋಕ್ ಚಂದ್ರ ಮಾತನಾಡಿ, ಶಾಂತಿನಿಕೇತನ ಹಾಗೂ ಪಾಪಯ್ಯ ರೆಡ್ಡಿ ಲೇಔಟ್‌ನಲ್ಲಿ ಸುಮಾರು 500 ಮೀಟರ್ ನಷ್ಟು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಬಾಕಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅದಕ್ಕಾಗಿ ಅವಶ್ಯಕ ಯಂತ್ರೋಪಕರಣಗಳು ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ತ್ವರಿತವಾಗಿ ಕಾರ್ಯನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು. ಅಲ್ಲದೆ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿರುವ ಸ್ಥಳಗಳಲ್ಲಿ ಬೃಹತ್ ಮಳೆ ನೀರುಗಾಲುವೆ ನಿರ್ಮಾಣ ಮಾಡಲು ಅಗತ್ಯ ಕ್ರಮಗಳ್ನು ಕೈಗೊಳ್ಳಲು ಸೂಚನೆ ನೀಡಿದರು.

ಇದನ್ನೂ ಓದಿ | Encroachment Drive | ರಸ್ತೆ ಒತ್ತುವರಿ ಮಾಡಿ ಮನೆ ಕಟ್ಟಿದ್ರು; ಸರ್ಕಾರಿ ಜಾಗವಿದು ಬಿಡಿ ಎಂದ್ರು ಅಧಿಕಾರಿಗಳು

Exit mobile version