ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ (Rajyasabha Election) ಬಿಜೆಪಿಯ ಅಧಿಕೃತ ಅಭ್ಯರ್ಥಿಗೆ ಮತ ಹಾಕದೆ ಕಾಂಗ್ರೆಸ್ ಅಭ್ಯರ್ಥಿಗೆ ಅಡ್ಡ ಮತದಾನ ಮಾಡಿದ ಮಾಜಿ ಸಚಿವ, ಯಶವಂತಪುರದ ಶಾಸಕ ಎಸ್.ಟಿ ಸೋಮಶೇಖರ್ (ST Somashekhar) ವಿರುದ್ಧ ಬಿಜೆಪಿ ಕಾರ್ಯಕರ್ತರ (BJP Activists protest) ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ಕಾರ್ಯಕರ್ತರು ಹಲವು ಕಡೆ ಅವರ ಪ್ರತಿಕೃತಿಗೆ ಚಪ್ಪಲಿ ಏಟು ನೀಡಿದ್ದಲ್ಲದೆ, ಬೆಂಕಿ ಹಚ್ಚಿ ತಮ್ಮ ಸಿಟ್ಟನ್ನು ಪ್ರದರ್ಶಿಸಿದ್ದಾರೆ.
ಪ್ರಮುಖವಾಗಿ ಬೆಂಗಳೂರಿನ ಯಶವಂತಪುರದಲ್ಲಿ ಬಿಜೆಪಿ ಕಚೇರಿಯ ಎದುರು, ಅವರ ಮನೆಯ ಹತ್ತಿರ ಮತ್ತು ಜೆಡಿಎಸ್ ಕಚೇರಿ ಜೆಪಿ ಭವನದ ಮುಂಭಾಗ ಪ್ರತಿಭಟನೆ ನಡೆದಿದೆ. ಜೆಡಿಎಸ್ ಕೂಡಾ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದೆ.
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗಾಗಿ ನಡೆದ ಚುನಾವಣೆಗೆ ಕಾಂಗ್ರೆಸ್ ಮೂವರು, ಬಿಜೆಪಿ ಒಬ್ಬರು ಮತ್ತು ಎನ್‌ಡಿಎ ಕಡೆಯಿಂದ ಒಬ್ಬ ಅಭ್ಯರ್ಥಿಯನ್ನು ನಿಲ್ಲಿಸಲಾಗಿತ್ತು. ಬಿಜೆಪಿ ಶಾಸಕರಾಗಿರುವ ಎಸ್.ಟಿ ಸೋಮಶೇಖರ್ ಅವರು ಅಧಿಕೃತ ಬಿಜೆಪಿ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಅವರಿಗೆ ಮತ ಹಾಕಲು ವಿಪ್ ಪಡೆದಿದ್ದರು. ಆದರೆ, ಅದನ್ನು ಧಿಕ್ಕರಿಸಿ ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿ ಜಿ.ಸಿ. ಚಂದ್ರಶೇಖರ್ ಅವರಿಗೆ ಮತ ಹಾಕಿದ್ದರು. ಇನ್ನೊಬ್ಬ ಬಿಜೆಪಿ ಬಂಡುಕೋರ ಶಿವರಾಮ ಹೆಬ್ಬಾರ್ ಅವರು ಮತದಾನದಿಂದಲೇ ದೂರ ಉಳಿದಿದ್ದರು.
ಎಸ್.ಟಿ. ಸೋಮಶೇಖರ್ ವಿರುದ್ಧ ಭುಗಿಲೆದ್ದ ಆಕ್ರೋಶ
ಎಸ್.ಟಿ. ಸೋಮಶೇಖರ್ ಅವರು ಕಳೆದ ಹಲವಾರು ತಿಂಗಳುಗಳಿಂದಲೇ ಬಿಜೆಪಿಯಲ್ಲಿ ಬಂಡುಕೋರರಾಗಿ ಕಾಣಿಸಿಕೊಂಡಿದ್ದರು. ಕಾಂಗ್ರೆಸ್ ಜತೆಗೇ ಹೆಚ್ಚು ಗುರುತಿಸಿಕೊಂಡಿದ್ದರು. ಬಿಜೆಪಿಯ ಯಾವುದೇ ಸಭೆ, ಸಮಾರಂಭಗಳಲ್ಲಿ ಭಾಗವಹಿಸದೆ, ಅದೇ ಹೊತ್ತಿಗೆ ನಡೆಯುವ ಕಾಂಗ್ರೆಸ್ ಸರ್ಕಾರದ, ಪಕ್ಷದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಬಿಜೆಪಿ ಜತೆಗಿನ ಸಂಬಂಧ ಹಳಸಿದ್ದರೂ ಅದನ್ನು ಸರಿಪಡಿಸಿಕೊಳ್ಳುವ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿ ನಡೆದಿರಲಿಲ್ಲ. ಅಥವಾ ಪಕ್ಷದಿಂದ ಕ್ರಮವನ್ನೂ ಕೈಗೊಂಡಿರಲಿಲ್ಲ. ಇದೆಲ್ಲದರ ಫಲ ಈಗ ರಾಜ್ಯಸಭಾ ಚುನಾವಣೆಯಲ್ಲಿ ಕಾಣಿಸಿಕೊಂಡಿದೆ.
ಎಸ್.ಟಿ. ಸೋಮಶೇಖರ್ ಅವರು ಅಡ್ಡ ಮತದಾನ ಮಾಡಿದ್ದು ತಿಳಿಯುತ್ತಿದ್ದಂತೆಯೇ ಯಶವಂತಪುರದ ಬಿಜೆಪಿ ಕಾರ್ಯಕರ್ತರು ಸಿಡಿದೆದ್ದಿದ್ದರು. ಇದನ್ನು ಗಮನಿಸಿದ ಪೊಲೀಸರು ಸೋಮಶೇಖರ್ ಅವರ ಮನೆಗೆ ಬಿಗಿ ಭದ್ರತೆಯನ್ನು ಒದಗಿಸಿದ್ದರು.
ಇದನ್ನೂ ಓದಿ : Rajyasabha Election : ತಾಯಿಗೇ ದ್ರೋಹ ಮಾಡಿದ್ರು; ಎಸ್‌ಟಿಎಸ್, ಹೆಬ್ಬಾರ್ ವಿರುದ್ಧ ಅಶೋಕ್ ಆಕ್ರೋಶ
ಈ ನಡುವೆ ಯಶವಂತಪುರದ ಬಿಜೆಪಿ ಕಚೇರಿಯ ಎದುರು ಸೇರಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಯಶವಂತಪುರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ರಸ್ತೆಯಲ್ಲಿ ಸೋಮಶೇಖರ್ ಪ್ರತಿಕೃತಿಯನ್ನು ಸುಟ್ಟು ಹಾಕಿದರು. ಅವರಿಗೆ ಧಿಕ್ಕಾರ ಕೂಗಿದರು. ಧಿಕ್ಕಾರ ಎಂದು ಬರೆದ ಪ್ಲಕಾರ್ಡ್‌ಗಳನ್ನು ಪ್ರದರ್ಶಿಸಿದರು.
ಜೆಡಿಎಸ್ ಕಚೇರಿ ಇರುವ ಜೆಪಿ ಭವನದ ಮುಂದೆ ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಅಡ್ಡ ಮತದಾನ ಮಾಡಿದ ಎಸ್ ಟಿ ಎಸ್ ವಿರುದ್ಧ ಧಿಕ್ಕಾರ ಕೂಗಲಾಯಿತು. ಎಸ್ ಟಿ ಎಸ್ ಪ್ರತಿಕೃತಿಗೆ ಬೆಂಕಿ ಹಚ್ಚಿ , ಚಪ್ಪಲಿಯಲ್ಲಿ ಹೊಡೆಯಲಾಯಿತು. ಪ್ರತಿಕೃತಿಯನ್ನು ಕಾಲಲ್ಲಿ ಜಾಡಿಸಿ ಜಾಡಿಸಿ ಒದ್ದು ತಮ್ಮ ಆಕ್ರೋಶವನ್ನು ತೋರ್ಪಡಿಸಿದರು. ಕೃಷ್ಣ ಫ್ಲೋರ್ ಮಿಲ್ ಬಳಿ ಆಗಮಿಸಿದ ಪೊಲೀಸರು ಎಲ್ಲರನ್ನು ಬಂಧಿಸಿದರು.