ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ (Rajyasabha Election) ಅಡ್ಡ ಮತದಾನ (Cross Voting) ನಡೆಸಿದ್ದಾರೆ ಎನ್ನಲಾದ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ (ST Somashekhar) ವಿರುದ್ಧ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (HD Kumaraswamy) ಕೆಂಡಾಮಂಡಲರಾಗಿದ್ದಾರೆ. ಎಸ್.ಟಿ. ಸೋಮಶೇಖರ್ ಅವರಿಗೆ ಎನ್.ಡಿ.ಎ ಅಭ್ಯರ್ಥಿ ಕುಪೇಂದ್ರ ರೆಡ್ಡಿ (Kupendra Reddy) ಅವರಿಗೆ ಮತದಾನ ಮಾಡಲು ಸೂಚಿಸಲಾಗಿತ್ತು ಎನ್ನಲಾಗಿದೆ. ಆದರೆ, ಅವರು ಪಕ್ಷದ ವಿಪ್‌ನ್ನು ಉಲ್ಲಂಘಿಸಿ ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿ ಜಿ.ಸಿ ಚಂದ್ರಶೇಖರ್ ಅವರಿಗೆ ಮತ ಹಾಕಿದ್ದಾರೆ ಎಂದು ಹೇಳಲಾಗಿದೆ. ಸೋಮಶೇಖರ್ ಅವರ ಈ ನಡೆಯನ್ನು ಮೊದಲೇ ಊಹಿಸಿದ್ದ ಎಚ್.ಡಿ ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಏಸ್.ಟಿ. ಸೋಮಶೇಖರ್ ಒಬ್ಬ ಅವಕಾಶವಾದಿ. ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಮಂತ್ರಿಯಾದ ಅವರು ಈಗ ತಿರುಗಿಬಿದ್ದು ಕಾಂಗ್ರೆಸ್ ಜತೆ ಸೇರಿಕೊಂಡಿದ್ದಾರೆ. ಇದು ಅವಕಾಶವಾದಿ ಧೋರಣೆ ಎಂದು ಎಚ್.ಡಿ ಕುಮಾರಸ್ವಾಮಿ ಅವರು ನೇರವಾಗಿ ದಾಳಿ ನಡೆಸಿದರು.
ಚುನಾವಣೆಯಲ್ಲಿ ಮತ ಹಾಕುವ ಮೊದಲು ಎಸ್.ಟಿ ಸೋಮಶೇಖರ್ ಅವರು ಬಹಿರಂಗವಾಗಿ ಮಾತನಾಡಿದ್ದರು. ಯಾರು ಕ್ಷೇತ್ರಕ್ಕೆ ಅನುದಾನ ಕೊಡುತ್ತೇನೆ ಎಂದು 100% ಗ್ಯಾರಂಟಿ ಕೊಡುತ್ತಾರೋ ಅವರಿಗೆ ಮತ ಹಾಕುತ್ತೇನೆ. ಹಿಂದೆ ಬಿಜೆಪಿಗೆ ಮತ ಹಾಕಿದ ಕೊಟ್ಟ ಭರವಸೆಗಳು ಯಾವುದೂ ಈಡೇರಿಲ್ಲ ಎಂದೆಲ್ಲ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ವಿಪ್‌ನ್ನು ಕೇರ್ ಮಾಡಲ್ಲ, ಶಿಸ್ತು ಕ್ರಮಕ್ಕೆ ಸೊಪ್ಪು ಹಾಕಲ್ಲ ಎಂದು ಹೇಳುವ ಮೂಲಕ ತಾನು ಕಾಂಗ್ರೆಸ್‌ಗೇ ಮತ ಹಾಕುವುದು ಎಂದು ಸ್ಪಷ್ಟಪಡಿಸಿದ್ದರು. ಇದನ್ನು ಗಮನಿಸಿಯೇ ಎಚ್.ಡಿ ಕುಮಾರಸ್ವಾಮಿ ಅವರು ಸಿಡಿದುಬಿದ್ದಿದ್ದರು.
ಇದನ್ನೂ ಓದಿ : Rajyasabha Election : ಎಸ್ ಟಿ ಸೋಮಶೇಖರ್ ಅಡ್ಡ ಮತದಾನ; ಕಾಂಗ್ರೆಸ್‌ಗೆ ಮತ ಹಾಕಿದ ಬಿಜೆಪಿ ಶಾಸಕ!
ಎಚ್.ಡಿ.ಕೆ. ವಿರುದ್ಧ ಸೋಮಶೇಖರ್ ಕೂಡಾ ವಾಗ್ದಾಳಿ
ಈ ನಡುವೆ, ಎಸ್.ಟಿ. ಸೋಮಶೇಖರ್ ಕೂಡಾ ಎಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ಕೆಂಡ ಕಾರಿದ್ದಾರೆ. ನನ್ನನ್ನು ಅವಕಾಶವಾದಿ ಎಂದು ಹೇಳುವ ನೀವು ಅವಕಾಶವಾದಿ ಅಲ್ವಾ ಎಂದು ಕೇಳಿದ್ದಾರೆ. ನೀವು ಕೇವಲ 39 ಶಾಸಕರನ್ನು ಇಟ್ಟುಕೊಂಡು 77 ಕಾಂಗ್ರೆಸ್ ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿ ಆಗಿಲ್ಲವೇ ಎಂದು ಅವರು ಕೇಳಿದ್ದಾರೆ. ನೀವು ಮಾಡಿದರೆ ರಾಜಕಾರಣ, ನಾವು ಮಾಡಿದರೆ ಅವಕಾಶವಾದಿ ಅಂತಾನಾ ಎಂದು ನೇರವಾಗಿ ಕೇಳಿದ್ದಾರೆ.
ನಿಜವೆಂದರೆ, ಬಿಜೆಪಿ ನಿಗದಿಪಡಿಸಿದ ಮತಗಳ ಪ್ರಕಾರ, ಎಸ್.ಟಿ. ಸೋಮಶೇಖರ್ ಅವರು ಎನ್‌ಡಿಎ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಮತ ಹಾಕಬೇಕಾಗಿತ್ತು. ಆದರೆ, ಅವರು ಅಡ್ಡ ಮತದಾನ ಮಾಡಿದ್ದು ಕುಮಾರಸ್ವಾಮಿ ಅವರನ್ನು ಕೆರಳುವಂತೆ ಮಾಡಿದೆ.
ಬಿಜೆಪಿಗೆ ಶಾಕ್ ನೀಡಿರುವ ಎಸ್.ಟಿ. ಸೋಮಶೇಖರ್ ಅವರ ಬಗ್ಗೆ ಪಕ್ಷದ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ. ಈಗಾಗಲೇ ಹಲವು ಬಾರಿ ಪಕ್ಷದ ನಿಲುವುಗಳನ್ನು ಮುರಿದಿರುವ ಸೋಮಶೇಖರ್ ಅವರು ಈಗ ಪಕ್ಷದ ವಿಪ್ ಉಲ್ಲಂಘನೆ ಮೂಲಕ ದಾಖಲೆಗೆ ಸಿಗುವ ಪಕ್ಷ ವಿರೋಧಿ ಧೋರಣೆ ತೋರಿದ್ದಾರೆ. ಇದರ ಆಧಾರದಲ್ಲಿ ಅವರ ವಿರುದ್ಧ ಕೈಗೊಳ್ಳುವ ಸಾಧ್ಯತೆಗಳಿವೆ.