ಬೆಂಗಳೂರು: ರಾಜ್ಯಸಭಾ ಚುನಾವಣೆಗೆ (Rajyasabha Election) ಸಂಬಂಧಿಸಿ ಅತಿ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಬಿಜೆಪಿಯಿಂದ ಗೆದ್ದ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ (ST Somashekhar) ಅವರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಥವಾ ಮೈತ್ರಿ ಅಭ್ಯರ್ಥಿಗೆ ಮತ ಹಾಕುವ ಬದಲು ಕಾಂಗ್ರೆಸ್ ನ ಮೂರನೇ ಅಭ್ಯರ್ಥಿಗೆ (Congress Candidate) ಮತ ಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಬಿಜೆಪಿಯ ಚುನಾವಣಾ ಏಜೆಂಟ್ ಆಗಿರುವ ಸುನಿಲ್ ಕುಮಾರ್ ಅವರು ಕೂಡಾ ಇದನ್ನು ಸ್ಪಷ್ಟಪಡಿಸಿದ್ದಾರೆ.
ಅವರು ಮತದಾನಕ್ಕೆ ಹೋಗುವ ಮೊದಲು ಮಾತನಾಡಿದಾಗ ಹಲವು ಸುಳಿವುಗಳನ್ನು ನೀಡಿದರು. ಮತ್ತು ಮತ ಹಾಕಿದ ಬಳಿಕ ಬಿಜೆಪಿ ನಾಯಕರ ಬಳಿ ಹೋಗದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೋಣೆಗೆ ಹೋಗಿದ್ದು ಎಲ್ಲವನ್ನೂ ಸ್ಪಷ್ಟಪಡಿಸಿದೆ.
ಯಾರು ನನ್ನ ಕ್ಷೇತ್ರಕ್ಕೆ ಅನುದಾನ ನೀಡುತ್ತೇನೆ ಎಂದು 100% ಗ್ಯಾರಂಟಿ ನೀಡುತ್ತಾರೋ ಅವರಿಗೆ ಮತ ಹಾಕುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಹಾಗೇ ಮಾಡುತ್ತೇನೆ. ವಿಪ್ ಇನ್ನೊಂದು ಮತ್ತೊಂದು ಯಾವುದನ್ನೂ ಕ್ಯಾರೇ ಮಾಡೋಲ್ಲ.. ವಿಪ್ ಅದ್ರು ಜಾರಿ ಮಾಡ್ಲಿ ನನ್ನ ಕಿತ್ತು ಹಾಕ್ಲಿ ನನ್ನ ಕ್ಷೇತ್ರಕ್ಕೆ ಯಾರು ಸಹಾಯ ಮಾಡ್ತಾರೆ ಅವರಿಗೆ ವೋಟ್ ಎಂದು ಎಸ್.ಟಿ. ಸೋಮಶೇಖರ್ ಮತದಾನಕ್ಕೆ ಮುನ್ನ ಸ್ಪಷ್ಟವಾಗಿ ಹೇಳಿದ್ದರು.
ಇದನ್ನೂ ಓದಿ : Rajyasabha Election : ಗೆಲ್ಲುವ ವಿಶ್ವಾಸ ಇಲ್ಲದೆ ಇದ್ರೆ ನಾನು ನಿಲ್ತಿದ್ನಾ?; ಕುಪೇಂದ್ರ ರೆಡ್ಡಿ ಮಾತಿನ ಅರ್ಥವೇನು?
ಎಸ್.ಟಿ. ಸೋಮಶೇಖರ್ ಕಿಡಿ ನುಡಿಗಳು ಇಲ್ಲಿವೆ
ರಾಜ್ಯಸಭಾ ಚುನಾವಣೆಯಲ್ಲಿ ಮತ ಹಾಕಲು ವಿಧಾನಸೌಧಕ್ಕೆ ಆಗಮಿಸಿದ ಎಸ್.ಟಿ ಸೋಮಶೇಖರ್ ಖಾರವಾದ ಮಾತುಗಳನ್ನು ಆಡಿದ್ದಾರೆ.
- ನಮ್ಮ ಕ್ಷೇತ್ರಕ್ಕೆ ಸಹಾಯ ಮಾಡ್ತೀನಿ ಅಂತ ಫ್ರಾಮಿಸ್ ಮಾಡಿದ್ರೆ ಮಾತ್ರ ಮತ ಹಾಕುತ್ತೇನೆ. ಮತದಾನ ಮಾಡೋದಿಲ್ಲ ಅಂತ ನಾನು ಹೇಳುವುದಿಲ್ಲ. ನನ್ನ ಕಂಡಿಷನ್ ಯಾರು ಒಪ್ಪಿಕೊಳ್ತಾರೆ ಅವರಿಗೆ 100% ಮತ ಹಾಕ್ತೀನಿ.
- ವಿಪ್ ಆದ್ರೂ ಜಾರಿ ಮಾಡ್ಲಿ ನನ್ನ ಕಿತ್ತು ಹಾಕ್ಲಿ ನನ್ನ ಕ್ಷೇತ್ರಕ್ಕೆ ಯಾರು ಸಹಾಯ ಮಾಡ್ತಾರೆ ಅವರಿಗೆ ವೋಟ್.
- ಪ್ರತಿ ಸಲ ಹೇಳಿ ಹೇಳಿ ಮತ ಹಾಕಿಸಿಕೊಳ್ತಾರೆ. ಆದರೆ ಕ್ಷೇತ್ರಕ್ಕೆ ಯಾವುದೇ ಸಹಾಯ ಮಾಡೋಲ್ಲ.
- ಕಳೆದ ಬಾರಿ ನಿರ್ಮಲಾ ಸೀತಾರಾಮನ್ ಅವರು ಚುನಾವಣೆಗೆ ನಿಂತಾಗ ಪ್ರಾಮಿಸ್ ಮಾಡಿದ್ದರು. ನಂದಿನಿ ಸಹಕಾರ ಬ್ಯಾಂಕ್ ಮಾಡಬೇಕೆಂದು ಅಮಿತ್ ಶಾ ಅವರ ಕೈನಲ್ಲಿ ಉದ್ಘಾಟನೆಯನ್ನು ಮಾಡಿಸಿದರು.
- ಯೋಜನೆಯ ವಿಚಾರದಲ್ಲಿ ನಾನು ಎರಡು, ಮೂರು ಬಾರಿ ಹೋಗಿದ್ದೇನೆ. ಇಲ್ಲಿಗೆ ಬಂದಾಗ ಎಲ್ಲರೂ ಚೆನ್ನಾಗಿಯೇ ಮಾತನಾಡಿದರು. ಅಲ್ಲಿಗೆ ಹೋದರೆ ಮಾತನಾಡಲು ಅಪಾಯಿಂಟ್‌ಮೆಂಟ್ ಕೂಡ ಕೊಡಲಿಲ್ಲ.
ಹಲವರಿಗೆ ಮತ ಹಾಕಿದ್ದೇನೆ.. ಯಾರೂ ಅನುದಾನ ಕೊಟ್ಟಿಲ್ಲ
- ಕಳೆದ ಹನ್ನೊಂದು ವರ್ಷದಲ್ಲಿ ಅನೇಕರಿಗೆ ಮತ ಹಾಕಿದ್ದೇನೆ. ಪಕ್ಷ ಆದೇಶ ಮಾಡಿದವರಿಗೆ ಮತ ಚಲಾಯಿಸಿದ್ದೇನೆ. ಪ್ರತಿ ಬಾರಿ ಮತಹಾಕುವ ಮೊದಲು ನಮಗೆ ಬಂದ ಅನುದಾನದಲ್ಲಿ ಕ್ಷೇತ್ರಕ್ಕೆ ಕೊಡುತ್ತೇನೆ ಅಂತ ಹೇಳಿದರು. ಬಿಜೆಪಿ-ಕಾಂಗ್ರೆಸ್ ಎರಡು ಪಕ್ಷದವರು ಹೇಳಿದರು. ಇದುವರೆಗೂ ಒಬ್ಬರು ಕೂಡ ಒಂದೇ ಒಂದು ರೂಪಾಯಿ ನಮ್ಮ ಕ್ಷೇತ್ರಕ್ಕೆ ಕೊಟ್ಟಿಲ್ಲ. ನಮಗೆ ಅಂತ ಅಲ್ಲ ಯಾವ ಎಂಎಲ್ಎ ಗೆ ಸಹ ಕೊಡಲಿಲ್ಲ.
ಈ ಬಾರಿ ಕಂಡಿಷನ್ ಹಾಕಿದ್ದೇನೆ
ಈ ಬಾರಿ ನಾನು ಯಾರು ನನ್ನ ಬಳಿ ಮತ ಕೇಳಿದ್ದಾರೋ ಅವರಿಗೆ ಕಂಡಿಷನ್ ಹಾಕಿದ್ದೇನೆ. ನೀವೇನಾದ್ರು ಗೆದ್ರೆ ನಿಮಗೆ ಬರುವ ಅನುದಾನದಲ್ಲಿ ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡಬೇಕು ಅಂತ. ಅದರಲ್ಲಿ ಮುಖ್ಯವಾಗಿ ನಾನು ಕೇಳಿದ್ದು ಯಶವಂತಪುರ ಕ್ಷೇತ್ರದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದು. ಕುಡಿಯುವ ನೀರಿಗೆ ಬೋರ್‌ವೆಲ್ ಕೊರೆಸುವುದು ಮತ್ತು ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಒತ್ತುಕೊಡಬೇಕೆಂದು ಹೇಳಿದ್ದೇನೆ ಎಂದು ಸೋಮಶೇಖರ್ ಹೇಳಿದರು. ಇದಕ್ಕೆ ಒಪ್ಪಿಕೊಂಡ್ರೆ 100% ವೋಟ್ ಹಾಕುತ್ತೇನೆ ಎಂದು ಹೇಳಿದ್ದೇನೆ ಎಂದು ಸೋಮಶೇಖರ್ ಹೇಳಿದರು.
ಮೂರು ಜನರು ನನ್ನ ಬಳಿ ಪ್ರಾಮಿಸ್ ಮಾಡಿದ್ದಾರೆ. ಫಸ್ಟ್ ಯಾರು ಫ್ರಾಮಿಸ್ ಮಾಡಿದ್ದಾರೆ ಅವರಿಗೆ ಮೊದಲನೇ ಪ್ರಾಶಸ್ತ್ಯ ಕೊಡುತ್ತೇನೆ ಎಂದರು.
ಬಿಜೆಪಿಯವರು ನಿಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಳ್ಳೋದ್ರಲ್ಲಿ ವಿಫಲವಾಗಿದ್ದಾರಾ ಎಂದು ಕೇಳಿದಾಗ, ಈ ಹಿಂದೆ ಅವರು ಹೇಳಿದಂತೆ ಎಲ್ಲಾ ನಾನು ಕೇಳಿದ್ದೇನೆ. ನಿರ್ಮಲಾ ಸೀತಾರಾಮನ್ ಅವರಿಗೆ ವೋಟ್ ಹಾಕಿ ಅಂದ್ರು. ಅದಕ್ಕಿಂದ ಹಿಂದೆ ಒಬ್ಬ ಸೇಟುಗೆ ಹಾಕಿ ಅಂದ್ರು. ಒಬ್ಬರೂ ಸಹ ಕ್ಷೇತ್ರಕ್ಕೆ ಒಂದು ರೂಪಾಯಿ ಕೊಡೋದಿಲ್ಲ. ನಾವು ವೋಟ್ ಹಾಕುವ ತನಕ ಫೋನ್ ಮಾಡಿ ಅದೂ ಇದೂ ಅಂತಾರೆ. ರಾಜ್ಯಸಭೆಗೆ ಆಯ್ಕೆ ಆದ ಮೇಲೆ ಅಷ್ಟೇ ಮುಗಿದು ಹೋಯ್ತು ನಮ್ಮ ಕಥೆ ಎಂದು ಹೇಳಿದರು.