Site icon Vistara News

Rajyasabha Election : ಗೆಲ್ಲುವ ವಿಶ್ವಾಸ ಇಲ್ಲದೆ ಇದ್ರೆ ನಾನು ನಿಲ್ತಿದ್ನಾ?; ಕುಪೇಂದ್ರ ರೆಡ್ಡಿ ಮಾತಿನ ಅರ್ಥವೇನು?

Rajyasabha Election Kupendra Reddy election

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯ (Rajyasabha Election) ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಬಿಜೆಪಿ ಶಾಸಕರು ವಿಧಾನ ಸೌಧದಲ್ಲಿ (Vidhana soudha) ಬೆಳಗ್ಗೆ 9 ಗಂಟೆಯಿಂದಲೇ ಮತದಾನ ಮಾಡಲು ಆರಂಭ (Voting process started) ಮಾಡಿದೆ. ಈ ನಡುವೆ, ಎನ್‌ಡಿಎ ಅಭ್ಯರ್ಥಿಯಾಗಿರುವ ಉದ್ಯಮಿ ಕುಪೇಂದ್ರ ರೆಡ್ಡಿ (Kupendra Reddy) ಅವರು ಗೆಲುವಿನ ಆತ್ಮವಿಶ್ವಾಸದ ಮಾತು ಆಡಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಜಯ್‌ ಮಾಕೆನ್‌, ನಸೀರ್‌ ಹುಸೇನ್‌, ಜಿ.ಸಿ.ಚಂದ್ರಶೇಖರ್‌ ಅವರು ಕಣಕ್ಕಿಳಿದಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣ ಸಾ ಬಾಂಡಗೆ ಕಣದಲ್ಲಿದ್ದಾರೆ. ಐದನೇ‌ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಉದ್ಯಮಿ ಕುಪೇಂದ್ರ ರೆಡ್ಡಿ ಅವರು ಕಣದಲ್ಲಿದ್ದಾರೆ. ಅವರ‌ ಉಪಸ್ಥಿತಿಯಿಂದಾಗಿ ಚುನಾವಣೆ ಗಮನ ಸೆಳೆದಿದೆ.

ಎನ್‌ಡಿಎ ಅಭ್ಯರ್ಥಿಯಾಗಿರುವ ಕುಪೇಂದ್ರ ರೆಡ್ಡಿ ಅವರು ವಿಸ್ತಾರ ನ್ಯೂಸ್‌ ಜತೆಗೆ ಮಾತನಾಡಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಗೆಲುವಿನ ವಿಶ್ವಾಸವಿಲ್ಲದೆ ನಾನು ಕಣಕ್ಕೆ ಇಳಿಯುತ್ತೀನಾ? ನನಗೆ ಎಲ್ಲ ಪಕ್ಷಗಳಲ್ಲೂ ಮಿತ್ರರಿದ್ದಾರೆ. ಮೈತ್ರಿ ಶಾಸಕರು ಮತ ಹಾಕಿದ ಬಳಿಕ ಕಡಿಮೆ ಬೀಳುವ ಮತಗಳನ್ನು ಪಡೆಯುವ ಪ್ರಯತ್ನ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದರು.

ʻʻನಾನೊಬ್ಬ ಎನ್‌ಡಿಎ ಅಭ್ಯರ್ಥಿ. ಇಂದು ನಮ್ಮ‌ ಕೈಯಲ್ಲಾದ ಒಂದು ಪ್ರಯತ್ನ ಮಾಡಿದ್ದೇನೆ. ಫಲ ಕೊಡಬಹುದು. ವಿಶ್ವಾಸ ಮತ ಕೇಳಿದ್ದೇನೆ. ಕೊಂಡುಕೊಳ್ಳುವ ಕೆಲಸ ಮಾಡಿಲ್ಲʼʼ ಎಂದು ಹೇಳಿದರು ಕುಪೇಂದ್ರ ರೆಡ್ಡಿ.

ನಾನು ಆಮಿಷ ಒಡ್ಡಿದ್ದೇನೆ ಎಂದು ದೂರು ಕೊಟ್ಟು ಎಫ್‌ಐಆರ್‌ ಹಾಕಿಸುವ ಮೂಲಕ ಕಾಂಗ್ರೆಸ್‌ ಹೊಸ ಪ್ರಯತ್ನ ನಡೆಸಿದೆ. ಅವರ ಸರ್ಕಾರ ಇರುವುದರಿಂದ ಅವರೇ ಮತಗಳನ್ನು ಕೊಂಡುಕೊಳ್ಳಬಹುದು. ನಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಕೇಳುವ ಕೆಲಸ ಮಾಡಿದ್ದೇನೆ. ಅವರ ಪಕ್ಷ, ಇವರ ಪಕ್ಷ ಅಂತಲ್ಲ. ಎಲ್ಲರಲ್ಲೂ ಮತ ಕೇಳಿದ್ದೇನೆ ಎಂದು ಕುಪೇಂದ್ರ ರೆಡ್ಡಿ ಹೇಳಿದರು.

ಕಾಂಗ್ರೆಸ್‌ ದೂರು ನೀಡಿರುವ ಬಗ್ಗೆ ಮಾತನಾಡಿರುವ ಅವರು, ಈ ರೀತಿ ದೂರು ಕೊಡುವುದು ಇದುವರೆಗೆ ಇರಲಿಲ್ಲ. ಈಗ ಕಾಂಗ್ರೆಸ್‌ನವರು ಹೊಸ ಸಿಸ್ಟಮ್ ಮಾಡಿದ್ದಾರೆ. ಅವರು ಒಂದು ವೇಳೆ ದೂರು ಕೊಡುವುದಿದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡಿ, ಅವರಿಂದ ಅನುಮತಿ ಪಡೆದು, ಮಾಜಿಸ್ಟ್ರೇಟ್ ಅನುಮತಿ ಪಡೆದು ಕೇಸ್ ರಿಜಿಸ್ಟರ್ ‌ ಮಾಡಬೇಕಿತ್ತು. ಆದರೆ, ನೇರವಾಗಿ FIR ಹಾಕಿದ್ದಾರೆ. ಇದರಿಂದ ನನಗೂ ಮಾನನಷ್ಟ ಮೊಕದ್ದಮೆ ಹಾಕಲು ಅವಕಾಶ ಉಳಿಸಿದ್ದಾರೆ ಎಂದು ಹೇಳಿದರು ಕುಪೇಂದ್ರ ರೆಡ್ಡಿ.

ಇದನ್ನೂ ಓದಿ: Rajya Sabha Election: ಮೂರು ಪಕ್ಷಗಳಲ್ಲಿ ವಿಪ್‌ ಜಾರಿ; ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ಗೆ ಶಿಫ್ಟ್

ಕುಪೇಂದ್ರ ರೆಡ್ಡಿನೇ ಗೆಲ್ಲೋದು ಎಂದ ಜಿ.ಟಿ. ದೇವೇಗೌಡ

ವಿಧಾನಸೌಧದ ಪಡಸಾಲೆಯಲ್ಲಿ ಮಾತನಾಡಿದ ಜೆಡಿಎಸ್‌ ಶಾಸಕ ಜಿ.ಟಿ ದೇವೇ ಗೌಡ ಅವರು, ನಮ್ಮ ಅಭ್ಯರ್ಥಿ ಗೆಲ್ತಾರೆ. ಕುಪೇಂದ್ರ ರೆಡ್ಡಿ ಅವರು ಅವರು ಪಕ್ಷಾತೀತ ಅಭ್ಯರ್ಥಿ. ಅನುಭವಿ ರಾಜಕಾರಣಿಯನ್ನು ಅಭ್ಯರ್ಥಿ ಮಾಡಿದ್ದೇವೆ.. ಅವರಿಗೆ ಬೇರೆ ಬೇರೆ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ. ಅವರು ಗೆಲ್ತಾರೆ ಎಂಬ ವಿಶ್ವಾಸವಿದೆʼʼ ಎಂದು ಹೇಳಿದರು.

Exit mobile version