Site icon Vistara News

Rajyasabha Election : 224ರಲ್ಲಿ 223 ಮತ ಚಲಾವಣೆ; ಇನ್ನೂ ಬಾರದ ಹೆಬ್ಬಾರ್‌; ಬಿಜೆಪಿಗೆ ಮತ್ತೊಂದು ಶಾಕ್‌?

Rajyasabha Election Shivarama Hebbar

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗಾಗಿ ನಡೆಯುತ್ತಿರುವ ಚುನಾವಣೆಯ (Rajyasabha Election) ಮತದಾನ ಪ್ರಕ್ರಿಯೆ ಕುತೂಹಲದ ಹಂತಕ್ಕೆ ತಲುಪಿದೆ. ರಾಜ್ಯ ವಿಧಾನಸಭೆಯ (State Legislative Assembly) 224 ಸದಸ್ಯರ ಪೈಕಿ 223 ಮಂದಿ ಮಧ್ಯಾಹ್ನ 1.52ರ ಒಳಗೆ ಮತ ಚಲಾಯಿಸಿದ್ದಾರೆ. ಇನ್ನು ಬಾಕಿ ಉಳಿದಿರುವುದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್‌ (Shivarama Hebbar) ಮಾತ್ರ.

ಬೆಳಗ್ಗೆ 11 ಗಂಟೆಗೆ ಆರಂಭವಾದ ಮತದಾನದಲ್ಲಿ ಎಲ್ಲರ ಮತದಾನ ತ್ವರಿತ ಗತಿಯಲ್ಲಿ ನಡೆದಿದೆ. ಆದರೆ, ಬಿಜೆಪಿ ಭರತ್‌ ಶೆಟ್ಟಿ ಅವರ ಮತವನ್ನು, ಕಾಂಗ್ರೆಸ್‌ ಬಸವರಾಜ ರಾಯರೆಡ್ಡಿ ಅವರ ಮತವನ್ನು ಸ್ವಲ್ಪ ಕಾಲ ತಡೆಹಿಡಿದಿತ್ತು. ಅಂತಿಮವಾಗಿ ಅವರು ಕೂಡಾ ಮತ ಹಾಕಿದರು. ಆದರೆ, ಎಲ್ಲರ ಮತದಾನ ಮುಗಿದರೂ ಶಿವರಾಮ ಹೆಬ್ಬಾರ್‌ ಇನ್ನೂ ಕೂಡಾ ಬರದೆ ಇರುವುದು ಕುತೂಹಲ ಕೆರಳಿಸಿದೆ.

ಮತ ಹಾಕಿದವರ ಪೈಕಿ ಬಿಜೆಪಿ ಶಾಸಕ ಎಸ್‌.ಟಿ ಸೋಮಶೇಖರ್‌ ಅವರು ಅಡ್ಡ ಮತದಾನ ಮಾಡುವ ಮೂಲಕ ಬಿಜೆಪಿ ಬಹುದೊಡ್ಡ ಶಾಕ್‌ ನೀಡಿದ್ದಾರೆ. ಇದೀಗ ಶಿವರಾಮ್‌ ಹೆಬ್ಬಾರ್‌ ಅವರು ಮತದಾನಕ್ಕೇ ಗೈರುಹಾಜರಾಗುವ ಮೂಲಕ ಇನ್ನೊಂದು ಆಘಾತ ನೀಡುತ್ತಾರಾ ಎಂಬ ಪ್ರಶ್ನೆ ಕಾಡಿದೆ.

ಮತ ಹಂಚಿಕೆ ಹೇಗಿತ್ತು? ಭರತ್‌ ಶೆಟ್ಟಿ ಮತ ಹಾಕಲು ಲೇಟ್‌ ಮಾಡಿದ್ದೇಕೆ?

ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗಾಗಿ ಐವರು ಕಣದಲ್ಲಿದ್ದರು. ಕಾಂಗ್ರೆಸ್‌ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ ಬಿಜೆಪಿಯಿಂದ ನಾರಾಯಣ ಸಾ ಭಾಂಡಗೆ ಹಾಗೂ ಎನ್‌ಡಿಎ ಮೈತ್ರಿ ಕೂಟ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಸ್ಪರ್ಧಿಸಿದ್ದರು. ಕಾಂಗ್ರೆಸ್‌ ತನ್ನ ಮತಗಳನ್ನು ಮೂವರು ಅಭ್ಯರ್ಥಿಗಳಿಗೆ ಹಂಚಿದ್ದರೆ, ಬಿಜೆಪಿ ಮೊದಲ 46 ಮತಗಳನ್ನು ತನ್ನ‌ ಅಭ್ಯರ್ಥಿಗೆ ಇಟ್ಟುಕೊಂಡು ಉಳಿದ 20 ಮತಗಳನ್ನು ಎನ್‌ಡಿಎ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಹಂಚಿಕೆ ಮಾಡಿತ್ತು. ಜೆಡಿಎಸ್‌ನ ಎಲ್ಲ 19 ಮತಗಳನ್ನು ಕುಪೇಂದ್ರ ರೆಡ್ಡಿ ಅವರಿಗೆ ಫಿಕ್ಸ್‌ ಮಾಡಲಾಗಿತ್ತು.

ಈ ನಡುವೆ ಬಿಜೆಪಿ ಇಬ್ಬರು ರೆಬೆಲ್‌ ಶಾಸಕರಾದ ಯಶ್ವಂತ ಪುರ ಶಾಸಕ ಎಸ್‌.ಟಿ ಸೋಮಶೇಖರ್‌ ಮತ್ತು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್‌ ಅವರಿಗೆ ಬಿಜೆಪಿಯ ಅಧಿಕೃತ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಅವರಿಗೆ ನೀಡುವಂತೆ ಸೂಚನೆ ನೀಡಿತ್ತು.

ಆದರೆ, ಎಸ್‌.ಟಿ. ಸೋಮಶೇಖರ್‌ ಅವರು ಅಡ್ಡ ಮತದಾನ ಮಾಡಿದ್ದರಿಂದ ನಾರಾಯಣ ಸಾ ಭಾಂಡಗೆ ಅವರಿಗೆ ಮತಗಳು ಕಡಿಮೆಯಾಗುವ ಅಪಾಯ ಎದುರಾಗಿತ್ತು. ಈ ಹಂತದಲ್ಲಿ ಬಿಜೆಪಿ ಒಂದು ವೇಳೆ ಶಿವರಾಮ ಹೆಬ್ಬಾರ್‌ ಕೂಡಾ ಮತದಾನಕ್ಕೆ ಬಾರದೆ ಇದ್ದರೆ ನಿಗದಿತ 45 ಮತಗಳು ಸಿಗದೆ ಹೋಗಬಹುದು ಎಂಬ ಆತಂಕದಲ್ಲಿ ಮಂಗಳೂರು ಉತ್ತರ ಶಾಸಕ ಭರತ್‌ ಶೆಟ್ಟಿ ಅವರ ಮತವನ್ನು ತಡೆಹಿಡಿದಿತ್ತು. ಮಧ್ಯಾಹ್ನ 1.45ರ ಹೊತ್ತಾದರೂ ಶಿವರಾಮ ಹೆಬ್ಬಾರ್‌ ಅವರು ಯಾರ ಕೈಗೂ ಸಿಗದೆ ಇದ್ದಾಗ ಭರತ್‌ ಶೆಟ್ಟಿ ಅವರು ಮತ ಕೇಂದ್ರ ಪ್ರವೇಶಿಸಿ ಅಧಿಕೃತ ಅಭ್ಯರ್ಥಿಗೆ ಮತ ಹಾಕಿದರು. ಅಲ್ಲಿಗೆ ನಾರಾಯಣ ಸಾ ಭಾಂಡಗೆ ಅವರಿಗೆ ಗೆಲುವಿಗೆ ಬೇಕಾದ 45 ಮತಗಳು ಸಿಕ್ಕಿದಂತಾಗಿದೆ.

ಎಸ್‌ ಟಿ. ಸೋಮಶೇಖರ್‌ ಮನೆ ಮುಂದೆ ಬಿಜೆಪಿ ಪ್ರತಿಭಟನೆ

ಈ ನಡುವೆ, ಪಕ್ಷದ ವಿರುದ್ಧ ಮತ ಚಲಾಯಿಸಿದ ಶಾಸಕ ಎಸ್.ಟಿ. ಸೋಮಶೇಖರ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಮಂಗಳವಾರ ಮಧ್ಯಾಹ್ನ 3.00 ಗಂಟೆಗೆ ಯಶವಂತಪುರ ಬಿಜೆಪಿ ಮಂಡಲ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ಬಿಜೆಪಿ ಪ್ರಕಟಿಸಿದೆ.

ಶಿವರಾಮ ಹೆಬ್ಬಾರ್‌ ಕೂಡಾ ಕೈ ಕೊಡ್ತಾರಾ?

ಮೇಲ್ನೋಟಕ್ಕೆ ಕಾಣುವಂತೆ ಶಿವರಾಮ ಹೆಬ್ಬಾರ್‌ ಅವರು ಮತದಾನದಿಂದ ದೂರ ಉಳಿಯುವ ಸಾಧ್ಯತೆಯೇ ಹೆಚ್ಚಾಗಿದೆ. ಅವರು ಮತ್ತು ಸೋಮಶೇಖರ್‌ ಅವರು ವಿಪ್‌ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಪಕ್ಷ ಅವರ ಮೇಲೆ ಕ್ರಮಕ್ಕೆ ಸ್ಪೀಕರ್‌ಗೆ ದೂರು ನೀಡುವ ‌ ಸಾಧ್ಯತೆಗಳು ಕಂಡುಬಂದಿವೆ. ಪಕ್ಷ ತೀವ್ರ ಕ್ರಮ ಕೈಗೊಳ್ಳಬೇಕು ಎಂದು ನಿರ್ಧರಿಸಿದರೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲೂಬಹುದಾಗಿದೆ. ಇತ್ತ ಈ ಇಬ್ಬರು ನಾಯಕರು ಸಂಜೆ ಹೊತ್ತಿಗೆ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗುವ ಸಾಧ್ಯತೆಗಳು ಇವೆ ಎಂಬ ಸುದ್ದಿ ಹರಡಿದೆ.

Exit mobile version