Site icon Vistara News

Ram Janmabhoomi: ಮನೆ ಮನೆಗೆ ಮಂತ್ರಾಕ್ಷತೆ ನೀಡಿದ ಬಿ.ವೈ. ವಿಜಯೇಂದ್ರ; ಜ. 22ರಂದು 5 ಪವಿತ್ರ ದೀಪ ಬೆಳಗಲು ಕರೆ

BY Vijayendra gives door to door mantrakshate

ಬೆಂಗಳೂರು: ಇದೇ ಜನವರಿ 22ರಂದು ರಾಮಜನ್ಮಭೂಮಿ (Ram Janmabhoomi) ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ (Lord Ram in Ayodhya) ಪ್ರತಿಷ್ಠಾಪನೆ ನಡೆಯುತ್ತಿದೆ. ಇದಕ್ಕೆ ದೇಶವೇ ಸಂಭ್ರಮದಲ್ಲಿದೆ. ಇದರ ಭಾಗವಾಗಿ ಮನೆ ಮನೆಗೆ ತೆರಳಿ ಮಂತ್ರಾಕ್ಷತೆ (door to door mantrakshate) ಕೊಡುವ ಅಭಿಯಾನಕ್ಕೂ ಚಾಲನೆ ಸಿಕ್ಕಿದೆ. ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BJP state president BY Vijayendra) ಅವರು ಭಾನುವಾರ (ಜ.7) ಶೇಷಾದ್ರಿಪುರಂನಲ್ಲಿ ನಡೆದ ಮನೆಮನೆಗೆ ಮಂತ್ರಾಕ್ಷತೆ ಅಭಿಯಾನದಲ್ಲಿ ಭಾಗವಹಿಸಿ, ಮಂತ್ರಾಕ್ಷತೆಯನ್ನು ವಿತರಿಸಿದರು.

ಬೆಂಗಳೂರಿನ ಶೇಷಾದ್ರಿಪುರದಲ್ಲಿ ಮನೆ ಮನೆಗೆ ತೆರಳಿದ ಬಿ.ವೈ. ವಿಜಯೇಂದ್ರ ಅವರು ಮಂತ್ರಾಕ್ಷತೆ ನೀಡಿದರು. ಇದಕ್ಕೂ ಮೊದಲು ಶೇಷಾದ್ರಿಪುರಂನ ಶ್ರೀರಾಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಮನೆ ಮನೆಗೆ ತೆರಳಿ ಮಂತ್ರಾಕ್ಷತೆ ನೀಡಿ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಪತ್ರ ವಿತರಣೆ ಮಾಡಿದರು.

ಮಂತ್ರಾಕ್ಷತೆ ವಿತರಣೆ ಬಳಿಕ ಬಿ.ವೈ. ವಿಜಯೇಂದ್ರ ಮಾತನಾಡಿ, ಇಂದು ಮಂತ್ರಾಕ್ಷತೆ ವಿತರಣೆ ಅಭಿಯಾನ ನಡೆಯುತ್ತಿದೆ. ಜನವರಿ 22 ರಂದು ಮನೆಗಳಲ್ಲಿ ಐದು ಪವಿತ್ರ ದೀಪ ಬೆಳಗಿಸೋಣ. ಪ್ರತಿ ಮನೆಗಳಿಗೂ ಮಂತ್ರಾಕ್ಷತೆ ತಲುಪಿಸುತ್ತಿದ್ದೇವೆ ಎಂದು ಹೇಳಿದರು.

ದೇಶದ್ರೋಹಿಗಳಿಗೂ ರಕ್ಷಣೆ ಮಾಡುತ್ತೀರಾ?

ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದಲ್ಲಿ ಅಮಾಯಕರ ರಕ್ಷಣೆ ಕುರಿತ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ವಿನಾಶಕಾಲೇ ವಿಪರೀತ ಬುದ್ಧಿ. ಶ್ರೀರಾಮಮಂದಿರ ಉದ್ಘಾಟನೆ ವೇಳೆ ನಾವೆಲ್ಲರೂ ಒಂದು ಎಂಬ ಭಾವನೆ ಮೂಡಿದೆ. ಆದರೆ, ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ಅಲ್ಪಸಂಖ್ಯಾತರಿಂದಲೇ ತಾವು ಅಧಿಕಾರಕ್ಕೆ ಬಂದಿರುವ ಭಾವನೆ ಕಾಂಗ್ರೆಸ್‌ನಲ್ಲಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದ ದೇಶದ್ರೋಹಿಗಳ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಬೇರೆ ಬೇರೆ ದೇಶದ್ರೋಹಿಗಳಿಗೂ ರಕ್ಷಣೆ ಮಾಡುತ್ತೀರಾ? ಸಮಾಜದಲ್ಲಿ ಜನರ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇದನ್ನು ರಾಜ್ಯದ ಜನ ಕ್ಷಮಿಸಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಮೂವರು ಡಿಸಿಎಂ; ಯಶಸ್ಸು ಸಿಗಲಿ

ಮೂವರು ಡಿಸಿಎಂಗಳನ್ನು ಮಾಡಬೇಕು ಎಂಬ ವಿಚಾರದ ಬಗ್ಗೆ ಕಾಂಗ್ರೆಸ್‌ ನಾಯಕರಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ಇದು ಡಿ.ಕೆ. ಶಿವಕುಮಾರ್‌ ಅವರನ್ನು ಬಗ್ಗು ಬಡಿಯಲು, ಕಾಂಗ್ರೆಸ್‌ನ ಕೆಲವು ನಾಯಕರೇ ಮಾಡುತ್ತಿರುವ ಹುನ್ನಾರವಾಗಿದೆ. ಅವರಿಗೆ ಯಶಸ್ಸು ಸಿಗಲಿ ಅಂತ ಹಾರೈಸುತ್ತೇನೆ ಎಂದು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳನ್ನು ಪಡೆದು ಗೆದ್ದ ಕಾಂಗ್ರೆಸ್‌ನವರು ಲೋಕಸಭೆಯಲ್ಲಿ 20 ಕ್ಷೇತ್ರಗಳನ್ನು ಗೆದ್ದು ಬಿಡುವ ಭ್ರಮೆಯಲ್ಲಿದ್ದರು. ಪಂಚರಾಜ್ಯ ಚುನಾವಣೆ ಫಲಿತಾಂಶದ ನಂತರ ರಾಜ್ಯದ ಕಾಂಗ್ರೆಸ್ ನಾಯಕರೂ ದಿಕ್ಕಾಪಾಲಾಗಿದ್ದಾರೆ. ಇನ್ನು ಮೂರು ಡಿಸಿಎಂ ಸೃಷ್ಟಿ ಮಾಡಬೇಕು ಅಂತ ನಾವು ಹೇಳಿಕೊಟ್ಟಿಲ್ಲ. ಇದು ಡಿ.ಕೆ. ಶಿವಕುಮಾರ್ ಸೊಕ್ಕು ಮುರಿಯಬೇಕು ಅನ್ನೋ ಉದ್ದೇಶದಿಂದ ಎಲ್ಲ ಕಾಂಗ್ರೆಸ್ ಮಹಾನ್ ನಾಯಕರೇ ಬಲಿಯಾಗೋಕೆ ಮಾಡಿಡುವ ಯೋಜನೆಯಾಗಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಇದನ್ನೂ ಓದಿ: Karnataka Politics: ರಾಜ್ಯದಲ್ಲಿ ಅಘೋಷಿತ ಎಮರ್ಜನ್ಸಿ: ಬಸವರಾಜ ಬೊಮ್ಮಾಯಿ

ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಗಳಲ್ಲ

ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಹಿಂದೆಲ್ಲ ನಾವು ಅಲ್ಪಸಂಖ್ಯಾತರಿಗೆ ಉತ್ತಮ ಯೋಜನೆಗಳನ್ನು ಕೊಟ್ಟಿದ್ದೇವೆ. ನರೇಂದ್ರ ಮೋದಿಯವರು ತ್ರಿಬಲ್ ತಲಾಖ್ ನಿಷೇಧಿಸಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ಹತ್ತು ಸಾವಿರ ಕೋಟಿ ರೂಪಾಯಿ ಅನುದಾನ ಕೊಡುತ್ತಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿಯ ದೇಶದ್ರೋಹಿಗಳನ್ನು ನಿರಪರಾಧಿಗಳು ಅಂತ ಕಾಂಗ್ರೆಸ್ ಬಿಂಬಿಸಲು‌ ಹೊರಟಿದೆ. ಇದು ಖಂಡನೀಯ ಮತ್ತು ಅಕ್ಷಮ್ಯ ಅಪರಾಧವಾಗಿದೆ. ಇದರ ಮೂಲಕ ಬೇರೆಯವರಿಗೂ ಕಾಂಗ್ರೆಸ್ ಪ್ರೇರಣೆ ಕೊಡುತ್ತಿದೆ. ಇವರನ್ನು ಮಾಫಿ ಮಾಡಿದರೆ, ಬೇರೆ ಬೇರೆ ದೇಶದ್ರೋಹಿಗಳನ್ನೂ ಮಾಫಿ ಮಾಡ್ತೀರಾ? ಎಂದು ಬಿ.ವೈ. ವಿಜಯೇಂದ್ರ ಪ್ರಶ್ನೆ ಮಾಡಿದರು.

Exit mobile version