Site icon Vistara News

Rameswaram cafe: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್; ಮುಖ್ಯ ಸಂಚುಕೋರ NIA ಬಲೆಗೆ

Rameswaram cafe bomb blast case

ಬೆಂಗಳೂರು: ವೈಟ್‌ಫೀಲ್ಡ್‌ ಬಳಿಕ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್‌ಗೆ (Rameswaram cafe blast case) ಸಂಬಂಧಪಟ್ಟಂತೆ ಎನ್ಐಎ ಅಧಿಕಾರಿಗಳು (NIA Officers) ಮುಖ್ಯ ಸಂಚುಕೋರನೊಬ್ಬನನ್ನು ಬಂಧಿಸಿದ್ದಾರೆ. ಬಾಂಬರ್‌ಗೆ ಸಹಾಯ ಮಾಡಿದ ಆರೋಪದ ಮೇಲೆ ಬಂಧನ ಮಾಡಲಾಗಿದ್ದು, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.

ಮುಜಾಮಿಲ್ ಶರೀಫ್ ಬಂಧಿತ ಉಗ್ರ ಎನ್ನಲಾಗಿದೆ. ಈ ಪ್ರಕರಣದ ಮುಖ್ಯ ಆರೋಪಿ ಮುಜಾವೀರ್ ಹುಸೇನ್ ಜತೆ ಮುಜಾಮಿಲ್ ಶರೀಫ್ ನಿರಂತರ ಸಂಪರ್ಕದಲ್ಲಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆತನನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ದೇಶಾದ್ಯಂತ 18 ಕಡೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಕರ್ನಾಟಕದಲ್ಲಿಯೇ 12 ಕಡೆ ದಾಳಿ ನಡೆಸಲಾಗಿತ್ತು. ಈ ವೇಳೆ ಕೆಲವು ಮಹತ್ವದ ಅಂಶಗಳು ಪತ್ತೆಯಾಗಿದ್ದಲ್ಲದೆ, ಕೆಲವು ಸುಳಿವುಗಳು ಸಹ ಸಿಕ್ಕಿದೆ ಎನ್ನಲಾಗಿದೆ. ಮುಜಾವೀರ್ ಹುಸೇನ್‌ಗೆ ಮುಜಾಮಿಲ್ ಶರೀಫ್ ಸಹಕಾರ ನೀಡಿದ್ದ ಅಲ್ಲದೆ, ಅಬ್ದುಲ್ ಮತೀನ್ ತಾಹಾ ಜತೆ ಕೂಡ ಸಂಪರ್ಕವನ್ನು ಹೊಂದಿದ್ದಾನೆ ಎಂದು ತಿಳಿದುಬಂದಿದೆ.

ಗುರುವಾರ ದಾಳಿ ನಡೆಸಿದ್ದ NIA

ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಕೇಸ್ ಸಂಬಂಧ ಬುಧವಾರ ಕರ್ನಾಟಕ, ತಮಿಳುನಾಡು ಹಾಗೂ ಕೇರಳದ ಹದಿನೆಂಟು ಕಡೆ ಎನ್‌ಐಎ ತಂಡ ದಾಳಿ ನಡೆಸಿದೆ. ದಾಳಿ ವೇಲೆ ಹಲವು ವಸ್ತುಗಳು ಹಾಗೂ ಭಾರಿ ಪ್ರಮಾಣದ ಹಣ ಸಹ ಸಿಕ್ಕಿದ್ದು, ವಶಕ್ಕೆ ಪಡೆಯಲಾಗಿತ್ತು. ಡಿಜಿಟಲ್ ಡಿವೈಸ್‌ಗಳನ್ನೂ ಸೀಜ್‌ ಮಾಡಲಾಗಿತ್ತು. ಈಗ ಓರ್ವ ಶಂಕಿತನನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಾಂಬರ್‌ಗೆ ಸಹಾಯ ಮಾಡಿದ್ದ?

ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಮಾಡಿದವನಿಗೆ ಮುಜಾಮಿಲ್ ಶರೀಫ್ ಸಹಾಯ ಮಾಡಿದ್ದ. ಆತನ ಓಡಾಟಕ್ಕೆ ಹಾಗೂ ಪರಾರಿಯಾಗಲು ಸಹಾಯ ಮಾಡಿದ್ದ ಎಂಬ ಅಂಶ ತನಿಖೆ ವೇಳೆ ಗೊತ್ತಾಗಿದೆ. ಮುಜಾವೀರ್ ಶಜೀಬ್ ಹುಸೇನ್, ಅಬ್ದುಲ್ ಮತೀನ್ ತಾಹಗೆ ಸಹ ಸಹಾಯ ಮಾಡಿದ್ದ ಎಂದು ತಿಳಿದುಬಂದಿದೆ.

ದೊಡ್ಡ ಮಟ್ಟದಲ್ಲಿ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದು ಬೆಳಕಿಗೆ ಬಂದಿದೆ. ದಾಳಿ ವೇಳೆ ಹಲವು ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಅಲ್ಲದೆ, ರಾಮೇಶ್ವರಂ ಕೆಫೆಗೆ ಪ್ರಮುಖ ಆರೋಪಿ ಮುಜಾವೀರ್ ಶಜೀಬ್ ಹುಸೇನ್ ಬಾಂಬ್ ಅನ್ನು ತಂದಿದ್ದ. ಈತನಿಗೆ ಅಬ್ದುಲ್ ಮತೀನ್ ತಾಹ, ಮುಜಾಮಿಲ್ ಶರೀಫ್ ಸಹಾಯ ಮಾಡಿದ್ದರು ಎಂಬುದು ಎನ್‌ಐಎಗೆ ತನಿಖೆ ವೇಳೆ ಗೊತ್ತಾಗಿದೆ. ಈ ಮಾಹಿತಿ ಸಿಕ್ಕ ಕೂಡಲೇ ಮುಜಾಮಿಲ್ ಶರೀಫ್‌ನನ್ನು ಬಂಧನ ಮಾಡಲಾಗಿದೆ. ಈಗ ಉಳಿದ ಇಬ್ಬರಿಗಾಗಿ ತೀವ್ರ ಹುಡುಕಾಟವನ್ನು ನಡೆಸಲಾಗಿದೆ.

ಗುರಪ್ಪನಪಾಳ್ಯದಲ್ಲಿ ನೆಲಸಿದ್ದ ಮುಜಾವೀರ್ ಹುಸೇನ್!

ಸುದ್ಗುಂಟೆಪಾಳ್ಯದ ಗುರಪ್ಪನಪಾಳ್ಯದಲ್ಲಿ ಉಗ್ರ ಮುಜಾವೀರ್ ಹುಸೇನ್ ನೆಲಸಿದ್ದ. ಎನ್‌ಐಎ ದಾಳಿ ನಡೆಸಿದಾಗ 10ಕ್ಕೂ ಹೆಚ್ಚು ಜೀವಂತ ಗುಂಡುಗಳು, ಒಂದು ಗನ್, ಡಿಟೋನೇಟರ್ ಹಾಗೂ ಕಚ್ಚಾ ಬಾಂಬ್ ತಯಾರಿಕೆಗೆ ಬೇಕಾದ ವಸ್ತುಗಳನ್ನು ಸೀಜ್‌ ಮಾಡಲಾಗಿತ್ತು. 2020ರಂದು ಎನ್‌ಐಎ ದಾಳಿ ನಡೆಸಿತ್ತು. ಅಂದಿನಿಂದ ಮುಜಾವಿರ್ ಹುಸೇನ್ ತಲೆಮರೆಸಿಕೊಂಡಿದ್ದ. ಸದ್ಯ ಈತನಿಗೆ ಸಹಾಯ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಮುಜಾಮಿಲ್ ಶರೀಫ್‌ನನ್ನು ಬಂಧನ ಮಾಡಲಾಗಿದೆ.

ಇದನ್ನೂ ಓದಿ: Blast In Bengaluru: ರಾಮೇಶ್ವರಂ ಕೆಫೆ ಸ್ಫೋಟ; ಮತ್ತಿಬ್ಬರನ್ನು ಬಂಧಿಸಿದ ಎನ್‌ಐಎ!

ಅಬ್ದುಲ್ ಮತೀನ್ ಜತೆಗೂ ಮುಜಾಮಿಲ್ ಶರೀಫ್ ಸಂಪರ್ಕ

ಮುಜಾಮಿಲ್ ಶರೀಫ್‌ ಇದ್ದ ನಿವಾಸದ ಮೇಲೆ ದಾಳಿ ನಡೆಸಿ ಡಿಜಿಟಲ್ ಡಿವೈಸ್,‌ ನಗದನ್ನು ವಶಕ್ಕೆ ಪಡೆಯಲಾಗಿದೆ. ಈತ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದ ಮೋಸ್ಟ್‌ ವಾಂಟೆಡ್‌ ಅಬ್ದುಲ್ ಮತೀನ್ ಜತೆಗೆ ನಿರಂತರ ಸಂಪರ್ಕದಲ್ಲಿದ್ದ. ಅಬ್ದುಲ್ ಮತೀನ್ ನೇರವಾಗಿ ಹೊರದೇಶದ ಹ್ಯಾಂಡ್ಲರ್‌ಗಳ ಜತೆಗೆ ಸಂಪರ್ಕವನ್ನು ಹೊಂದಿದ್ದ. ಅಲ್ಲದೆ, ಶಾರೀಖ್, ಮಾಜ್ ಮುನೀರ್ ಅಹಮದ್ ಮತ್ತು ಸೈಯದ್ ಯಾಸಿನ್ ಜತೆಗೂ ಈತ ಸಂಪರ್ಕ ಸಾಧಿಸಿದ್ದ ಎಂದು ತಿಳಿದುಬಂದಿದೆ.

ಅಬ್ದುಲ್ ಮತೀನ್ ತಾಹ

ಯಾರು ಈ ಅಬ್ದುಲ್ ಮತೀನ್ ತಾಹ?

ಅಬ್ದುಲ್ ಮತೀನ್ ತಾಹ ಅಲ್ ಹಿಂದ್‌ ಸಂಘಟನೆಯ ಪ್ರಮುಖ ಸದಸ್ಯನಾಗಿದ್ದಾನೆ. ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸೊಪ್ಪುಗುಡ್ಡೆ ನಿವಾಸಿಯಾಗಿರುವ ಈತ 2020ರಿಂದ ನಾಪತ್ತೆ ಆಗಿದ್ದಾನೆ. ಕಳೆದ ಐದು ವರ್ಷಗಳಿಂದ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ಆರಂಭದಲ್ಲಿ ಬ್ರಾಡ್‌ಬ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಈತ, ನಂತರ ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ಡಾರ್ಕ್‌ವೆಬ್ ಬಳಕೆ ಮಾಡುವುದರಲ್ಲಿ ಈತ ಪರಿಣಿತಿಯನ್ನು ಹೊಂದಿದ್ದ. ಇದರ ಜತೆಗೆ ಕುಕ್ಕರ್ ಬಾಂಬ್ ತಯಾರಿಕೆ ಮಾಡುವುದರಲ್ಲೂ ನಿಪುಣನಾಗಿದ್ದ. ಮ್ಯಾಚ್‌ಸ್ಟಿಕ್‌ನಲ್ಲಿರುವ ಫಾಸ್ಪರಸ್ ಬಳಸಿ ಕುಕ್ಕರ್ ಬಾಂಬ್ ಅನ್ನು ಈತ ತಯಾರಿಸುತ್ತಿದ್ದ. ಇದಲ್ಲದೆ, ಅಲ್ ಹಿಂದ್ ಸಂಘಟನೆ ಸದಸ್ಯರಿಗೆ ಅಡಗುದಾಣ ಕಲ್ಪಿಸುವ ಜವಾಬ್ದಾರಿ ಈತನದ್ದಾಗಿದೆ. ಈತನ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್‌ಐಎ ಈಗಾಗಲೇ ಘೋಷಿಸಿದೆ.

Exit mobile version