Site icon Vistara News

Ramzan Food Mela : ಫ್ರೇಜರ್‌ ಟೌನ್‌ನ ಜನಪ್ರಿಯ ರಂಜಾನ್‌ ಫುಡ್‌ ಮೇಳಕ್ಕೆ ಬ್ರೇಕ್‌

Ramzan Food Mela1

ಬೆಂಗಳೂರು: ಬೆಂಗಳೂರಿನ ಫ್ರೇಜರ್‌ ಟೌನ್‌ನಲ್ಲಿ (Frazer town food festival) ರಂಜಾನ್‌ ತಿಂಗಳಲ್ಲಿ (Ramzan Month) ನಡೆಯುವ ವಾರ್ಷಿಕ ರಂಜಾನ್‌ ಆಹಾರ ಮೇಳಕ್ಕೆ (Ramzan Food Mela) ಈ ಬಾರಿ ಬ್ರೇಕ್‌ ಹಾಕಲಾಗಿದೆ. ಶಿವಾಜಿ ನಗರದ ಪಕ್ಕದಲ್ಲಿರುವ ಫ್ರೇಜರ್‌ ಟೌನ್‌ನಲ್ಲಿ (Frazer town) ನಡೆಯುವ ಈ ಫುಡ್‌ ಮೇಳಕ್ಕೆ ಸ್ಥಳೀಯರಿಂದ ಎದುರಾದ ಪ್ರತಿಭಟನೆ ಮತ್ತು ಶುಚಿತ್ವದ ಕಾರಣ ನೀಡಿ ಬಿಬಿಎಂಪಿ ತಡೆಯೊಡ್ಡಿದೆ.

ರಂಜಾನ್ ಪ್ರಯುಕ್ತ ಪ್ರತಿ ವರ್ಷವೂ ಬೆಂಗಳೂರಿನ ಫ್ರೇಜರ್ ಟೌನ್‌ನಲ್ಲಿ ಆಹಾರ ಮೇಳ ನಡೆಯುತ್ತದೆ. ಇಲ್ಲಿನ ರಸ್ತೆಗಳ ಉದ್ದಕ್ಕೂ ಸಾವಿರಾರು ಅಂಗಡಿಗಳನ್ನು ಸ್ಥಾಪಿಸಲಾಗುತ್ತದೆ. ಸಂಜೆ ರಂಜಾನ್‌ ಉಪವಾಸ ಬಿಡುವ ಹೊತ್ತಿನಲ್ಲಿ ಈ ಫುಡ್‌ ಮೇಳ ಕಳೆಗಟ್ಟುತ್ತದೆ. ಪ್ರತಿ ವರ್ಷ ಈ ಆಹಾರ ಮೇಳಕ್ಕೆ ಲಕ್ಷಾಂತರ ಜನ ಭೇಟಿ ನೀಡಿ ವಿಧ ವಿಧದ ಭಕ್ಷ್ಯಗಳನ್ನು ಸವಿಯುವುದು ವಾಡಿಕೆಯಾಗಿದೆ. ಈ ಬಾರಿ ಮಾರ್ಚ್‌ 10ರಿಂದ ಏಪ್ರಿಲ್‌ 9ರವರೆಗೆ ಆಹಾರ ಮೇಳ ನಡೆಯಬೇಕಾಗಿತ್ತು. ಆದರೆ, ಸ್ಥಳೀಯ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರ ಮನವಿ, ಕೆಲವು ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ಮೇಳವನ್ನು ರದ್ದು ಮಾಡಲಾಗಿದೆ.

ಆಹಾರ ಮೇಳಕ್ಕೆ ವಿರೋಧ ಎದುರಾಗಿದ್ದು ಯಾಕೆ?

ಫ್ರೇಜರ್ ಟೌನ್ ನಿವಾಸಿಗಳ ಕಲ್ಯಾಣ ಸಂಘವು (FTRWA) ಈ ಆಹಾರ ಮೇಳದ ವಿರುದ್ಧ ಬಹು ಹಿಂದಿನಿಂದಲೇ ಆಕ್ಷೇಪ ವ್ಯಕ್ತಪಡಿಸಿತ್ತು. ಆಹಾರ ಮೇಳಕ್ಕೆ ವರ್ಷ ವರ್ಷವೂ ಜನಸಂದಣಿ ಹೆಚ್ಚಾಗುತ್ತಿತ್ತು. ಇದರಿಂದ ಸ್ಥಳೀಯರಿಗೆ ಕಿರಿಕಿರಿ ಆಗುತ್ತಿತ್ತು. ಅತಿಯಾದ ತ್ಯಾಜ್ಯ ಮತ್ತು ಪಾರ್ಕಿಂಗ್ ಸಮಸ್ಯೆಗಳನ್ನು ಉಲ್ಲೇಖಿಸಿ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದರು. ಇಲ್ಲಿನ ಪ್ರಮುಖ ರಸ್ತೆಗಳು ಅಂಗಡಿಗಳಿಂದಲೇ ತುಂಬಿ ಹೋಗಿ ಸಂಚಾರಕ್ಕೆ ಅಡ್ಡಿಯಾಗಿತ್ತು.

ರಾತ್ರಿ ಒಂದು ಗಂಟೆಯವರೆಗೂ ಫುಡ್‌ ಮೇಳ ನಡೆಯುತ್ತಿತ್ತು. ಟ್ರಾಫಿಕ್‌ ಜಾಮ್‌, ರಾತ್ರಿ ಇಡೀ ಕಿರಿಕಿರಿಯಿಂದ ಮುಸ್ಲಿಮರೇ ಆಕ್ಷೇಪ ಸಲ್ಲಿಸಿದ್ದರು.

ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಫ್ರೇಜರ್ ಟೌನ್ ನಿವಾಸಿಗಳ ಕಲ್ಯಾಣ ಸಂಘವು ಇದರ ನಿಷೇಧಕ್ಕೆ ಬಿಬಿಎಂಪಿ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಜತೆ ಮಾತುಕತೆ ನಡೆಸಿತು.

ಅಂತಿಮವಾಗಿ ಫ್ರೇಜರ್ ಟೌನ್ ನಿವಾಸಿಗಳ ಕಲ್ಯಾಣ ಸಂಘದ ಬೇಡಿಕೆಗಳನ್ನು ಬಿಬಿಎಂಪಿ ಅಂಗೀಕರಿಸಿ ಆಹಾರ ಮೇಳವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ : Ramzan Fast: ರಂಜಾನ್‌ ಹಿನ್ನೆಲೆ ಕೇರಳ ಪುರಸಭೆಯಲ್ಲಿ ನಿತ್ಯ ಸೈರನ್‌ ಶಬ್ದ, ಹಿಂದುಗಳು, ಕ್ರೈಸ್ತರಿಂದ ಆಕ್ರೋಶ

ಬಿಬಿಎಂಪಿ ಹೊರಡಿಸಿದ ಆದೇಶದಲ್ಲಿ ಏನಿದೆ?

  1. ರಂಜಾನ್ ಹಬ್ಬದ ಸಮಯದಲ್ಲಿ ತಾತ್ಕಾಲಿಕ ಆಹಾರ ಮಳಿಗೆಗಳನ್ನು ಸ್ಥಾಪಿಸುವುದನ್ನು ಸ್ಪಷ್ಟವಾಗಿ ನಿಷೇಧಿಸಿದೆ. ಪುಲಿಕೇಶಿ ನಗರದಲ್ಲಿನ ಬಿಬಿಎಂಪಿ ಆರೋಗ್ಯ ಅಧಿಕಾರಿಯ ಅಧಿಕೃತ ಆದೇಶವು ನಿರ್ಬಂಧಗಳನ್ನು ವಿವರಿಸಿದೆ.
  2. ಫುಟ್‌ಪಾತ್‌ಗಳನ್ನು ಆಕ್ರಮಿಸುವ ಮತ್ತು ಸಾರ್ವಜನಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುವ ಮಾರಾಟ ಮಳಿಗೆಯನ್ನು ನಿಷೇಧಿಸಿದೆ.
  3. ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ಮತ್ತು ಇತರ ಸಂಬಂಧಿತ ಇಲಾಖೆಗಳು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಲು ಆದೇಶಿಸಲಾಗಿದೆ.
  4. ಅತಿಕ್ರಮಣ ತಡೆಗೆ ಬಿಬಿಎಂಪಿ ಕ್ರಮ ಕೈಗೊಂಡಿದ್ದು, ಫುಟ್‌ಪಾತ್‌ ಮತ್ತು ರಸ್ತೆಗಳಲ್ಲಿನ ಅಕ್ರಮ ಮಳಿಗೆಗಳನ್ನು ತೆರವುಗೊಳಿಸಲು ಮುಂದಾಗಿದೆ. ಫುಡ್‌ ಮೇಳ ನಡೆಸದಂತೆ ಸ್ಥಳೀಯ ಅಂಗಡಿ ಮಾಲೀಕರಿಗೆ ಬಿಬಿಎಂಪಿ ನೋಟಿಸ್‌ ನೀಡಿದೆ.
Exit mobile version