Site icon Vistara News

ಮಲ್ಲೇಶ್ವರದ ಕನ್ಸರ್ವೆನ್ಸಿಯಲ್ಲಿ ಹಿರಿಯರೇ ವಾಕಿಂಗ್‌ ಮಾಡಿ, ಮಕ್ಕಳೇ ಆಟ ಆಡಿ!

ಬೆಂಗಳೂರು: ಹಳೆಯ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಕನ್ಸರ್ವೆನ್ಸಿ ಎಂಬ ಪ್ರದೇಶಗಳಿವೆ. ಮುಖ್ಯ ರಸ್ತೆಗಿಂತಲೂ ಚಿಕ್ಕದಿರುವ ಈ ಸ್ಥಳಗಳನ್ನು ನಿರ್ದಿಷ್ಟವಾಗಿ ಯಾವ ಉದ್ದೇಶಕ್ಕೆ ಬಳಸಲಾಗುತ್ತಿತ್ತು ಗೊತ್ತಿಲ್ಲ. ಮಲಗುಂಡಿ ನಿರ್ಮಾಣ ಹಾಗೂ ಅದನ್ನು ಸ್ವಚ್ಛಗೊಳಿಸಲು ಇದರ ಬಳಕೆ ಆಗುತ್ತಿತ್ತು ಎಂಬ ಮಾತಿದೆ. ಬೆಂಗಳೂರಿನ ಹಳೆಯ ಬಡಾವಣೆಗಳಲ್ಲೊಂದಾದ ಮಲ್ಲೇಶ್ವರದ ಕನ್ಸರ್ವೆನ್ಸಿಯಲ್ಲಿ ಹಿರಿಯ ನಾಗರಿಕರು ಮತ್ತು ಮಕ್ಕಳ ಆನಂದದಾಯಕ ಸ್ಥಳ ನಿರ್ಮಿಸುವ ಯೋಜನೆಯೊಂದು ಸಿದ್ಧವಾಗುತ್ತಿದೆ.

1898 ರ ಪ್ಲೇಗ್ ನಂತರ ನಿರ್ಮಿಸಲಾದ ಮಲ್ಲೇಶ್ವರ, ನಗರದಲ್ಲಿ ಯೋಜಿತ ಪ್ರದೇಶಗಳಲ್ಲೊಂದಾಗಿದೆ. ಇಲ್ಲಿರುವ ಕನ್ಸರ್ವೆನ್ಸಿಗಳು ಅನೇಕ ವರ್ಷಗಳಿಂದ ಬಳಕೆಯಾಗದೇ ಉಳಿದಿವೆ. ಕೆಲವೆಡೆ ನಿಧಾನವಾಗಿ ಅತಿಕ್ರಮಣ ಮಾಡಿಕೊಂಡಿದ್ದರೆ ಅನೇಕ ಕಡೆಗಳಲ್ಲಿ ವಾಹನ ಪಾರ್ಕಿಂಗ್‌ಗೆ ಬಳಕೆ ಮಾಡಲಾಗುತ್ತಿದೆ.

ಮಲ್ಲೇಶ್ವರ ಅರ್ಬನ್ ಲಿವಿಂಗ್ ಲ್ಯಾಬ್, ಮಲ್ಲೇಶ್ವರ ಸೋಶಿಯಲ್ ಮತ್ತು ಸೆನ್ಸಿಂಗ್ ಲೋಕಲ್ ಫೌಂಡೇಶನ್ ಸಹಯೋಗದಲ್ಲಿ ಹೊಸ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುತ್ತಿದೆ. ಹಳೆಯದನ್ನು ಪರಿವರ್ತಿಸುವ ಬೀದಿ ಗೋಡೆಯ, ಕಲೆಯ ಯಶಸ್ವಿ ಅಭಿಯಾನದ ನಂತರ, ಈಗ ಹಿರಿಯ ನಾಗರಿಕರಿಗೆ ಕನ್ಸರ್ವೆನ್ಸಿ ಲೇನ್‌ಗಳನ್ನು ತೆರಯಲು ಮುಂದಾಗಲಾಗಿದೆ. ಹಿರಿಯ ನಾಗರಿಕರು ವಾಕಿಂಗ್‌ ಮಾಡಬಹುದಾದ ಬೀದಿಗಳಾಗಿ ಕನ್ಸರ್ವೆನ್ಸಿಗಳನ್ನು ಪರಿವರ್ತಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.

ಆರಂಭದಲ್ಲಿ ವಾರ್ಡ್ ಸಂಖ್ಯೆ 45ರಲ್ಲಿ 1.2-4 ಚದರ ಕಿ.ಮೀ ಪ್ರದೇಶ, ವಾರ್ಡ್ ಸಂಖ್ಯೆ 65ರಲ್ಲಿ 0.87 ಚದರ ಕಿ.ಮೀ ಮತ್ತು ವಾರ್ಡ್ ಸಂಖ್ಯೆ 35ರಲ್ಲಿ 0.12 ಚದರ ಕಿ.ಮೀ ಪ್ರದೇಶವನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ.

ಹಿರಿಯ ನಾಗರಿಕರು ಎದುರುನೋಡುವ ಎಲ್ಲಾ ಸೌಲಭ್ಯಗಳು, ಅಂದರೆ ಬೆಂಚುಗಳು, ಲೈಟಿಂಗ್‌ ಮತ್ತು ರಸ್ತೆ ಸುರಕ್ಷತೆಯನ್ನು ಒದಗಿಸಲಾಗುವುದು. ಈ ಯೋಜನೆಯನ್ನು ನಗರ ಮತ್ತು ಭೂ ಸಾರಿಗೆ ನಿರ್ದೇಶನಾಲಯದ ಬೆಂಬಲದೊಂದಿಗೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ವಾಸ್ತುಶಿಲ್ಪಿ ಹಾಗೂ ಮಲ್ಲೇಶವರ ಸೋಶಿಯಲ್ ಮತ್ತು ಎಂ ಯುಎಲ್‌ ಸಹ-ಸಂಸ್ಥಾಪಕಿ ಸುಚಿತ್ರಾ ದೀಪ್ ಹೇಳಿದ್ದಾರೆ.

ಮಲ್ಲೇಶ್ವರಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ. ಇದರಿಂದಾಗಿ ಅಕ್ಕಪಕ್ಕದ ರಸ್ತೆಗಳಲ್ಲಿ ಮನೆ ಹೊಂದಿರುವವರು ನಡೆಯಲು ಕಷ್ಟವಾಗುತ್ತಿದೆ. ಯುವಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಒಟ್ಟಿಗೆ ಸೇರಲು ಮತ್ತು ಬೆರೆಯಲು ಜಾಗವಿಲ್ಲದಂತಾಗಿದೆ.

ವಿಶೇಷವಾಗಿ ಕೊರೋನಾ ಸಾಂಕ್ರಾಮಿಕ ರೋಗದ ನಂತರ, ಜನರು ಪರಸ್ಪರ ಭೇಟಿಯಾಗಲು ಮತ್ತು ಸಂಪರ್ಕಿಸಲು ಉತ್ಸುಕರಾಗಿದ್ದಾರೆ. ಪ್ರದೇಶದಾದ್ಯಂತ ಹೆಚ್ಚು ಸುರಕ್ಷಿತ ಸ್ಥಳಗಳನ್ನು ಹುಡುಕುತ್ತಿದ್ದಾರೆ. ಹಿರಿಯ ನಾಗರಿಕರಷ್ಟೆ ಅಲ್ಲದೆ ಮತ್ತು ಅಂಬೆಗಾಲಿಡುವ ಮಕ್ಕಳಿಗೂ ಇಲ್ಲಿ ಸ್ಥಳ ಮಾಡಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಮಲ್ಲೇಶ್ವರ ಹಿರಿಯ ನಾಗರಿಕರಾದ ವಿಜಯ ಶೆಣೈ, ಮಲ್ಲೇಶ್ವರದಲ್ಲಿ ನಡಿಗೆ ಮಾಡಲು ಪಾರ್ಕ್‌ಗಳಿವೆ. ಆದರೆ ಅಲ್ಲಿ ಬೆಳಗ್ಗಿನ ಹಾಗೂ ಸಂಜೆಯ ಸಮಯದಲ್ಲಿ ಮಾತ್ರ ಪ್ರವೇಶವಿರುತ್ತದೆ. ಆಗಲೂ ಜನರು ಕಿಕ್ಕಿರಿದು ತುಂಬಿರುತ್ತಾರೆ. ಬಹುತೇಕ ಫುಟ್‌ಪಾತ್‌ಗಳನ್ನು ಅಗೆಯಲಾಗಿದ್ದು, ನಡೆದಾಡಲು ಅಸುರಕ್ಷಿತವಾಗಿವೆ. ಹಿರಿಯ ನಾಗರಿಕರಿಗೆ ಕನ್ಸರ್ವೆನ್ಸಿ ಲೇನ್‌ಗಳು ಉತ್ತಮ ಆಯ್ಕೆಯಾಗಿವೆʼ ಎಂದಿದ್ದಾರೆ.

ಕನ್ಸರ್ವೆನ್ಸಿ ಲೇನ್‌ಗಳನ್ನು ಸಾರ್ವಜನಿಕ ಸ್ಥಳಗಳಾಗಿ ಮರು ನಿರ್ಮಾಣ ಮಾಡುವ ಮೂಲಕ ಮಲ್ಲೇಶ್ವರದ ನಡಿಗೆಯನ್ನು ಸುಧಾರಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಸುಚಿತ್ರಾ ಹೇಳಿದ್ದಾರೆ. ಮೇ 26ರಂದು ಈ ಕುರಿತು ಸಾರ್ವಜನಿಕ ಸಭೆಯನ್ನು ಕರೆಯಲಾಗಿದ್ದು, ಅಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಗುತ್ತದೆ.

ಇದನ್ನೂ ಓದಿ: ಜಿನದತ್ತ ದೇಸಾಯಿ, ಮೊಗಸಾಲೆ, ಸರಸ್ವತಿ ಚಿಮ್ಮಲಗಿ ಸೇರಿ 15 ಸಾಧಕರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Exit mobile version