Site icon Vistara News

Residential Schools : ಜ್ಞಾನದೇಗುಲ ವಿವಾದ; ಹಿಂದು ಸಂಸ್ಕೃತಿ ನಾಶಕ್ಕೆ ಹುನ್ನಾರ ಎಂದ ಮೋಹನ ಗೌಡ

Residential Schools Mohan Gowda

ಬೆಂಗಳೂರು: ರಾಜ್ಯದ ವಸತಿ ಶಾಲೆಗಳ (Residential Schools) ಪ್ರವೇಶ ದ್ವಾರದಲ್ಲಿ ಇದುವರೆಗೆ ‘ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂದು ರಾಷ್ಟ್ರಕವಿ ಕುವೆಂಪು (Rashtrakavi Kuvempu) ಅವರ ಸುಸಂಸ್ಕೃತ ಸಂದೇಶ ನೀಡುವ ಫಲಕಗಳನ್ನು ಹಾಕಲಾಗಿತ್ತು. ಈಗ ರಾಜ್ಯದ ಹಲವು ವಸತಿ ಶಾಲೆಗಳಲ್ಲಿ ಈ ಘೋಷವಾಕ್ಯದ ಫಲಕಗಳನ್ನು ಬದಲಾವಣೆ ಮಾಡಿ `ಧೈರ್ಯವಾಗಿ ಪ್ರಶ್ನಿಸಿ’ ಎಂಬ ವಾಕ್ಯವನ್ನು ಸೇರಿಸಲಾಗುತ್ತಿದೆ (Slogan Change in Residential schools). ಸಮಾಜ ಕಲ್ಯಾಣ ಇಲಾಖೆಯ ಈ ನಡೆಯನ್ನು ಹಿಂದೂ ಜನಜಾಗೃತಿ ಸಮಿತಿಯ (Hindu Janagjagruti Samiti) ರಾಜ್ಯ ವಕ್ತಾರ ಮೋಹನ ಗೌಡ (Mohan Gowda) ತೀವ್ರವಾಗಿ ಖಂಡಿಸಿದ್ದಾರೆ.

ʻʻಸರಕಾರವು ಕೈಮುಗಿಯುವುದನ್ನು ಕೋಮು ಭಾವನೆ ಎಂದು ಪರಿಗಣಿಸಿ ಮಕ್ಕಳಲ್ಲಿರುವ ನಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ನಾಶಪಡಿಸುವ ಷಡ್ಯಂತ್ರ ರೂಪಿಸಿದೆ. ಕೊರೋನಾ ಕಾಲದಲ್ಲಿ ಬ್ರಿಟನ್‌ನ ಅಧ್ಯಕ್ಷ ಚಾರ್ಲ್ಸ್‌ ಅವರು ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳ ಪ್ರಧಾನಿಗಳು ನಮಸ್ಕಾರ ಮಾಡುವ ಮೂಲಕ ಸ್ವಾಗತ ಸಂಸ್ಕೃತಿಯನ್ನು ಪಾಲಿಸಿದರು. ಇದು ನಮ್ಮ ದೇಶದ ಶ್ರೇಷ್ಠ ಸಂಸ್ಕೃತಿಯಾಗಿದೆ. ಇದನ್ನು ತೊಡೆದುಹಾಕಲು ಪ್ರಯತ್ನಿಸುತ್ತಿರುವ ಸರಕಾರದ ನಡೆ ಅತ್ಯಂತ ಖಂಡನೀಯವಾಗಿದೆʼ ಎಂದು ಮೋಹನ ಗೌಡ ಹೇಳಿದರು.

ದೇಶದಲ್ಲಿ ಹಲವು ಕಡೆ ಹಿಂದೂ ಸಂಸ್ಕೃತಿಯನ್ನು ಬಿಂಬಿಸುವ ವಾಕ್ಯಗಳಿವೆ. ಸುಪ್ರೀಂಕೋರ್ಟ್‌ನ ಫಲಕದಲ್ಲಿ ‘ಸತ್ಯಮೇವ ಜಯತೇ’ ಎಂದು ಬರೆದಿರುವುದಕ್ಕೂ ಕೋಮು ಬಣ್ಣ ಬಳಿಯುತ್ತೀರಾ? ವಿಧಾನ ಸೌಧದಲ್ಲಿ `ಸರಕಾರದ ಕೆಲಸ, ದೇವರ ಕೆಲಸ’ ಎಂದು ಹಾಕಲಾಗಿದೆ, ಇದಕ್ಕೂ ಕೋಮು ಬಣ್ಣ ಬಳಿಯುತ್ತೀರಾ ಎಂದು ಪ್ರಶ್ನಿಸುವಂಥಾಗಿದೆ ಎಂದು ಮೋಹನ ಗೌಡ ಹೇಳಿದ್ದಾರೆ.

ಕಾಂಗ್ರೆಸ್‌ ಸರ್ಕಾರ ನಮ್ಮ ದೇಶದ ಮೂಲ ಸಂಸ್ಕೃತಿಯನ್ನೇ ತೆಗೆದು ಹಾಕಲು ಮುಂದಾಗಿರುವಾಗ ಮುಂದೆ ಆ ಮಕ್ಕಳು ಸುಸಂಸ್ಕೃತರಾಗಿ ದೇಶ ನಡೆಸುವುದಾದರೂ ಹೇಗೆ ಎಂಬ ಆತಂಕವೂ ನಿರ್ಮಾಣವಾಗಿದೆ. ಒಟ್ಟಾರೆ ನೋಡುವುದಾದರೆ ಶಾಲೆಯಲ್ಲಿ ಹಿಂದೂ ವಿರೋಧವನ್ನು ಬಿತ್ತುವ ಮತ್ತು ಧರ್ಮದ ಮೇಲಿನ ಶ್ರದ್ಧೆಗೆ ತೊಂದರೆ ಮಾಡುವ ಹಿನ್ನೆಲೆಯನ್ನು ಹೊಂದಿರುವ ಸರಕಾರದ ಈ ನಡೆಗೆ ಕಾರಣವಾಗಿದೆ. ಪೋಷಕರು ಮತ್ತು ಮಕ್ಕಳು ಸರಕಾರದ ಈ ನೀಚ ಕೃತ್ಯವನ್ನು ಅರಿತು ಕೂಡಲೇ ಫಲಕಗಳ ಮರುಬದಲಾವಣೆಗೆ ಆಗ್ರಹಿಸಬೇಕು ಎಂದು ಮೋಹನ ಗೌಡ ಕರೆ ನೀಡಿದರು.

ಇದನ್ನೂ ಓದಿ : Residential Schools : ಇದು ಮಣಿವಣ್ಣನ್‌ ಹುಚ್ಚು ಆದೇಶ. ಅಧಿಕಾರಿಗಳು ಸರ್ಕಾರದ ಮಾತು ಕೇಳ್ತಿಲ್ಲ: ಆರ್‌. ಅಶೋಕ್‌

ಏನಿದು ಘೋಷ ವಾಕ್ಯ ಬದಲಾವಣೆ ವಿವಾದ?

ರಾಜ್ಯದ ಎಲ್ಲ ಸರ್ಕಾರಿ ಹಾಸ್ಟೆಲ್‌ಗಳ ಪ್ರವೇಶ ದ್ವಾರದಲ್ಲಿ ʻಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾʼ ಎಂಬ ಘೋಷ ವಾಕ್ಯವಿದೆ. ಈ ನಡುವೆ, ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿರುವ ಕೆ. ಮಣಿವಣ್ಣನ್‌ ಅವರು ರಾತ್ರೋರಾತ್ರಿ ಟೆಲಿಗ್ರಾಂ ಗ್ರೂಪ್‌ ಮೂಲಕ ಆದೇಶವನ್ನು ಹೊರಡಿಸಿ, ಈ ಘೋಷ ವಾಕ್ಯವನ್ನು ʻಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿʼ ಎಂದು ಬದಲಾಯಿಸಲು ಸೂಚಿಸಿದ್ದರು. ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾಗದದಲ್ಲಿ ಬರೆದು ಅಂಟಿಸಿದ್ದಾರೆ.

ಇದು ಮುಂಜಾನೆಯ ಹೊತ್ತಿಗೆ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಬದಲಾವಣೆಯ ಅಗತ್ಯವನ್ನು ಪ್ರತಿಪಕ್ಷಗಳು ಪ್ರಶ್ನೆ ಮಾಡಿದವು. ಇದರ ನಡುವೆ ಕೆಲವು ಹಾಸ್ಟೆಲ್‌ಗಳಲ್ಲಿ ಈ ರೀತಿ ಬದಲಾವಣೆಯನ್ನು ಮರು ಸ್ಥಾಪಿಸಲಾಗಿದೆ.

Exit mobile version