ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆ (Traffic control) ನಿರ್ವಹಣೆಗೆ ಸಂಬಂಧಿಸಿದಂತೆ ಸೋಮವಾರ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಎರಡನೇ ಸಭೆ ನಡೆಯಿತು.
ಇದನ್ನೂ ಓದಿ | Rain Alert: ನಗರ ಸುತ್ತಿದ ಬಿಬಿಎಂಪಿ ಕಮೀಷನರ್, ರಸ್ತೆ, ಚರಂಡಿ ರಿಪೇರಿಗೆ ಸ್ಥಳದಲ್ಲೇ ಆರ್ಡರ್
ಸಭೆಯಲ್ಲಿ ಮಾತನಾಡಿದ ರಾಕೇಶ್ ಸಿಂಗ್, ನಗರದಲ್ಲಿ ಸಂಚಾರ ದಟ್ಟಣೆಯ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲಾ ಪ್ರಮುಖ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆಗಳನ್ನು ರೂಪಿಸಿಕೊಂಡು ಸಮಸ್ಯೆಯನ್ನು ಬಗೆಹರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಕೆ.ಆರ್.ಪುರ ಜಂಕ್ಷನ್ ನಲ್ಲಿ ಬಸ್ ನಿಲ್ದಾಣದ ಸ್ಥಳಕ್ಕೆ ಡಾಂಬರೀಕರಣ ಮಾಡಲು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ 10 ಪ್ರಮುಖ ಜಂಕ್ಷನ್‌ಗಳ ಪೈಕಿ ಈಗಾಗಲೇ ಗೊರಗುಂಟೆಪಾಳ್ಯ ಜಂಕ್ಷನ್, ಹೆಬ್ಬಾಳ ಜಂಕ್ಷನ್ ಹಾಗೂ ಕೆ.ಆರ್.ಪುರ ಜಂಕ್ಷನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.
ಇನ್ನುಳಿದಂತೆ ಕೆ.ಎಸ್ ಲೇಔಟ್ ಜಂಕ್ಷನ್, ಆರ್.ಆರ್-ಎಂ.ಆರ್ ಜಂಕ್ಷನ್, ಸಾರಕ್ಕಿ ಜಂಕ್ಷನ್, ಸಿಲ್ಕ್ ಬೋರ್ಡ್ ಜಂಕ್ಷನ್, ಇಬ್ಲೂರ್ ಜಂಕ್ಷನ್, ಜಯದೇವ ವೃತ್ತ ಹಾಗೂ ಕಾಡುಬೀಸನಹಳ್ಳಿ ಜಂಕ್ಷನ್ ಗಳಿಗೆ ಭೇಟಿ ನೀಡಿ ಅಲ್ಪಾವಧಿ ಹಾಗೂ ಧೀರ್ಘಾವದಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಂಚಾರ ದಟ್ಟಣೆಯಾಗುವುದನ್ನು ನಿಯಂತ್ರಿಸಲು ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ಈ ಸಂಬಂಧ ಇದೇ ಬುಧವಾರ ಇಬ್ಲೂರು, ಸೆಂಟ್ರಲ್ ಸಿಲ್ಕ್ ಬೋರ್ಡ್, ಸಾರಕ್ಕಿ ಹಾಗೂ ಜಯದೇವ ವೃತ್ತಕ್ಕೆ ಭೇಟಿ ನೀಡಿ ಪರಿಶೀಲಿಸಲು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಂಚಾರಿ ಪೊಲೀಸ್ ಇಲಾಖೆ ವತಿಯಿಂದ ಪ್ರಮುಖ ರಸ್ತೆಗಳಲ್ಲಿ ಗುರುತಿಸಿದ ವಾಟರ್ ಲಾಗಿಂಗ್ ಪಾಯಿಂಟ್ ಹಾಗೂ ಹದಗೆಟ್ಟ ರಸ್ತೆಗಳ ದುರಸ್ತಿ ಕಾರ್ಯವು ಪ್ರಗತಿಯಲ್ಲಿದ್ದು, ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕೆಂದರು.
ರಸ್ತೆ ಗುಂಡಿ ಮುಚ್ಚಿ
ನಗರದ ಎಂಟೂ ವಲಯಗಳಾದ್ಯಂತ ರಸ್ತೆಗುಂಡಿ ಮುಚ್ಚುವ ಕಾರ್ಯ ಸರಿಯಾಗಿ ಆಗಬೇಕು. ಈ ಸಂಬಂಧ ಎಲ್ಲಾ ವಲಯಗಳ ಮುಖ್ಯ ಇಂಜಿನಿಯರ್‌ಗಳು ತಮ್ಮ ವಾರ್ಡ್‌ಗಳಲ್ಲಿ ಗುರುತಿಸಿರುವ ರಸ್ತೆಗುಂಡಿಗಳನ್ನು ತ್ವರಿತವಾಗಿ ಮುಚ್ಚಬೇಕು. ಇನ್ನು ನಗರದ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಗುಂಡಿಗಳನ್ನು ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಅಭಿಯಂತರರ ನೇತೃತ್ವದಲ್ಲಿ ತ್ವರಿತವಾಗಿ ಮುಚ್ಚಲು ಸೂಚನೆ ನೀಡಿದರು.
ಜತೆಗೆ ನಗರದಲ್ಲಿ ಜಲಮಂಡಳಿ ವತಿಯಿಂದ ಕುಡಿಯುವ ನೀರು ಹಾಗೂ ಒಳ ಚರಂಡಿ ಕಾಮಗಾರಿ ಪೂರ್ಣಗೊಳಿರುವ ರಸ್ತೆಗಳನ್ನು ಪಟ್ಟಿಯನ್ನು ಪಡೆದು, ಆ ರಸ್ತೆಗಳ ಪುನಶ್ಚೇತನ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಇನ್ನು ಅವೆನ್ಯೂ ರಸ್ತೆ ಕಾಮಗಾರಿಯನ್ನು 1 ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದರು.
ಇದನ್ನೂ ಓದಿ | Bangalore Traffic | ಟ್ರಾಫಿಕ್ ದಟ್ಟಣೆ ನಿಭಾಯಿಸಲು ಸಿಎಂ ಸಮಾಲೋಚನೆ