ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ತಡರಾತ್ರಿ ಭೀಕರ ಅಪಘಾತ (Road Accident) ಸಂಭವಿಸಿದೆ. ಅಪಘಾತದಲ್ಲಿ ಎಲಿವೇಟೆಡ್ ಫ್ಲೈ ಓವರ್ ಸಿಬ್ಬಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಎಲಿವೇಟೆಡ್ ಫ್ಲೈ ಓವರ್ ಸಿಬ್ಬಂದಿ ಮಂಜುನಾಥ್ (42) ಮೃತ ದುರ್ದೈವಿ.
ಕಾರೊಂದು ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಕೆಟ್ಟು ನಿಂತಿತ್ತು. ಹಿಗಾಗಿ ಫ್ಲೈ ಓವರ್ ಸಿಬ್ಬಂದಿ ಟೋಯಿಂಗ್ ವೆಹಿಕಲ್ ಕರೆಸಿ ತೆರವು ಮಾಡಿಸುತ್ತಿದ್ದರು. ಈ ವೇಳೆ ಮಂಜುನಾಥ್ ಅವರು ಫ್ಲೈಓವರ್ ಟ್ರಾಫಿಕ್ ನಿಯಂತ್ರಣ ಮಾಡುತ್ತಿದ್ದರು.
ಇನ್ನೇನು ಕಾರು ಟೋಯಿಂಗ್ ಮಾಡಬೇಕು ಎನ್ನುವ ವೇಳೆ ಅತಿವೇಗವಾಗಿ ಬಂದ ಗೂಡ್ಸ್ ವಾಹನದಿಂದ ಸರಣಿ ಅಪಘಾತ ಸಂಭವಿಸಿದೆ. ಗೂಡ್ಸ್ ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದೆ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಫ್ಲೈ ಓವರ್ ಟೋಲ್ ಸಿಬ್ಬಂದಿ ವಾಹನ ಮತ್ತು ಕಾರಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಬಳಿಕ ಪಲ್ಟಿ ಹೊಡೆದಿದೆ.
ಎರಡು ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿದೆ. ಮಂಜುನಾಥ್ ಸೇರಿದಂತೆ ಮೂವರಿಗೆ ಗಂಭೀರ ಗಾಯವಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ. ಉಳಿದ ಇಬ್ಬರಿಗೆ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ಮಗಳ ಮದುವೆ ಸಿದ್ಧತೆಯಲ್ಲಿದ್ದ ಮಂಜುನಾಥ್
ಇದೇ ತಿಂಗಳ 10ರಂದು ಮಗಳ ಮದುವೆ ಇತ್ತು. ಹೀಗಾಗಿ ಮಂಜುನಾಥ್ ಅವರು ಮದುವೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ನಿನ್ನೆ ಶನಿವಾರ ಬೆಳಗ್ಗೆಯೂ ಸಹ ಮದುವೆಯ ಆಮಂತ್ರಣ ಪತ್ರಿಕೆ ಹಂಚಿ ಬಂದಿದ್ದರು. ನೈಟ್ ಶಿಫ್ಟ್ ಕೆಲಸಕ್ಕೆ ಹಾಜರಾಗಿದ್ದ ಮಂಜುನಾಥ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಗಳ ಮದುವೆ ಸಂಭ್ರಮದಲ್ಲಿ ಇರಬೇಕಾದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.
ಇದನ್ನೂ ಓದಿ: KEA : ವೈದ್ಯಕೀಯ ಅರ್ಹತಾ ಪಟ್ಟಿ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ; ಪದ್ಮನಾಭ ಮೆನನ್‌ಗೆ ಮೊದಲ ಸ್ಥಾನ
ರಸ್ತೆ ಗುಂಡಿಯಿಂದಾಗಿ ಕಾಲುವೆಗೆ ಬಿದ್ದ ಬೈಕ್; ಓರ್ವ ನಾಪತ್ತೆ
ಬೆಳಗಾವಿ: ರಸ್ತೆ ಗುಂಡಿಗೆ ಬಿದ್ದ ಬೈಕ್ ಬಳಿಕ ಆಯ ತಪ್ಪಿ ಕಾಲುವೆಗೆ ಬಿದ್ದಿರುವ ಘಟನೆ ಬೆಳಗಾವಿ ತಾಲೂಕಿನ ಅಲತಗಾ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಹಿಂಬದಿ ಸವಾರ ಓಂಕಾರ್ ಅರುಣ್ ಪಾಟೀಲ್ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದು ನಾಪತ್ತೆಯಾಗಿದ್ದು, ಬೈಕ್ ಓಡಿಸುತ್ತಿದ್ದ ಜ್ಯೋತಿನಾಥ್ ಪಾಟೀಲ್ ಈಜಿ ದಡ ಸೇರಿದ್ದಾರೆ. ಓಂಕಾರ್ ಅರುಣ್ ಪಾಟೀಲ್ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭವಾಗಿದ್ದು, ಡಿಸಿಪಿ ಸ್ನೇಹಾ, ತಹಶಿಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎನ್‌ಡಿಆರ್‌ಎಫ್ ತಂಡವೂ ಸ್ಥಳದಲ್ಲಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ