ಬೆಂಗಳೂರು: ಮಕ್ಕಳನ್ನು ಎಷ್ಟು ಜಾಗ್ರತೆಯಿಂದ ನೋಡಿಕೊಂಡರು ಕಡಿಮೆಯೇ.. ಪೋಷಕರು ಸದಾ ಮಕ್ಕಳ ಮೇಲೊಂದು ಕಣ್ಣೀಡಲೆಬೇಕು, ಇಲ್ಲದಿದ್ದರೆ ದುರಂತಗಳೇ ನಡೆದು ಹೋಗುತ್ತವೆ. ಸದ್ಯ ಇದಕ್ಕೆ ಪೂರಕ ಎಂಬಂತೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ (Road Accident) ನಾಲ್ಕು ವರ್ಷದ ಮಗುವೊಂದು ದಾರುಣವಾಗಿ ಮೃತಪಟ್ಟಿದೆ.
ಟಿಪ್ಪರ್ ಲಾರಿ ಹರಿದು 4 ವರ್ಷದ ಮಗುವೊಂದು ಮೃತಪಟ್ಟಿದೆ. ಲಾರಿ ಚಕ್ರಕ್ಕೆ ಸಿಲುಕಿದ ಮಗುವಿನ ತಲೆ ಹಾಗೂ ದೇಹ ಛಿದ್ರ ಛಿದ್ರವಾಗಿತ್ತು. ಬೆಂಗಳೂರಿನ ರಾಮೋಹಳ್ಳಿ ಬಸ್ ನಿಲ್ದಾಣದಲ್ಲಿ ಬಳಿ ಶನಿವಾರ ಸಂಜೆ 5.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಆಯುಷ್ಯ್ (4) ಮೃತ ದುರ್ದೈವಿ.
ಅಮರ್ ಹಾಗೂ ಪೂಜಾ ದಂಪತಿಗೆ ಅವಳಿ ಮಕ್ಕಳಿದ್ದು, ಉತ್ತರ ಭಾರತದಿಂದ ಬೆಂಗಳೂರಿನ ರಾಮೋಹಳ್ಳಿಯಲ್ಲಿ ಪೇಟಿಂಗ್ ಕೆಲಸ ಮಾಡಲು ಬಂದಿದ್ದರು. ನಿನ್ನೆ ಶನಿವಾರ ಸಂಜೆ ಪೂಜಾ ತನ್ನಿಬ್ಬರು ಮಕ್ಕಳ ಜತೆಗೆ ಮೊಬೈಲ್ ಅಂಗಡಿಗೆ ಬಂದಿದ್ದರು. ಒಬ್ಬ ಮಗು ತಾಯಿ ಜತೆಗೆ ಅಂಗಡಿಯೊಳಗೆ ಇದ್ದ.
ಈ ವೇಳೆ ಮತ್ತೊಬ್ಬ ಮಗ ಆಯ್ಯುಷ್ ತಾಯಿ ಕೈ ಬಿಡಿಸಿಕೊಂಡಿದ್ದ. ಬಳಿಕ ಆಟವಾಡುತ್ತಾ ಏಕಾಏಕಿ ರಸ್ತೆಗೆ ಓಡಿದ್ದ. ಇದೇ ವೇಳೆ ಆ ರಸ್ತೆಯಲ್ಲಿ ಬಸ್ ಅನ್ನು ಓವರ್ ಟೆಕ್ ಮಾಡಲು, ವೇಗವಾಗಿ ಬಂದ ಟಿಪ್ಪರ್ ಲಾರಿಯು ಆಯ್ಯುಷ್‌ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಆಯ್ಯುಷ್‌ನ ಮೇಲೆ ಚಕ್ರ ಹರಿದಿದ್ದು, ಮಾಂಸದ ಮುದ್ದೆಯಾಗಿತ್ತು. ಈ ಘಟನೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಲಾರಿ ಗ್ಲಾಸ್ ಪುಡಿ ಪುಡಿ ಮಾಡಿದ ಸ್ಥಳೀಯರು
ನೋಡನೋಡುತ್ತಿದ್ದ ತಾಯಿ ಕಣ್ಮುಂದೆಯೇ ಮಗ ಆಯ್ಯುಷ್ ಲಾರಿ ಚಕ್ರಕ್ಕೆ ಸಿಲುಕಿ ಛಿದ್ರ ಛಿದ್ರವಾಗಿದ್ದ. ಇನ್ನು ಘಟನೆಯಿಂದ ಸಿಟ್ಟಾದ ಸ್ಥಳೀಯರು ಟಿಪ್ಪರ್ ಲಾರಿಗೆ ಕಲ್ಲು ತೂರಿ, ಲಾರಿ ಗ್ಲಾಸ್ ಪುಡಿ ಪುಡಿ ಮಾಡಿದರು. ಲಾರಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಸದ್ಯ ಮೃತ ಕುಟುಂಬಸ್ಥರಿಂದ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಲಾರಿಯನ್ನು ಹಾಗೂ ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Road Accident: ಮದುವೆಗೆ ಹೋಗಿದ್ದವರು ಮಸಣಕ್ಕೆ; ಕಾರು-ಟ್ರಕ್ ಡಿಕ್ಕಿಯಾಗಿ 9 ಜನ ಸಾವು
ಬೀದರ್‌ನಲ್ಲಿ ಕಾರು ಪಲ್ಟಿಯಾಗಿ ಒಬ್ಬ ಸ್ಥಳದಲ್ಲೇ ಸಾವು; ಮತ್ತೊಬ್ಬನಿಗೆ ಗಾಯ
ಬೀದರ್: ಜಿಲ್ಲೆಯ ಬಸವಕಲ್ಯಾಣ (Basavakalyan) ತಾಲೂಕಿನಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು (Road Accident), ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊಬ್ಬನಿಗೆ ಗಾಯಗಳಾಗಿದ್ದು, ಕಾರಿನಲ್ಲಿದ್ದ ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಸುನೀಲ್ ಬಸವರಾಜ್ ನರುಣೆ (28) ಮೃತರು. ಗಾಯಗೊಂಡಿರುವ ಅಂಕುಶ್ ಪೂಜಾರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನಿಬ್ಬರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಬಸವಕಲ್ಯಾಣ ತಾಲೂಕಿನ ಸಸ್ತಾಪುರ ಬಂಗ್ಲಾದ ಅತಲಾಪೂರ ಕ್ರಾಸ್ ಬಳಿ ಎರ್ಟಿಗಾ ಕಾರು ವೇಗವಾಗಿ ಚಲಿಸುತ್ತಿತ್ತು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಸುನೀಲ್ ಬಸವರಾಜ್ ನರುಣೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಂಕುಶ್ ಪೂಜಾರಿಗೆ ಬಸವಕಲ್ಯಾಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಹೊರವಲಯದ ಕಣಿವೆ ತಿರುವಿನಲ್ಲಿ ಶನಿವಾರ (ಏಪ್ರಿಲ್ 20) ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಣಿವೆಯಲ್ಲಿ ಪಲ್ಟಿ ಹೊಡೆದಿದ್ದು, ಸ್ಥಳದಲ್ಲೇ ಒಬ್ಬರು ಮೃತಪಟ್ಟಿದ್ದರು. ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಂಭೀರವಾದ ಗಾಯಗಳಾಗಿವೆ. ಮಂಜುನಾಥ (36) ಸ್ಥಳದಲ್ಲೇ ಮೃತಪಟ್ಟವರು. ಸತೀಶ್ ಹಾಗೂ ಸುಚೇತ ಎಂಬುವವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಹೊಳಲ್ಕೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಮೂವರೂ ಶಿವಮೊಗ್ಗ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ.
ಇವರು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕಾರಲ್ಲಿ ಹೊರಟಿದ್ದರು. ಮೃತ ಮಂಜುನಾಥ್ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿದ್ದರು. ವೀಕೆಂಡ್ ಹಿನ್ನೆಲೆಯಲ್ಲಿ ಊರಿನತ್ತ ಹೊರಟಿದ್ದರು ಎನ್ನಲಾಗಿದೆ. ಕಾರು ವೇಗವಾಗಿದ್ದ ಕಾರಣ ಹೊಳಲ್ಕೆರೆ ಹೊರವಲಯದ ಕಣಿವೆ ತಿರುವಿನಲ್ಲಿ ಕಾರು ನಿಯಂತ್ರಣಕ್ಕೆ ಸಿಗಲಿಲ್ಲ. ಹೀಗಾಗಿ ಪಲ್ಟಿ ಹೊಡೆದಿತ್ತು. ಈ ವೇಳೆ ತೀವ್ರ ರಕ್ತಸ್ರಾವವಾಗಿ ಮಂಜುನಾಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನಿಬ್ಬರಿಗೆ ಭಾರಿ ಗಾಯಗಳಾಗಿವೆ. ಹೊಳಲ್ಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ