ಬೆಂಗಳೂರು: ಬೆಂಗಳೂರಿನಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್‌ಗೆ (Road Accident) ಬೈಕ್ ಸವಾರ ಸ್ಪಾಟ್ ಡೆತ್ ಆಗಿದ್ದಾನೆ. ಬೆಂಗಳೂರಿನ ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯ ನಲ್ಲೂರು ಹಳ್ಳಿ ಮುಖ್ಯರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೂರು ದಿನದ ಹಿಂದೆ ನಡೆದ ಅಪಘಾತ ತಡವಾಗಿ ಬೆಳಕಿಗೆ ಬಂದಿದೆ.
ನಲ್ಲೂರು ಹಳ್ಳಿಯ ನಿವಾಸಿಯಾಗಿದ್ದ 19 ವರ್ಷದ ಯುವಕ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಸ್ಕೂಟರ್‌ನಲ್ಲಿ ವೇಗವಾಗಿ ಬರುತ್ತಿದ್ದ ಯುವಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಗುದ್ದಿದ್ದಾನೆ. ಬಳಿಕ ಕಂಟ್ರೊಲ್ ಕಳೆದುಕೊಂಡ ಸವಾರ ವಾಟರ್ ಟ್ಯಾಂಕರ್ ಚಕ್ರಕ್ಕೆ ಸಿಲುಕಿದ್ದಾನೆ.
ಟ್ಯಾಂಕರ್ ಚಕ್ರ ಹರಿದು ಗಂಭೀರ ಗಾಯಗೊಂಡಿದ್ದ ಯುವಕನನ್ನು ಕೂಡಲೇ ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟಿದ್ದಾನೆ. ಘಟನೆ ಸಂಬಂಧ ವೈಟ್ ಫೀಲ್ಡ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಪ್ರವಹಿಸಿ ವೃದ್ಧೆ ಸಾವು
ಶಿವಮೊಗ್ಗ : ವಿದ್ಯುತ್ ತಗುಲಿ ವೃದ್ಧೆ ದಾರುಣವಾಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆಯ ಮಲ್ಲಾಪುರದಲ್ಲಿ ನಡೆದಿದೆ. ಪಾರ್ವತಮ್ಮ (67) ಮೃತಪಟ್ಟ ದುರ್ದೈವಿ. ಭಾನುವಾರ ಬೆಳಗ್ಗೆ ಮನೆ ಮುಂಭಾಗದಲ್ಲಿರುವ ಉನುಗೋಲು ತೆಗೆಯುವಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಒದ್ದಾಡಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಹಾಗೂ ಮೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ರಿಪ್ಪನಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಧ್ಯರಾತ್ರಿಯಲ್ಲಿ ಮನೆಗೆ ನುಗ್ಗಿದ ಲಾರಿ!
ದಾವಣಗೆರೆಯ ಕುರ್ಕಿ ಗ್ರಾಮದ ಮನೆಯೊಂದರ ಒಳಗೆಯೇ ಲಾರಿ ನುಗ್ಗಿದೆ. ಮಧ್ಯರಾತ್ರಿ 12 ಗಂಟೆಗೆ ಬೀರೂರು ಸಮ್ಮಸಗಿ ರಸ್ತೆಯಲ್ಲಿ ಚಲಿಸುತ್ತಿದ್ದ ಗೂಡ್ ಶೆಡ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದೆ. ಹಾಲುವರ್ತಿ ರಾಮಣ್ಣ ಹಾಗು ಜಯಪ್ಪನ ಕುಟುಂಬ ಸದಸ್ಯರು ಮನೆಯಲ್ಲಿದ್ದ ವೇಳೆ ಲಾರಿ ನುಗ್ಗಿದೆ. ಮನೆಯ ಚಾವಣಿಗೆ ತಾಗಿ ಹಠಾತ್ ಲಾರಿ ನಿಂತಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಂಬಾಗಿಲಿಗೆ ಲಾರಿ ಮುಖ ಮಾಡಿ ನಿಂತಿದ್ದರಿಂದ ಮನೆಯಿಂದ ಹೊರಬರಲಾಗದೇ ಒಳಗಿದ್ದವರು ಪರದಾಡಿದರು. ಗ್ರಾಮಸ್ಥರ ನೆರವಿನಿಂದ ಏಣಿ ಮೂಲಕ ಹೊರಬಂದರು. ಲಾರಿ ನುಗ್ಗಿದ ರಭಸಕ್ಕೆ ಮನೆ ಮುಂದೆ ಲೈಟ್ ಕಂಬಗಳು ಜಖಂಗೊಂಡಿದೆ. ರಾಜ್ಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಹದಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಪರಿಚಿತ ವಾಹನ ಡಿಕ್ಕಿ ಸವಾರ ಸಾವು
ಬೈಕ್ ಸವಾರನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈರಣ್ಣ (35) ಮೃತ ದುರ್ದೈವಿ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಘಟನೆ ನಡೆದಿದೆ. ಸ್ಥಳಕ್ಕೆ ಮಿಡಿಗೇಶಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ