ಬೆಂಗಳೂರು/ಆನೇಕಲ್: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಬುಧವಾರ ಸುರಿದ ಮಳೆಗೆ ಬೈಕ್ ಸವಾರರೊಬ್ಬರು (Road Accident) ಬಲಿಯಾಗಿದ್ದಾರೆ. ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಬಳಿ ದುರ್ಘಟನೆ ನಡೆದಿದೆ. ಲೋಕೇಶ್ ಜೆ (41) ಮೃತ ಪಟ್ಟವರು.
ಲೋಕೇಶ್ ರಾತ್ರಿ 9.30ರ ಸುಮಾರಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಯಲಹಂಕ ಕಡೆಯಿಂದ ಕೋರಮಂಗಲದ ಕಡೆಗೆ ಹೋಗಲು ಹೆಬ್ಬಾಳ ಫ್ಲೈಓವರ್ ಪ್ರವೇಶಿಸಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದ್ದಿದ್ದರು. ಧಾರಕಾರ ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಬೈಕ್ ಸವಾರ ಬಿದ್ದಿರುವುದನ್ನು ಇತರೆ ವಾಹನ ಸವಾರರು ಗಮನಿಸಿಲ್ಲ. ಕೆಳಗೆ ಬಿದ್ದ ಲೋಕೇಶ್ ಮೇಲೆಯೇ ಹರಿದಿದ್ದು, ತಲೆಗೆ ಗಂಭೀರ ಗಾಯವಾಗಿತ್ತು.
ರಸ್ತೆಯಲ್ಲಿ ಬಿದ್ದು ನರಳಾಡುತ್ತಿರುವುದನ್ನು ಕಂಡು ಕೆಲವರು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ. ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಲೋಕೇಶ್ ಮೃತಪಟ್ಟಿದ್ದಾರೆ. ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಯುವಕನಿಗೆ ಡಿಕ್ಕಿ ಹೊಡೆದು ಪರಾರಿಯಾದ ಚಾಲಕ
ರಸ್ತೆ ದಾಟುತ್ತಿದ್ದ ಯುವಕನಿಗೆ ವೇಗವಾಗಿ ಬಂದ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಕ್ಯಾಂಟರ್ ಚಾಲಕ ಪರಾರಿ ಆಗಿದ್ದಾನೆ. 19 ವರ್ಷದ ಆಕಾಶ್ ಸ್ಥಳದಲ್ಲೇ ಮೃತಪಟ್ಟವರು.
ಡಿಕ್ಕಿ ಹೊಡೆದು ಎಸ್ಕೇಪ್ ಆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಬಳಿ ಅಪಘಾತ ನಡೆದಿದೆ. ಗುಲ್ಬರ್ಗ ಮೂಲದ ಆಕಾಶ್ ನಿನ್ನೆ ಬುಧವಾರ ರಾತ್ರಿ ತಂದೆ ನೋಡಲು ಬಂದಿದ್ದ. ಆಕಾಶ್ ತಂದೆ ಆನೇಕಲ್ ಚಂದಾಪುರ ಮುಖ್ಯ ರಸ್ತೆಯ ಬಾರ್ ಒಂದರಲ್ಲಿ ವಾಚ್ ಮ್ಯಾನ್ ಆಗಿದ್ದರು. ತಂದೆಯನ್ನು ಮಾತನಾಡಿಸಿಕೊಂಡು ರಸ್ತೆ ದಾಟಲು ಮುಂದಾಗಿದ್ದು, ಈ ಸಂದರ್ಭದಲ್ಲಿ ವೇಗವಾಗಿ ಬಂದು ಕ್ಯಾಂಟರ್ ಡಿಕ್ಕಿ ಹೊಡೆದಿದೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಎಸ್ಕೇಪ್ ಆಗಿರುವ ಕ್ಯಾಂಟರ್ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: Self Harming : ವಯಸ್ಸಲ್ಲದ ವಯಸ್ಸಲ್ಲಿ ಲವ್; 15ನೇ ವರ್ಷಕ್ಕೆ ಮದುವೆ ಆದವಳು 17ನೇ ವರ್ಷಕ್ಕೆ ಆತ್ಮಹತ್ಯೆ
ಕರೆಂಟ್ ಶಾಕ್‌ಗೆ ಪ್ರಜ್ಞೆ ತಪ್ಪಿದ ಲೈನ್ ಮ್ಯಾನ್
ಚಾಮರಾಜನಗರದ ಚಮಾಲ್ ಬೀದಿಯಲ್ಲಿ ವಿದ್ಯುತ್ ಕಂಬವೇರಿ ರಿಪೇರಿ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿದೆ. ವಿದ್ಯುತ್ ಸ್ಪರ್ಶದಿಂದ ಲೈನ್ ಮ್ಯಾನ್ ಕಿರಣ್ ಎಂಬಾತ ಪ್ರಜ್ಞೆ ತಪ್ಪಿದ್ದರು. ಚೆಸ್ಕಾಂ ಸಿಬ್ಬಂದಿ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಲೈನ್‌ಮ್ಯಾನ್ ಕಿರಣ್‌ನನ್ನು ಕೆಳೆಗಿಳಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಲೈನ್‌ಮ್ಯಾನ್‌ಗೆ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರು ಅಪೋಲೋ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಬೆಂಗಳೂರಲ್ಲಿ ಧರೆಗುರುಳಿದ ಬೃಹತ್ ಮರ
ಬೆಂಗಳೂರಿನ ಗೋವಿಂದರಾಜನಗರದ ಸರಸ್ವತಿ ನಗರದಲ್ಲಿ ಬೃಹತ್ ಗಾತ್ರದ ಮರವೊಂದು ಧರೆಗುರುಳಿದೆ. ಮರವು ವಿದ್ಯುತ್ ಕಂಬದ ಮೇಲೆ ಬಿದ್ದ ರಭಸಕ್ಕೆ ಕಾರೊಂದು ಜಖಂಗೊಂಡಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಳಗಾವಿಯ ನಾಲೆಯಲ್ಲಿ ತೇಲಿ ಬಂದ ಅಪರಿಚಿತ ವ್ಯಕ್ತಿಯ ಮೃತ ದೇಹ
ಬೆಳಗಾವಿಯ ಉಜ್ವಲ ನಗರದ ನಾಲೆಯಲ್ಲಿ ವ್ಯಕ್ತಿಯೊಬ್ಬರ ಶವ ತೇಲಿ ಬಂದಿದೆ. ಶವ ಕಂಡು ಹೌಹಾರಿದ ಸ್ಥಳೀಯ ನಿವಾಸಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಮಾಳಮಾರುತಿ ಠಾಣಾ ಪೊಲೀಸರು ಶವ ಹೊರತೆಗೆದಿದ್ದಾರೆ. ಸುಮಾರು 33 ರಿಂದ 35 ರ ಆಸುಪಾಸಿನ ಅಂದಾಜಿನ ಯುವಕನ ಶವದ ಕೈ ಮೇಲೆ ಲಕ್ಷ್ಮಣ ಹೆಚ್ ಎಂಬ ಟ್ಯಾಟು ಪತ್ತೆಯಾಗಿದೆ. ವಿಪರೀತ ಮಳೆಗೆ ನಾಲೆಯ ಪ್ರವಾಹಕ್ಕೆ ಶವ ತೇಲಿ ಬಂದಿರುವ ಶಂಕೆ ಇದೆ. ಪ್ರಕರಣ ದಾಖಲಿಸಿಕೊಂಡು ಮಾಳಮಾರುತಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೋಲಾರದಲ್ಲಿ ಬೆಂಕಿಗಾಹುತಿಯಾದ 9000 ಕೋಳಿ ಮರಿಗಳು
ಕೋಳಿ ಫಾರಂನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬರೋಬ್ಬರಿ 9,000 ಕೋಳಿ ಮರಿಗಳು ಮೃತಪಟ್ಟಿವೆ. ಸುಮಾರು ಹದಿನೈದು ಲಕ್ಷ ಮೌಲ್ಯದ ಕೋಳಿ ಮರಿಗಳ ಸಾವಿನಿಂದ ಮಾಲೀಕ ಕಂಗಲಾಗಿದ್ದಾರೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ರಾಮಸಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆರ್ನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮೋಹನ್ ಕೃಷ್ಣ ಎಂಬುವವರಿಗೆ ಸೇರಿದ ಕೋಳಿ ಫಾರಂ ಇದಾಗಿದ್ದು, ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಗ್ರಾಮ ಪಂಚಾಯತಿಯ ರಾಜಕೀಯ ವಿದ್ಯಮಾನಗಳೇ ಈ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಬೇತಮಂಗಲ ಸರ್ಕಲ್ ಇನ್ಸ್ಪೆಕ್ಟರ್ ರಂಗಸ್ವಾಮಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ