Site icon Vistara News

Road Accident : ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದ! ಬೈಕ್‌, ಕಾರುಗಳಿಗೆ ಡಿಕ್ಕಿ ಹೊಡೆದ ಬಿಎಂಟಿಸಿ; ನರಳಾಡಿದ ಸವಾರರು

Road Accident

ಬೆಂಗಳೂರು: ಬಿಎಂಟಿಸಿ ಚಾಲಕನ ಯಡವಟ್ಟಿಗೆ (Road Accident) ಸಾರ್ವಜನಿಕರು ನೋವು ಅನುಭವಿಸಬೇಕಾಯಿತು. ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಿದ್ದ ಬಿಎಂಟಿಸಿ ಡ್ರೈವರ್‌ ಬಳಿಕ ನೇರ ಬೈಕ್‌ಗಳಿಗೆ, ಕಾರುಗಳಿಗೆ ಗುದ್ದಿದ್ದ. ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ಮೇಲೆ ಬಿಎಂಟಿಸಿ ಬಸ್ (BMTC Accident) ಅಪಘಾತದ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.

ಏರ್‌ಪೋರ್ಟ್‌ನಿಂದ ನಗರದೊಳಗೆ ಬರುತ್ತಿದ್ದ ವೋಲ್ವೋ ಬಸ್ ಏಕಾಏಕಿ ಮುಂದಿದ್ದ ಬೈಕ್‌ಗಳಿಗೆ ಗುದ್ದಿದೆ. ಬಳಿಕ ಕಾರಿಗೆ ಗುದ್ದಿ ನಿಂತಿದೆ. ಬಸ್‌ನಲ್ಲಿದ್ದ ಕಂಡಕ್ಟರ್‌ ಬ್ರೇಕ್‌ ಹಿಡಿಯುವಂತೆ ಹೇಳಿದ್ದರೂ ಗಾಬರಿಯಲ್ಲಿ ಚಾಲಕ ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಿದ್ದಾನೆ. ಬಸ್‌ ಚಾಲಕನ ನಿರ್ಲಕ್ಷ್ಯ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಬಸ್ ಮುಂಭಾಗದಲ್ಲಿದ್ದ ಬೈಕ್‌ಗಳು ಹಾಗೂ ಕಾರು ಜಖಂಗೊಂಡಿದೆ. ಬೈಕ್‌ ಸವಾರರು ಗಾಯಗೊಂಡು ಚೀರಾಡುತ್ತಾ ನರಳಾಡುತ್ತಿದ್ದರು. ಬಸ್‌ ಗುದ್ದಿದ ರಭಸಕ್ಕೆ ಸವಾರರು ಒಬ್ಬರ ಮೇಲೆ ಒಬ್ಬರು ಬಿದ್ದಿದ್ದರು. ಅದೃಷ್ಟವಶಾತ್‌ ಸಣ್ಣಪುಟ್ಟ ಗಾಯದಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಿಎಂಟಿಸಿ ಚಾಲಕ ಅಮಾನತು

ಆ.12ರಂದು ಈ ಅಪಘಾತ ಸಂಭವಿಸಿದ್ದು ಚಾಲಕನನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ.
ಘಟಕ 25ಕ್ಕೆ ಸೇರಿದ ಬಿಎಂಟಿಸಿ ಬಸ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಚ್ಎಸ್ಆರ್ ಲೇಔಟ್ ಕಡೆಗೆ ಹೋಗುತ್ತಿತ್ತು. ಆ.12ರ ಬೆಳಗ್ಗೆ ಸುಮಾರು 9.25ಕ್ಕೆ ಎಸ್ಟೀಮ್ ಮಾಲ್ ಬಳಿ ಬಸ್ಸಿನ ಮುಂದಿನ ಭಾಗದಿಂದ ಕಾರಿನ ಹಿಂದಿನ ಭಾಗಕ್ಕೆ ಡಿಕ್ಕಿ ಆದ ಪರಿಣಾಮ ಕಾರು ಮುಂದೆ ಚಲಿಸಿ ಅದರ ಮುಂದೆ ಇದ್ದಂತಹ ಇನ್ನು ಎರಡು ಕಾರುಗಳಿಗೆ ಹಾಗೂ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಈ ಅಪಘಾತದಿಂದ ದ್ವಿಚಕ್ರ ವಾಹನ ಓರ್ವ ಸವಾರನ ಕಾಲಿಗೆ ಪೆಟ್ಟಾಗಿದೆ. ಘಟನೆಯಲ್ಲಿ ಯಾವುದೇ ರೀತಿಯ ಸಾವು-ನೋವು ಸಂಭವಿಸಿಲ್ಲ. ಸಂಸ್ಥೆಯ ಅಧಿಕಾರಿಗಳು ಅಪಘಾತಕ್ಕೆ ಸಂಬಂಧಪಟ್ಟ ಎಲ್ಲಾ ಅಂಶಗಳನ್ನು ಕೂಲಂಕೂಷವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ಚಾಲಕ ರಾಜಕುಮಾರ್ ಅಮಾನತ್ತಿನಲ್ಲಿಡಲಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ: Murder Case : ಕೆಲ್ಸ ಜಾಸ್ತಿ ಮನೆಗೆ ಬರಲ್ಲ ಎಂದವನು, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬೀದಿ ಹೆಣವಾದ

ರಸ್ತೆ ದಾಟುತ್ತಿದ್ದ ವೃದ್ಧೆಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ

ರಸ್ತೆ ದಾಟುತ್ತಿದ್ದ ವೃದ್ಧೆಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಆಂಧ್ರಪ್ರದೇಶ ಚಿತ್ತೂರಿನ ಆದಿಲಕ್ಷ್ಮಮ್ಮ‌ (69) ಎಂಬುವವರು ಮೃತಪಟ್ಟಿದ್ದಾರೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಜಂಬೂಸವಾರಿ ದಿಣ್ಣೆ ಬಳಿ ಅಪಘಾತ ನಡೆದಿದೆ. ನಿನ್ನೆ ಸೋಮವಾರ ಬೆಳಗ್ಗೆ 6 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ.

ಮಗಳ ಮನೆಗೆ ಬಂದಿದ್ದ ಆದಿಲಕ್ಷ್ಮಮ್ಮ ಚಿತ್ತೂರಿಗೆ ಹೊರಟಿದ್ದರು. ಬಸ್ ಹತ್ತಲು ಬಂದಿದ್ದ ಆದಿಲಕ್ಷ್ಮಮ್ಮ ರಸ್ತೆ ದಾಟುವಾಗ ಲಾರಿ ಡಿಕ್ಕಿ ಹೊಡೆದಿತ್ತು. ಡಿಕ್ಕಿ ರಭಸಕ್ಕೆ ಆದಿಲಕ್ಷ್ಮಮ್ಮ ಸ್ಥಳದಲ್ಲೇ ಮೃತಪಟ್ಟಿದ್ದರು. ಸದ್ಯ ಚಾಲಕನನ್ನು ಬಂಧಿಸಿರುವ ಕೆಎಸ್ ಲೇಔಟ್ ಸಂಚಾರಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಬಿಬಿಎಂಪಿ ಕಸದ ಲಾರಿ ಚಾಲಕ ಮಹಮ್ಮದ್ ಬಂಧಿತ ಆರೋಪಿಯಾಗಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version