ಬೆಂಗಳೂರು: ಸೈಕಲ್ ಸವಾರನಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ದಾರುಣವಾಗಿ (Road Accident) ಮೃತಪಟ್ಟಿದ್ದಾರೆ. ಬೆಂಗಳೂರಿನ ಚಾಲುಕ್ಯ ಸರ್ಕಲ್‌ನಲ್ಲಿ ದುರ್ಘಟನೆ ನಡೆದಿದೆ. ಮೃತ ಸೈಕಲ್ ಸವಾರ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಈ ಅಪಘಾತ ಸಂಭವಿಸಿದೆ.
ಮೃತ ಸೈಕಲ್ ಸವಾರ ರಾಜಸ್ಥಾನ ಮೂಲದವನು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಹೈಗ್ರೌಂಡ್ ಸಂಚಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಯಲ್ಲಿ ಸವಾರನ ತಲೆಯೇ ನಜ್ಜುಗುಜ್ಜಾಗಿತ್ತು. ಕೂಡಲೇ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಘಟನೆ ಸಂಬಂದ ಹೈಗ್ರೌಂಡ್ ಸಂಚಾರಿ ಪೊಲೀಸರು ಲಾರಿ ಚಾಲಕ ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಮೃತನ ಗುರುತು ಪತ್ತೆಗಾಗಿ ತನಿಖೆಯನ್ನು ಕೈಕೊಂಡಿದ್ದಾರೆ.
ಚಲಿಸುತ್ತಿದ್ದಾಗಲೇ ತುಂಡಾಗಿ ಬಿದ್ದ ಕೆಎಸ್‌ಆರ್‌ಟಿಸಿ ಬಸ್ ಚಕ್ರ
ಚಲಿಸುತ್ತಿದ್ದಾಗಲೇ ಕೆಎಸ್‌ಆರ್‌ಟಿಸಿ ಬಸ್‌ನ ಮುಂಬದಿ ಚಕ್ರವೊಂದು ರಸ್ತೆ ಮಧ್ಯೆ ತುಂಡಾಗಿದೆ. ಕೂದಲೆಳೆ ಅಂತರದಲ್ಲಿ ಬಸ್ಸ್‌ನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಸಮೀಪ ಅನಾಹುತವೊಂದು ತಪ್ಪಿದೆ. ಬಾಚಹಳ್ಳಿ ಮಾರ್ಗವಾಗಿ ಗುಂಡ್ಲುಪೇಟೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಗುಂಡ್ಲುಪೇಟೆ ಘಟಕದ ಅಧಿಕಾರಿಗಳು ಬಸ್‌ಗಳ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದ್ದಾರೆ. ಕೋಡಹಳ್ಳಿ ಸಮೀಪ ತುಂಡಾಗಿ ಬಿದ್ದ ಬಸ್ಸಿನ ಮುಂಭಾಗದ ಚಕ್ರ ಕಂಡು ಚಲಾಯಿಸಲು ಯೋಗ್ಯವಲ್ಲದ ಬಸ್ಸುಗಳನ್ನು ಗ್ರಾಮಾಂತರ ಪ್ರದೇಶಕ್ಕೆ ಕಳುಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಚಿಕ್ಕಬಳ್ಳಾಪುರದಲ್ಲಿ ರಸ್ತೆ ಅಪಘಾತಕ್ಕೆ ಅಪ್ಪ-ಅಮ್ಮನೊಟ್ಟಿಗೆ ಮಗನೂ ಸಾವು
ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ದಂಡುಪಾಳ್ಯ ಗೇಟ್ ಬಳಿ ಕಾರು ಮತ್ತು ಟಿಟಿ ವಾಹನ ನಡುವೆ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ.ದಂಪತಿಯಾದ ಶ್ರೀನಿವಾಸಲು (50), ಪುಷ್ಪ (45), ಪುತ್ರ ಶ್ರೀಕಾಂತ (30) ಮೃತ ದುರ್ದೈವಿಗಳು. ಈ ಕುಟುಂಬಸ್ಥರು ಕಾರಿನಲ್ಲಿ ಮದುವೆಗೆಂದು ಬೆಂಗಳೂರಿನಿಂದ ಆಂಧ್ರದ ನೆಲ್ಲೂರಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಇತ್ತ ಟಿಟಿ ವಾಹನದಲ್ಲಿದ್ದ ಹನ್ನೆರಡು ಮಂದಿ ಎಲೆಕ್ಟ್ರಾನಿಕ್ ಸಿಟಿಯಿಂದ ಬೋಯಕೊಂಡ ಕ್ಷೇತ್ರಕ್ಕೆ ಹೋಗಿಬರುತಿದ್ದಾಗ ಅಪಘಾತ ಸಂಭವಿಸಿದೆ. ಟಿಟಿ ವಾಹನದಲ್ಲಿದ್ದ ಹನ್ನೆರಡು ಜನರಗೆ ಗಂಭೀರ ಗಾಯಗಳಾಗಿದ್ದು, ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಟಾ ಏಸ್ ವಾಹನಕ್ಕೆ ಲಾರಿ ಡಿಕ್ಕಿ; ಮಹಿಳೆ ಸಾವು
ಟಾಟಾ ಏಸ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಮೃತಪಟ್ಟರೆ, ಐವರ ಸ್ಥಿತಿ ಗಂಭೀರವಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿಯ ತಡಸ ಕ್ರಾಸ್ ಬಳಿ ಘಟನೆ ನಡೆದಿದೆ. ಮಹಿಳೆಯರು ಗಾರ್ಮೆಂಟ್ಸ್ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿಯೊಂದು ಟಾಟಾ ಏಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಮೃತಪಟ್ಟರೆ, ಉಳಿದವರ ಸ್ಥಿತಿಯೂ ಗಂಭೀರವಾಗಿದೆ. ಕಲಘಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಾಯಾಳುಗಳು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ