ಬೆಂಗಳೂರು: ರಾಜಧಾನಿ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಜನರು ಓಡಾಡುವುದೇ ಹರಸಾಹಸ. ಅದರಲ್ಲೂ ವಯೋವೃದ್ಧರ ಸ್ಥಿತಿ ಕೇಳೋದೆ ಬೇಡ. ಸದ್ಯ ರಿಟೈರ್ಡ್‌ಮೆಂಟ್ ಲೈಫ್ ಕಳೆಯುತ್ತಿದ್ದ ವೃದ್ಧರೊಬ್ಬರು ಈಗ ಐಸಿಯೂನಲ್ಲಿ ಇರುವಂತಾಗಿದೆ. ನಿನ್ನೆ ಬುಧವಾರ ಬೆಳಗ್ಗೆ ರಾಮನ್ ಎಂಬುವವರು ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಇನ್ನೇನು ಅನತಿ ದೂರದಲ್ಲೇ ಇದ್ದ ನಿವಾಸಕ್ಕೆ ಸೇರಬೇಕು ಎನ್ನುವಷ್ಟರಲ್ಲಿ ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿ ವೇಗವಾಗಿ ಬಂದ ಬೈಕ್‌ವೊಂದು (Hit and run case) ಎದುರಿಗೆ ಬರುತ್ತಿದ್ದ ರಾಮನ್ ಅವರಿಗೆ ಡಿಕ್ಕಿ (Road Accident) ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ರಾಮನ್ ಎಗರಿ ಬಿದ್ದಿದ್ದರು.
ರಾಮನ್ ಅವರು ಪ್ರೊಫೆಸರ್ ಆಗಿ ಕೆಲಸ ಮಾಡಿಕೊಂಡಿದ್ದವರು. ನಂತರ ನಿವೃತ್ತಿ ಹೊಂದಿದ ಬಳಿಕ ತಮ್ಮ ಪತ್ನಿ ಜತೆ ಭಾಷ್ಯಂ ಸರ್ಕಲ್ ಬಳಿ ಇರುವ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಬರೋಬ್ಬರಿ 94 ವರ್ಷದ ರಾಮನ್ ಅವರು ಈ ವಯಸ್ಸಿನಲ್ಲಿಯೂ ಯಾರ ಆಸರೆಯನ್ನೂ ಪಡೆಯದೆ ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡು, ತಮ್ಮ ಕೆಲಸ ಕಾರ್ಯಗಳನ್ನು ತಾವೇ ನೋಡಿಕೊಳ್ಳುತ್ತಿದ್ದರು.
ನಿನ್ನೆ ಬುಧವಾರ ಪಾಸ್‌ಬುಕ್ ಹಿಡಿದು ಬ್ಯಾಂಕಿಗೆ ತೆರಳಿ ವಾಪಾಸ್ ಬರುತ್ತಿದ್ದರು. ಈ ವೇಳೆ ಎದುರಿಗೆ ಅತಿ ವೇಗದಲ್ಲಿ ಬಂದ ಬೈಕ್‌ವೊಂದು ಡಿಕ್ಕಿ ಹೊಡೆದಿತ್ತು. ಗುದ್ದಿದ ರಭಸಕ್ಕೆ ನೆಲಕ್ಕುರುಳಿದ ರಾಮನ್ ಅವರ ಸಹಾಯಕ್ಕೆ ಅಲ್ಲಿದ್ದ ಸ್ಥಳೀಯರು ಧಾವಿಸಿದ್ದರು. ಈ ವೇಳೆ ಅಲ್ಲೆ ಇದ್ದ ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಲ್ಲಿಕಾರ್ಜುನ ಅವರು, ಆಂಬ್ಯುಲೆನ್ಸ್‌ಗಾಗಿ ಕಾಯದೇ ಕೂಡಲೇ ಆಟೋದಲ್ಲಿ ಕರೆದೊಯ್ದು ರಾಜಾಜಿನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಾಮನ್ ಅವರ ತಲೆಗೆ ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ಇನ್ನೂ ಕೂಡ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರಂತ ಅಂದರೆ ಇವರ ಮಕ್ಕಳು ಅಮೇರಿಕಾದಲ್ಲಿದ್ದು, ಈ ಸಂಧ್ಯಾಕಾಲದಲ್ಲಿ ಕೂಡ ಅವರನ್ನು ನೋಡಿಕೊಳ್ಳಲು ಯಾರಿಬ್ಬರು ಇಲ್ಲ. ಸದ್ಯ ಅಪಘಾತದ ಸಂಬಂಧ ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ:Kidnap case : ಹಾಡಹಗಲೇ ಬೆಂಗಳೂರಿನಲ್ಲಿ ಕಾಲೇಜು ಯುವತಿಯ ಅಪಹರಣ
ಬ್ರೇಕ್ ಬದಲು ಎಕ್ಸಿಲೇಟರ್ ತುಳಿದ ಕಾರ್ ಡ್ರೈವರ್
ಕಾರ್ ಡ್ರೈವರ್ ಅವಾಂತರಕ್ಕೆ ರಸ್ತೆ ಬದಿ ನಿಂತಿದ್ದ ಬೈಕ್ ಸವಾರರು ಗಾಯಗೊಂಡಿದ್ದಾರೆ. ಕಾರಿನ ಚಾಲಕನೊಬ್ಬ ಬ್ರೇಕ್ ಒತ್ತುವ ಬದಲು ಎಕ್ಸಿಲೇಟರ್ ತುಳಿದಿದ್ದ. ಪರಿಣಾಮ ಎಡ ಹಾಗೂ ಬಲ ಬದಿಯಿಂದ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದ. ಏಕಾಏಕಿ ಕಾರು ಗುದ್ದಿದ್ದರಿಂದ ಸವಾರರು ಕೆಳಗೆ ಬಿದ್ದಿದ್ದರು. ಸರ್ಜಾಪುರ ಮುಖ್ಯರಸ್ತೆ ದೊಡ್ಡಕನ್ನೆಹಳ್ಳಿ ಬಳಿ ಜುಲೈ 23ರ ಸಂಜೆ 7 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಅಲ್ಲೇ ಇದ್ದ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ