Site icon Vistara News

Road Accident: ವಾಟರ್ ಟ್ಯಾಂಕರ್ ಡಿಕ್ಕಿಯಾಗಿ ಅಕ್ಕ-ತಮ್ಮ ಸಾವು; ಕಾಲೇಜಿಗೆ ಹೋದ ಮೊದಲ ದಿನವೇ ದುರಂತ!

Road accident

ಬೆಂಗಳೂರು: ಕಿಲ್ಲರ್ ವಾಟರ್ ಟ್ಯಾಂಕರ್‌ಗೆ ಅಕ್ಕ ತಮ್ಮ-ಬಲಿಯಾಗಿರುವ ಘಟನೆ (Road Accident) ನಗರದ ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡನಾಗಮಂಗಲದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ವೇಗವಾಗಿ ಬಂದ ವಾಟರ್ ಟ್ಯಾಂಕರ್, ಬೈಕ್‌ಗೆ ಡಿಕ್ಕಿಯಾಗಿದ್ದರಿಂದ ಕಾಲೇಜಿಗೆ ಹೊರಟಿದ್ದ ಅಕ್ಕ-ತಮ್ಮ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ.

ದೊಡ್ಡ ನಾಗಮಂಗಲದ ಕೆಂಪೇಗೌಡ ಬಡಾವಣೆ ನಿವಾಸಿಗಳಾದ ಮಧುಮಿತ (20), ರಂಜನ್(18) ಮೃತರು. ಬೆಂಗಳೂರಿನ ಎಸ್ಎಸ್ಎಂಆರ್‌ವಿ ಕಾಲೇಜಿನಲ್ಲಿ ಮಧುಮಿತ ವ್ಯಾಸಂಗ ಮಾಡುತ್ತಿದ್ದಳು. ಮೊದಲ ದಿನ ಅಕ್ಕನನ್ನು ಕಾಲೇಜಿಗೆ ಬಿಟ್ಟು ಬರಲು ತಮ್ಮ ಹೋಗಿದ್ದ. ಈ ವೇಳೆ ಕಿಲ್ಲರ್ ವಾಟರ್ ಟ್ಯಾಂಕರ್ ಇಬ್ಬರನ್ನೂ ಬಲಿ ಪಡೆದಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಗಿದೆ.

ಬೈಕ್‌ ಮಿರರ್‌ಗೆ ವೇಗವಾಗಿ ಬಂದ ವಾಟರ್ ಟ್ಯಾಂಕರ್ ಡಿಕ್ಕಿಯಾಗುತ್ತಲೇ ಅಕ್ಕ-ತಮ್ಮ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಅವರ ತಲೆ ಮೇಲೆ ಟ್ಯಾಂಕರ್ ಹಿಂಬದಿ ಚಕ್ರ‌ ಹರಿದು ದುರಂತ ಸಂಭವಿಸಿದೆ. ವಾಟರ್ ಟ್ಯಾಂಕರ್ ಚಾಲಕನ ಅತಿ ವೇಗ, ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೀಕರ ಕಾರು ಅಪಘಾತ, 3 ಸಾವು, ಮರದಲ್ಲಿ ನೇತಾಡಿದ ಪ್ರಯಾಣಿಕನ ಶವ

road accident gauribidanuru

ಚಿಕ್ಕಬಳ್ಳಾಪುರ: ಭೀಕರ ಕಾರು ಅಪಘಾತವೊಂದರಲ್ಲಿ (Road Accident) ಕಾರು ಕಾಲುವೆಗೆ ಬಿದ್ದು (car Accident) ಮೂವರು ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಪ್ರಯಾಣಿಕರೊಬ್ಬರ ಶವ ಮರದಲ್ಲಿ ನೇತಾಡುತ್ತಿದ್ದುದು ಕಂಡುಬಂದಿದ್ದು, ಇದನ್ನು ನೋಡಿದವರೇ ಬೆಚ್ಚಿಬಿದ್ದಿದ್ದಾರೆ.

ಗೌರಿಬಿದನೂರು (Gauribidanur) ತಾಲ್ಲೂಕಿನ ವಾಟದಹೊಸಹಳ್ಳಿ ಬಳಿ ದುರ್ಘಟನೆ ನಡೆದಿದೆ. ರಾತ್ರಿಯೇ ಅಪಘಾತ ನಡೆದಿದೆ ಎಂದು ಶಂಕಿಸಲಾಗಿದ್ದು, ಮುಂಜಾನೆವರೆಗೆ ಯಾರ ಗಮನಕ್ಕೂ ಬಂದಿರಲಿಲ್ಲ. ಬ್ರೆಝಾ ಕಾರು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಲುವೆಗೆ ಉರುಳಿಕೊಂಡಿದೆ. ಕಾರಿನಲ್ಲಿ ನಾಲ್ವರಿದ್ದು, ಮೂವರು ಮೃತಪಟ್ಟಿದ್ದಾರೆ. ಒಬ್ಬ ಪ್ರಯಾಣಿಕ ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ.

ಮೃತಪಟ್ಟವರು ಬೆಸ್ಕಾಂ ಸಿಬ್ಬಂದಿ ಎಂದು ತಿಳಿದುಬಂದಿದೆ. ಇವರನ್ನು ಕೆಪಿಟಿಸಿಎಲ್ ವೇಣಗೋಪಾಲ್ (34), ಶ್ರೀಧರ್ (35) ಹಾಗೂ ಬೆಸ್ಕಾಂ ಲೈನ್‌ಮ್ಯಾನ್ ಮಂಜಪ್ಪ (35) ಎಂದು ಗುರುತಿಸಲಾಗಿದೆ. ಕಾರು ಕಾಲುವೆಗೆ ಉರುಳುವಾಗ ಬಾಗಿಲು ತೆರೆದ ಕಾರಿನಿಂದ ಚಿಮ್ಮಿದ ಒಬ್ಬ ಪ್ರಯಾಣಿಕನ ದೇಹ ಮರದಲ್ಲಿ ಸಿಕ್ಕಿಹಾಕಿಕೊಂಡಿದೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮತ್ತೊಬ್ಬ ಅಧಿಕಾರಿ ಆತ್ಮಹತ್ಯೆ ಯತ್ನ; ಅಕ್ಷರ ದಾಸೋಹದಲ್ಲಿ ಮೇಲಧಿಕಾರಿಗಳ ಕಿರುಕುಳ?

ರಾಯಚೂರು: ರಾಯಚೂರಲ್ಲಿ ಅಕ್ಷರ ದಾಸೋಹ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಇದು ಕಳೆದ ಒಂದು ತಿಂಗಳಲ್ಲಿ ವರದಿಯಾಗುತ್ತಿರುವ ಇಂಥ ಮೂರನೇ ಪ್ರಕರಣವಾಗಿದೆ.

ಲಿಂಗಸಗೂರು ತಾಲೂಕಿನ ಅಕ್ಷರ ದಾಸೋಹದ ನಿರ್ದೇಶಕ ಮೌನೇಶ್ ಕಂಬಾರ ಆತ್ಮಹತ್ಯೆಗೆ ಯತ್ನಿಸಿದ ಅಧಿಕಾರಿ. ಸುಮಾರು 40ಕ್ಕೂ ಹೆಚ್ಚು ನಿದ್ರೆ ಟ್ಯಾಬ್ಲೆಟ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಒಂದು ತಿಂಗಳು ಹಿಂದಷ್ಟೇ ಸಹಾಯ ನಿರ್ದೇಶಕರಾಗಿ ಇವರು ನೇಮಕಗೊಂಡಿದ್ದರು. ಕೆಲಸದ ಜತೆ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು ಎಂದು ತಿಳಿದುಬಂದಿದೆ.

ನಿನ್ನೆ ಏಕಾಏಕಿ ಕಚೇರಿಯಿಂದ ಒಂದು ದಿನದ ಮಟ್ಟಿಗೆ ರಜೆ ಪಡೆದಿದು ಮನೆಗೆ ಬಂದಿದ್ದ ಮೌನೇಶ್, ಮನೆಯಲ್ಲೇ ಟ್ಯಾಬ್ಲೆಟ್‌ಗಳನ್ನು ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಲಿಂಗಸಗೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆದೊಯ್ಯಲಾಗಿದೆ. ಲಿಂಗಸಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Murder Case : ಸ್ನೇಹಿತರೇ ಕೊಲೆಗಾರರು; ಬರ್ತ್‌ ಡೇ ಪಾರ್ಟಿಗೆ ಹೋದ ಯುವಕನ ಬರ್ಬರ ಹತ್ಯೆ

ಕಳೆದ ತಿಂಗಳು ಶಿವಮೊಗ್ಗದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಗಮದಲ್ಲಿ ನಡೆದ ಹಗರಣದ ಬಗ್ಗೆ ಅವರು ಬರೆದಿಟ್ಟ ಡೆತ್‌ನೋಟ್‌ ಇದೀಗ ಸಚಿವರ ತಲೆದಂಡ ಪಡೆದಿದೆ. ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಯ ಮಹಾ ನಿರ್ದೇಶಕರೊಬ್ಬರು ಕಾಮಗಾರಿ ನಡೆಸಿದ 8 ಕೋಟಿ ರೂಪಾಯಿ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ತುಮಕೂರಿನ ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಬಿಲ್‌ ಹಣ ಬಿಡುಗಡೆಯಾಗಿತ್ತು.

Exit mobile version