ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ (Varamahalakshmi Festival) ಮರುದಿನವೇ ಬೆಂಗಳೂರಿನ ಮೈಸೂರು ರಸ್ತೆ (Mysore Road) ಸಮೀಪ ದಾರುಣ ದುರಂತ ಘಟಿಸಿದೆ. ಟಿಪ್ಪರ್ ಚಾಲಕನೊಬ್ಬ (Tipper Accident) ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ, ಇಬ್ಬರು ಪುಟ್ಟ ಮಕ್ಕಳನ್ನು ಕೊಂದು (Road Accident) ಹಾಕಿದ್ದಾನೆ. ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳು ಯಮನ ಬಾಯಿಗೆ ಆಹಾರವಾಗಿದ್ದಾರೆ.
ಮೈಸೂರು ರಸ್ತೆ ಗುಡ್ಡದಹಳ್ಳಿ ಬಳಿ ಘೋರ ಅಪಘಾತ ಸಂಭವಿಸಿದೆ. ಮಕ್ಕಳು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಮೇಲೆ ಕುಳಿತು ಆಟವಾಡುತ್ತಿದ್ದರು. ಯಮನಂತೆ ಬಂದ ಟಿಪ್ಪರ್ ಇವರನ್ನು ನೆಲಕ್ಕೆ ಕೆಡವಿದೆ. ಮಕ್ಕಳ ಮೇಲೆ ಹರಿದ ಪರಿಣಾಮ ಮಕ್ಕಳು ನಜ್ಜುಗುಜ್ಜಾಗಿದ್ದಾರೆ. ನಿಯಂತ್ರಣಕ್ಕೆ ಸಿಗದ ಟಿಪ್ಪರ್ ಐದಾರು ವಾಹನಗಳ ಮೇಲೆ ಹರಿದಿದೆ.
ಹಾಲೋಬಾಕ್ಸ್ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ನಜ್ಜಗುಜ್ಜಾಗಿರುವ ಮಕ್ಕಳ ಶವಗಳನ್ನು ಆಂಬ್ಯುಲೆನ್ಸ್‌ಗೆ ಹಾಕಿ ಒಯ್ಯಲಾಗಿದೆ. ಅಪಘಾತದ ದಾರುಣತೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ನಿನ್ನೆಯಷ್ಟೇ ವರಮಹಾಲಕ್ಷ್ಮಿ ಹಬ್ಬದಲ್ಲಿ ಹೊಸ ಬಟ್ಟೆ ತೊಟ್ಟು ಕುಣಿದಾಡಿದ್ದ ಮಕ್ಕಳು ಇಂದು ಶವವಾಗಿದ್ದು, ಇವರ ಕುಟುಂಬಗಳು ಶೋಕದ ಮಡುವಿನಲ್ಲಿವೆ.
ಕಾರಿನ ಗ್ಲಾಸ್ ಮುಚ್ಚಿ ಮಲಗಿದ್ದ ವ್ಯಕ್ತಿ ಉಸಿರುಗಟ್ಟಿ ಸಾವು
ಉಡುಪಿ: ಆಸ್ಪತ್ರೆ ಬಳಿ ಕಾರಿನ ಎಲ್ಲ ಗ್ಲಾಸ್‌ಗಳನ್ನು ಮುಚ್ಚಿಕೊಂಡು ಮಲಗಿದ್ದ ಚಾಲಕರೊಬ್ಬರು ಉಸಿರು ಗಟ್ಟಿ ಸಾವಿಗೀಡಾಗಿದ್ದಾರೆ. ಚಿಕ್ಕಮಗಳೂರು ಮೂಲದ ಆನಂದ (37) ಮೃತಪಟ್ಟವರು.
ಇವರು ರೋಗಿಯೊಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ರೋಗಿಯನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಲಾಗಿತ್ತು. ಮಣಿಪಾಲದಲ್ಲಿ ಉಳಿದುಕೊಳ್ಳಲು ಯಾವುದೇ ರೂಮ್ ಸಿಗದ ಕಾರಣ ಮಣಿಪಾಲ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಕಾರು ಪಾರ್ಕ್ ಮಾಡಿ ಒಳಗೆ ಮಲಗಿದ್ದರು.
ಕಾರಿನ ಎಲ್ಲ ಗ್ಲಾಸುಗಳನ್ನು ಏರಿಸಿಕೊಂಡು ಬಂದ್ ಮಾಡಿ ಮಲಗಿದ ಪರಿಣಾಮ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಗಮನಿಸಿ, ಇಂದು ಯಾವುದೇ ಆಸ್ಪತ್ರೆಯಲ್ಲಿ ಒಪಿಡಿ ಇಲ್ಲ
ಬೆಂಗಳೂರು: ಕೋಲ್ಕತಾದಲ್ಲಿ ವೈದ್ಯೆ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ವೈದ್ಯರು ನೀಡಿರುವ ದೇಶವ್ಯಾಪಿ ಪ್ರತಿಭಟನೆಗೆ ರಾಜ್ಯದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಬೆಂಬಲ ಸೂಚಿಸಿದ್ದಾರೆ. ಇಂದು ಬೆಳಗ್ಗೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ ಎಲ್ಲ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳು (OPD) ಬಂದ್ ಆಗಿರಲಿವೆ.
ರಾಜಧಾನಿಯ ಫ್ರೀಡಂ ಪಾರ್ಕಿನಲ್ಲಿ ಇಂದು ಬೆಳಿಗ್ಗೆ 10 ಗಂಟೆಯಿಂದ ವೈದ್ಯರ ಪ್ರತಿಭಟನೆ ಆರಂಭವಾಗಲಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ಓಪಿಡಿ ಬಂದ್ ಮಾಡಿ ವೈದ್ಯ ಸಮೂಹ ಪ್ರತಿಭಟನೆಗೆ ಕರೆ ಕೊಟ್ಟಿದೆ. ತುರ್ತು ಸೇವೆ ಹೊರತುಪಡಿಸಿ ಉಳಿದಂತೆ ಓಪಿಡಿ ಬಂದ್ ಇರಲಿದೆ.
ಪ್ರತಿಭಟನೆಗೆ ಸರ್ಕಾರಿ ವೈದ್ಯರು ಕೂಡ ಸಾಥ್ ಕೊಟ್ಟಿದ್ದಾರೆ. ಸರ್ಕಾರಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಫ್ರೀಡಂ ಪಾರ್ಕಿನಲ್ಲಿ ಇಂದು ಖಾಸಗಿ ಆಸ್ಪತ್ರೆಯ ವೈದ್ಯರು ಸೇರಿದಂತೆ ಹಲವು ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಪ್ರತಿಭಟನೆಗೆ ಸಂಸದ ಹಾಗೂ ಖ್ಯಾತ ವೈದ್ಯ ಸಿಎನ್ ಮಂಜುನಾಥ್ ಜೊತೆ ನೀಡಲಿದ್ದಾರೆ.
ಇದನ್ನೂ ಓದಿ: Kolkata Doctor Murder Case: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರಿಗೆ ಮರಣದಂಡನೆ ವಿಧಿಸುವಂತೆ ಬಾಲಿವುಡ್ ತಾರೆಯರ ಆಗ್ರಹ