ಬೆಂಗಳೂರು: ಪೊಲೀಸ್ ದಿರಿಸಿನಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಎಂಟ್ರಿ ಕೊಟ್ಟು ಚಿನ್ನದ ವ್ಯಾಪಾರಿಯಿಂದ ಆಭರಣ ಹಾಗೂ ನಗದು ದರೋಡೆ ಮಾಡಿದ ಮೂವರನ್ನು ಬಂಧಿಸಲಾಗಿದೆ.
ಇವರು ಚಿನ್ನದ ವ್ಯಾಪಾರಿಯಿಂದ 6 ಲಕ್ಷ ನಗದು ಹಾಗೂ ಚಿನ್ನದ ಬಿಸ್ಕತ್ತು ದರೋಡೆ ಮಾಡಿದ್ದರು. ಇದೇ ತಿಂಗಳ ಏಳರಂದು ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ಕೃತ್ಯ ನಡೆದಿತ್ತು. ಪೊಲೀಸ್ ಎಂದು ಹೇಳಿಕೊಂಡು ಬಂದ ಮೂವರ ಗ್ಯಾಂಗ್ ತಮಿಳುನಾಡಿನ ಸುಂದರಂ ಎಂಬವರಿಂದ ದರೋಡೆ ಮಾಡಿತ್ತು. ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೆಎಸ್‌ಆರ್‌ಟಿಸಿಯಲ್ಲಿ ಹೋಂ ಗಾರ್ಡ್ ಆಗಿದ್ದ ನಾಗರಾಜ್ ಎಂಬಾತ ಪ್ರಮುಖ ಆರೋಪಿಯಾಗಿದ್ದಾನೆ. ಆಟೋ ಚಾಲಕರಾದ ಅರುಣ್, ಮಂಜು ಆತನಿಗೆ ಸಾಥ್ ನೀಡಿದ್ದು, ಅವರನ್ನೂ ವಶಕ್ಕೆ ಪಡೆಯಲಾಗಿದೆ.
ತಮಿಳುನಾಡಿನ ಉಪೇಂದ್ರನಾಥ್ ಎಂಬ ಚಿನ್ನದ ವ್ಯಾಪಾರಿ ಬಳಿ ಕೆಲಸಕ್ಕಿದ್ದ ಸುಂದರಂ, ಮಾಲೀಕ ಹೇಳಿದಂತೆ ಒಂದಿಷ್ಟು ಚಿನ್ನದ ಆಭರಣ ಹಾಗೂ ನಗದು ತೆಗೆದುಕೊಂಡು ಶಿವಮೊಗ್ಗಕ್ಕೆ ತೆರಳಿದ್ದರು. ಅಲ್ಲಿ ಚಿನ್ನದ ಆಭರಣ ನೀಡಿ ಬಿಸ್ಕತ್ ಪಡೆದಿದ್ದರು. ನಗದು ಹಾಗೂ ಚಿನ್ನದ ಬಿಸ್ಕತ್ ಜೊತೆ ಬೆಂಗಳೂರಿಗೆ ಬಂದಿದ್ದರು. ಬೆಳಗಿನ ಜಾವ 5 ಗಂಟೆ ಸುಮಾರಿಗೆ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ತಮಿಳುನಾಡು ಬಸ್‌ನಲ್ಲಿ ಕುಳಿತಿದ್ದ ಅವರನ್ನು ಇನ್ನೇನು ಬಸ್ ತೆರಳಬೇಕು ಎನ್ನುವಷ್ಟರಲ್ಲಿ ಎಂಟ್ರಿ ಕೊಟ್ಟಿದ್ದ ನಕಲಿ ಪೊಲೀಸ್ ವೇಷದ ದರೋಡೆಕೋರರು ಕೆಳಗಿಳಿಸಿದ್ದರು. ನಾವು ಪೊಲೀಸರು, ಬ್ಯಾಗ್ ಪರಿಶೀಲಿಸಬೇಕು ಎಂದಿದ್ದರು.
ಬಳಿಕ ಬಿಳಿಯ ಕಾರಿನಲ್ಲಿ ಕೊಂಚ ದೂರ ಕರೆದೊಯ್ದು ಬ್ಯಾಗಿನಲ್ಲಿದ್ದ ಚಿನ್ನದ ಬಿಸ್ಕೆಟ್ ಹಾಗೂ 6 ಲಕ್ಷ ರೂ. ನಗದು ಕಿತ್ತುಕೊಂಡಿದ್ದರು. ಕೃತ್ಯದ ಬಗ್ಗೆ ಸುಂದರಂ ಮಾಲೀಕನಿಗೆ ತಿಳಿಸಿದ್ದರು. ಮಾಲೀಕನ ಸೂಚನೆ ಮೇರೆಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಡಕಾಯಿತಿ ಪ್ರಕರಣದ ವಿಚಾರಣಾಧೀನ ಕೈದಿ ಪರಾರಿ; ಬಂಧನಕ್ಕೆ ಬಲೆ ಬೀಸಿದ ಪೊಲೀಸರು