Site icon Vistara News

Robbery Case: ರಾಜಧಾನಿಯಲ್ಲಿ ಹಾಡ ಹಗಲೇ ಮಚ್ಚು ಬೀಸಿ 15 ಲಕ್ಷ ರೂ. ದರೋಡೆ

crime news

crime news

ಬೆಂಗಳೂರು: ರಾಜಧಾನಿಯಲ್ಲಿ (Bangalore news) ಮಚ್ಚು ಬೀಸಿ ಹಾಡ ಹಗಲೇ ದರೋಡೆ (Robbery Case) ನಡೆಸಲಾಗಿದೆ. ಸಿಗರೇಟ್‌ ಡಿಸ್ಟ್ರಿಬ್ಯೂಟರ್‌ ಒಬ್ಬರು ರಾಬರಿಯಲ್ಲಿ (Crime news) 15 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಬೆಂಗಳೂರಿನ ನಾಗರಬಾವಿ ಪಾಪರೆಡ್ಡಿಪಾಳ್ಯದಲ್ಲಿ ಮಟ ಮಟ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಮಚ್ಚು ಬೀಸಿ ರಾಬರಿ ನಡೆದಿದೆ. ಸಿಗರೇಟ್ ಡಿಸ್ಟ್ರಿಬ್ಯೂಟರ್ ಗೋಪಾಲ್‌ ಎಂಬವರ ಮೇಲೆ ದಾಳಿ ನಡೆಸಿದ ಮೂವರು ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಗನ್ ತೋರಿಸಿ, ಲಾಂಗ್ ಬೀಸಿ, ಪೆಪ್ಪರ್ ಸ್ಪ್ರೇ ಹಾಕಿ 15 ಲಕ್ಷ ರೂ. ದರೋಡೆ ನಡೆಸಲಾಗಿದೆ.

ಗೋಪಾಲ್‌ ಅವರು ಸಿಗರೇಟ್‌ ಡಿಸ್ಟ್ರಿಬ್ಯೂಟರ್‌ ಆಗಿದ್ದು, ಕೆಂಗೇರಿಯಲ್ಲಿ ಅಂಗಡಿಗಳಿಂದ ಸಿಗರೇಟ್ ಬಿಲ್ ಕಲೆಕ್ಟ್ ಮಾಡಿಕೊಂಡು ಬರುತ್ತಿದ್ದರು. ನಾಗರಬಾವಿ ಪಾಪರೆಡ್ಡಿಪಾಳ್ಯಕ್ಕೆ ನಾತೂರಾಮ್ ಎಂಬವರ ಅಂಗಡಿ ಬಳಿ ಸಿಗರೇಟ್ ಬಿಲ್ ಕಲೆಕ್ಟ್ ಮಾಡಲು ಬಂದಿದ್ದರು. ಆಗ ಡಿಯೋ ಬೈಕ್‌ನಲ್ಲಿ ಮೂವರು ದರೋಡೆಗಾರರು ಬಂದು ಅಂಗಡಿಗೆ ನುಗ್ಗಿ ಪೆಪ್ಪರ್ ಸ್ಪ್ರೇ ಹಾಕಿ ಗನ್ ತೋರಿಸಿ ಲಾಂಗ್ ಬೀಸಿದ್ದಾರೆ. ಪ್ರಾವಿಜನ್ ಸ್ಟೋರ್ ಒಳಗೆಲ್ಲ ಗೋಪಾಲ್ ಅವರನ್ನು ಅಟ್ಟಾಡಿಸಿದ್ದಾರೆ.

ಲಾಂಗ್ ಬೀಸಿದ ರಭಸಕ್ಕೆ ಹಣವಿದ್ದ ಬ್ಯಾಗ್ ಕಟ್ಟಾಗಿದ್ದು, ಕೂಡಲೇ ಹಣವಿದ್ದ ಬ್ಯಾಗನ್ನು ಹೊತ್ತುಕೊಂಡು ಪರಾರಿಯಾಗಿದ್ದಾರೆ. ಟಾಟಾ ಏಸ್ ವಾಹನದಲ್ಲಿದ್ದ ಡಿಸ್ಟ್ರಿಬ್ಯೂಟರ್ ಗೋಪಾಲ್ ಅವರನ್ನು ದರೋಡೆಕೋರರು ಹಿಂಬಾಲಿಸಿದ್ದರು ಎನ್ನಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಳ್ಳತನ ಆರೋಪಿ ಬಂಧನ

ಬೆಳಗಾವಿ: ಡಜನ್ ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಬೆಳಗಾವಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳಲ್ಲಿ ಕಲ್ಲೇಹೋಳ ಗ್ರಾಮದ ಪರಶುರಾಮ ಗೌಂಡಾಡಕರ್ ಎಂಬವನನ್ನು ಬಂಧಿಸಲಾಗಿದೆ.

ಆರೋಪಿ ಪರಶುರಾಂನಿಂದ 673 ಗ್ರಾಂ ಬಂಗಾರ, 623 ಗ್ರಾಂ ಬೆಳ್ಳಿಯ ಅಭರಣ, ಒಟ್ಟು 43,23,115 ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಖಾನಾಪುರ ಪೊಲೀಸ್ ನಿರೀಕ್ಷಕ ಮಂಜುನಾಥ ನಾಯಿಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ದಂಪತಿ ಆತ್ಮಹತ್ಯೆ

ಆನೇಕಲ್: ವಿಷ ಸೇವಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ರಾಜ್ಯ ಗಡಿಭಾಗ ತಮಿಳುನಾಡಿನ ಥಳಿಯಲ್ಲಿ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ವಂಶಿಧರ್ ಪಾಸ್ಲುಲೇಟಿ ಹಾಗೂ ದೀಪಾ ಮೃತ ದಂಪತಿಗಳು.

ಕಳೆದ ಒಂದು ವರ್ಷ ಹಿಂದೆ ಇವರು ಕೆಲಸ ಬಿಟ್ಟಿದ್ದರು. ತಮಿಳುನಾಡಿನ ಥಳಿಗೆ ಹೋಗಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ದಂಪತಿಗೆ ಮದುವೆಯಾಗಿ ಹಲವು ವರ್ಷ ಕಳೆದಿದ್ದರೂ ಮಕ್ಕಳಿರಲಿಲ್ಲ. ಹೀಗಾಗಿ ದಂಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ವಿಷ ಸೇವಿಸಿ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದು, ಮೂರು ದಿನ ಮೃತದೇಹಗಳು ಮನೆಯಲ್ಲಿಯೇ ಇದ್ದವು. ಅಕ್ಕಪಕ್ಕದ ಮನೆಗಳಿಗೆ ದುರ್ವಾಸನೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಡೆಂಕಣಿಕೋಟೆ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದ್ದು, ಥಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case: ತಲೆ ಮೇಲೆ ಕಲ್ಲು ಹಾಕಿ, ಬೆಂಕಿ ಹಚ್ಚಿ ಕೊಲೆ! ಅನೈತಿಕ ಸಂಬಂಧ ಕಾರಣವೇ?

Exit mobile version