ಬೆಂಗಳೂರು: ಅಪರಿಚಿತರ ಮಾತನ್ನು ನಂಬಿ ಮನೆ ಬಾಗಿಲು ತೆರೆಯುವ ಮುನ್ನ ಹತ್ತಾರು ಬಾರಿ ಯೋಚಿಸಿ ಎಂದು ಪೊಲೀಸರು ಎಷ್ಟು ಎಚ್ಚರಿಕೆ ನೀಡಿದರೂ ಜನ ಮೋಸ ಹೋಗುತ್ತಲೇ ಇರುತ್ತಾರೆ. ಹೀಗೆ ಮೋಸ ಹೋದ ದಂಪತಿಯೊಬ್ಬರು ಲಕ್ಷಾಂತರ ರೂಪಾಯಿ ನಗ, ನಗದನ್ನು (Robbery Case) ಕಳೆದುಕೊಂಡಿದ್ದಾರೆ.
ಮನೆಯ ಕಾಲಿಂಗ್ ಬೆಲ್ ಒತ್ತಿ ವಿಳಾಸ ಕೇಳುವುದು, ನೀರು ಕೇಳುವುದು, ಸೇಲ್ಸ್‌ಮನ್ ನೆಪದಲ್ಲಿ ಬಂದು ಕಳ್ಳತನ ಮಾಡುವುದೆಲ್ಲಾ ಹಳೆ ಫ್ಯಾಷನ್ ಆಗಿದೆ. ಈಗ ಅದೇ ಮಾದರಿ ಅಪ್‌ಡೇಟ್ ಆಗಿದೆ. ʼವೀಸಾ ವೆರಿಫಿಕೇಷನ್ʼ ಎಂದು ಬಂದರೆ ಸ್ವಲ್ಪ ಎಚ್ಚರವಿರಿ. ನಗರದಲ್ಲಿ ಹೀಗೆ ಒಂದು ಮನೆಯನ್ನು ದೋಚಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.
ಕುಮಾರಸ್ವಾಮಿ ಲೇಔಟ್‌ನ ಟೀಚರ್ಸ್ ಕಾಲೋನಿಯಲ್ಲಿ ಹೀಗೆ ಮೂವರು ಖದೀಮರು ಒಂದು ಮನೆ ದೋಚಿದ್ದಾರೆ. ಪಿಜಿ ಮಾಲೀಕ ಸೇರಿ ಮೂವರನ್ನು ಬಂಧಿಸಲಾಗಿದೆ. ಸ್ವರೂಪ್, ಆತ್ಮಾನಂದ ಜಂಬಗಿ, ಶಾಲಿಂ ಕುಮಾರ್ ಬಂಧಿತ ಆರೋಪಿಗಳು.
60 ವರ್ಷದ ವೃದ್ಧ ಮುರಳಿಧರ್ ಎಂಬವರ ಮನೆಯಲ್ಲಿ ದರೋಡೆ ನಡೆದಿದೆ. ಅವರ ಪತ್ನಿ ಕೆಲಸಕ್ಕೆ ಹೋಗಿದ್ದ ವೇಳೆ ಕೃತ್ಯ ನಡೆದಿತ್ತು. ಮುರಳಿಧರ್ ಕೆಲಸಕ್ಕೆ ಹೊರಡಲು ಸಿದ್ಧರಾಗುತ್ತಿದ್ದರು. ಆಗ ಕಾಲಿಂಗ್ ಬೆಲ್ ಮಾಡಿದ್ದ ಮೂವರು, ನಾವು ವೀಸಾ ವೆರಿಫಿಕೇಷನ್‌ಗೆ ಬಂದಿದ್ದೇವೆ, ನಿಮ್ಮ ಆಧಾರ್ ಕಾರ್ಡ್ ಕೊಡಿ ಎಂದು ಕೇಳಿದ್ದರು. ಈ ವೇಳೆ ಆಧಾರ್ ಕಾರ್ಡ್ ತರಲು ಒಳಹೋಗುತ್ತಿದ್ದಂತೆ ಹಿಂದಿನಿಂದ ತಳ್ಳಿದ್ದರು. ಕೆಳ ಬಿದ್ದ ಮುರಳಿಧರ್ ಅವರು ಗಲಾಟೆ ಮಾಡದಂತೆ ಬಾಯಿಗೆ ಬಟ್ಟೆ ತುರುಕಿ ಕೈಕಾಲು ಕಟ್ಟಿಹಾಕಿದ್ದರು.
ನಂತರ ಬಲವಂತವಾಗಿ ಬೀರುವಿನ ಕೀ ಪಡೆದುಕೊಂಡು ಮನೆಯಲ್ಲಿದ್ದ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 20 ಸಾವಿರ ರೂ. ಮೌಲ್ಯದ ಬೆಳ್ಳಿಯ ಆಭರಣ ಹಾಗು 1 ಲಕ್ಷ ರೂ. ನಗದು ದೋಚಿದ್ದರು. ನಂತರ ಮುರಳಿಧರ್ ಅವರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ದರೋಡೆ ಎಸಗಿದ ಆರೋಪಿಗಳು ತಮ್ಮ ಸಾಲ ನೀಗಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾರೆ. ಪಿಜಿ ಮಾಲೀಕನಾಗಿದ್ದ ಸ್ವರೂಪ್ ತನ್ನ ಪಿಜಿಯಲ್ಲಿ ನೆಲೆಸಿದ್ದ ಆತ್ಮಾನಂದ ಜಂಬಗಿ ಹಾಗು ಶಾಲಿಂ ಕುಮಾರ್ ಜೊತೆ ಸೇರಿ ಕೃತ್ಯ ಎಸಗಿದ್ದಾನೆ. ವಿಪರೀತ ಸಾಲ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಹಣಕ್ಕಾಗಿ ದರೋಡೆ ಮಾಡಿದ್ದಾನೆ. ಅನೀಲ್ ಶೆಟ್ಟಿ ಎಂಬವರನ್ನೂ ಹೀಗೇ ಸುಲಿಗೆ ಮಾಡಲು ಆರೋಪಿಗಳು ಮುಂದಾಗಿದ್ದರು. ಏಪ್ರಿಲ್ 10ನೇ ತಾರೀಕಿನಂದು ಘಟನೆ ನಡೆದಿದ್ದು, ಎರಡು ತಿಂಗಳ ಬಳಿಕ ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Robbery Case: ಬಂದೂಕು ತೋರಿಸಿ ತರೀಕೆರೆ ಮಾಜಿ ಶಾಸಕನ ಮನೆ ದರೋಡೆ; ಚಿನ್ನಾಭರಣ ಕದ್ದು ಪರಾರಿ