ಬೆಂಗಳೂರು: ಅದೊಂದು ರಾಬರಿ ಗ್ಯಾಂಗ್ (Robbery case) ಕಾಟಕ್ಕೆ ಹೆದ್ದಾರಿ ಸವಾರರು ಅಕ್ಷರಶಃ ಹೆದರಿದ್ದರು. ಹೆದ್ದಾರಿಯಲ್ಲಿ ಓಡಾಡುವ ವಾಹನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ದರೋಡೆಕೋರರು ಕೃತ್ಯ ಎಸಗಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗುತ್ತಿದ್ದರು. ಅದರಲ್ಲೂ ಪೊಲೀಸ್ ಗಾಡಿಯನ್ನೇ ಕದ್ದು, ಅದರಲ್ಲೇ ರಾಬರಿ ಮಾಡುತ್ತಿದ್ದ ಕಿರಾತಕರನ್ನು ಬಂಧಿಸಿದ್ದಾರೆ.
ಕಳೆದ ಮಾ. 31ರ ಮಧ್ಯರಾತ್ರಿ ದಾಬಸ್ ಪೇಟೆ ಬಳಿ ರಾಬರಿಯೊಂದು ನಡೆದಿತ್ತು. ಮಧ್ಯರಾತ್ರಿ 1-30ರ ಸುಮಾರಿಗೆ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕ್ಯಾಂಟರ್ ವಾಹನಕ್ಕೆ ಅಡ್ಡ ಹಾಕಿದ್ದರು. ಚಾಲಕನಿಗೆ ಚಾಕುವಿನಿಂದ ಇರಿದು, ಆತನ ಬಳಿ ಇದ್ದ ಮೊಬೈಲ್ ಕಸಿದುಕೊಂಡಿದ್ದರು. ನಂತರ ಗೂಗಲ್ ಪೇ, ಫೋನ್ ಪೇನ್ ಮೂಲಕ ಹಣವನ್ನೆಲ್ಲಾ ದೋಚಿದ್ದರು.
ಈ ಸಂಬಂಧ ಚಾಲಕ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೆ ಪೊಲೀಸರು ವಿಶೇಷ ತಂಡವನ್ನು ರಚಿಸಿ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ ಬೇರೆ ಕೇಸ್‌ಗಳಲ್ಲೂ ಭಾಗಿಯಾಗಿರುವ ವಿಚಾರ ತಿಳಿದುಬಂದಿದೆ. ಕಾಮಾಕ್ಷಿಪಾಳ್ಯ ಎಎಸ್‌ಐ ನಾಗರಾಜ್ ಅವರ ಬೈಕ್ ಕದ್ದು, ಅದರಲ್ಲೇ ರಾಬರಿ ಮಾಡಿರುವ ವಿಚಾರ ಕೂಡ ಬೆಳಕಿಗೆ ಬಂದಿದೆ. ಕಳೆದ ತಿಂಗಳ 28ರಂದು ಎಎಸ್‌ಐ ನಾಗರಾಜ್ ಅವರ ಬೈಕ್ ಕಳ್ಳತನವಾಗಿತ್ತು. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ಬೈಕ್ ಬಳಸಿ ಹೆದ್ದಾರಿಯಲ್ಲಿ ರಾಬರಿ ಮಾಡಿರುವುದು ಬೆಳಕಿಗೆ ಬಂದಿದೆ.
ಸದ್ಯ ರಾಬರಿ ಗ್ಯಾಂಗ್ ಅನ್ನು ಪತ್ತೆ ಹಚ್ಚಿರುವ ದಾಬಸ್ ಪೇಟೆ ಪೊಲೀಸರು ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸುಹೇಲ್, ಆದಿ, ವಿಜಯ್, ಧನುಷ್ ಸೇರಿ ಒಟ್ಟು ಆರು ಜನರ ಗ್ಯಾಂಗ್ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ ಬೈಕ್ ಸೇರಿ 6 ಮೊಬೈಲ್‌ಗಳು, ಮೂರುವರೆ ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: Lok Sabha Election 2024 : ಜಯನಗರದಲ್ಲಿ ಸೀಜ್ ಆದ ಕೋಟ್ಯಂತರ ಹಣ; ಇಬ್ಬರ ವಿರುದ್ಧ ಎಫ್‌ಐಆರ್
ಹಗಲಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್; ರಾತ್ರಿಯಲ್ಲಿ ಬೈಕ್ ಕದಿಯುವ ಕಳ್ಳ
ಬೆಂಗಳೂರು: ಬೈಯ್ಯಪ್ಪನಹಳ್ಳಿ ಪೊಲೀಸರು ನಟೋರಿಯಸ್ ಬೈಕ್ ಕಳ್ಳನನ್ನು (Theft Case) ಬಂಧಿಸಿದ್ದಾರೆ. ದೀಪಕ್ ಅಲಿಯಾಸ್ ದೀಪು ಬಂಧಿತ ಆರೋಪಿಯಾಗಿದ್ದಾನೆ. ದೀಪಕ್ ಸ್ವಿಗ್ಗಿ ಡೆಲಿವರಿ ಬಾಯ್ (Swiggy Boy) ಆಗಿ ಕೆಲಸ ಮಾಡುತ್ತಿದ್ದ. ಈತನ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಸುಮಾರು 14 ಪ್ರಕರಣ ದಾಖಲಾಗಿವೆ.
ಬೆಳಗಿನಿಂದ ಸಂಜೆವರೆಗೂ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿ, ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ ಬೈಕ್ ಕದಿಯುತ್ತಿದ್ದ. ಕದ್ದ ಬೈಕ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಬೈಕ್ ಮಾರಾಟಕ್ಕೂ ಮೊದಲು ದಾಖಲಾತಿಯನ್ನೆಲ್ಲ ನಂತರ ಕೊಡುತ್ತೇನೆ ಎಂದು ಯಮಾರಿಸಿ, ಕಡಿಮೆ ಬೆಲೆಗೆ ಬೈಕ್ ಮಾರುತ್ತಿದ್ದ.
ಸದ್ಯ ಬೈಯ್ಯಪ್ಪನಹಳ್ಳಿ ಪೊಲೀಸರು ಈ ಖತರ್ನಾಕ್ ಕಳ್ಳನಿಂದ ಮೂರು ಲಕ್ಷ ಮೌಲ್ಯದ ಐದು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Road Accident : ಹುಬ್ಬಳ್ಳಿಯಲ್ಲಿ ಭೀಕರ ಅಪಘಾತಕ್ಕೆ ಮೂವರು ಬಲಿ, ಮತ್ತೋರ್ವ ಗಂಭೀರ
ಬುಲೆಟ್ ಬೈಕ್ ಕದಿಯಲು ಕಳ್ಳನ ಒದ್ದಾಟ
ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್ ಕಳ್ಳತನಕ್ಕೆ ಕಳ್ಳನೊಬ್ಬ ವಿಫಲ ಯತ್ನ ನಡೆಸಿದ್ದಾನೆ. ಬುಲೆಟ್ ಬೈಕ್‌ನ ಹ್ಯಾಂಡಲ್ ಲಾಕ್ ಕಾಲಿನಿಂದ ಒದ್ದು ಮುರಿಯಲು ಯತ್ನಿಸಿದ್ದಾನೆ. ಬೈಕ್ ಕದಿಯಲು ಕಳ್ಳನ ಒದ್ದಾಟವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಏಪ್ರಿಲ್ 14ರ ಮಧ್ಯರಾತ್ರಿ 2:25ರ ಸುಮಾರಿಗೆ ಕಳ್ಳನೊಬ್ಬ ಬೆಂಗಳೂರಿನ ಜೆ.ಪಿ ನಗರದ ಮನೆ ಬಳಿ ಬಂದಿದ್ದ. ಒಂದೆರಡು ನಿಮಿಷ ಬುಲೆಟ್ ಬೈಕ್ ಅನ್ನೇ ನೋಡುತ್ತಾ, ಜತೆಗೆ ಧರಿಸಿದ್ದ ಟೀ ಶರ್ಟ್‌ನಲ್ಲೇ ಮುಖವನ್ನು ಮುಚ್ಚಿಕೊಂಡಿದ್ದ. ನಂತರ ಬುಲೆಟ್ ಬೈಕ್ ಏರಿ ಕುಳಿತು ಅತ್ತಿಂದಿತ್ತ ಕಣ್ಣಾಡಿಸಿ ಕಾಲಿನಿಂದ ಒದ್ದು ಹ್ಯಾಂಡಲ್ ಮುರಿಯಲು ಯತ್ನಿಸಿದ್ದಾನೆ. ಹೀಗೆ ನಾಲ್ಕೈದು ಬಾರಿ ಪ್ರಯತ್ನಿಸಿದ ನಂತರ ಮತ್ತ ಮನೆ ಮುಂದೆಯೇ ಬೈಕ್ ನಿಲ್ಲಿಸಿ, ಬಂದ ದಾರಿಗೆ ಸುಂಕವಿಲ್ಲ ಎಂದು ತಿಳಿದು ಹೊರಟು ಹೋಗಿದ್ದಾನೆ. ಸದ್ಯ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ