ಬೆಂಗಳೂರು: ರಾಜಧಾನಿಯಲ್ಲಿ ಚುಮುಚುಮು ಮುಂಜಾನೆ ಕೆಲಸಕ್ಕಾಗಿ ಓಡಾಡುವವರನ್ನು ಅಟಕಾಯಿಸಿಕೊಂಡು ದರೋಡೆ ಮಾಡುತ್ತಿದ್ದ ಮಂಗಳಮುಖಿಯರ ಗ್ಯಾಂಗ್ (Robbery gang) ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇವರು ಸಿಗ್ನಲ್‌ಗಳಲ್ಲಿ ನಿಲ್ಲುತ್ತಿರಲಿಲ್ಲ. ಆದರೆ ಬಸ್ ಸ್ಟಾಪ್, ರಸ್ತೆ ಬದಿ ನಡೆಯುವವರನ್ನು ಬಿಡುತ್ತಿರಲಿಲ್ಲ. ಬೆಳಗ್ಗೆ 5 ಗಂಟೆಗೆ ಆಟೋ ಹತ್ತಿದರೆ ಸಿಟಿಯಲ್ಲಿ ರೌಂಡ್ಸ್ ಹಾಕಿ ರಾಬರಿಗೆ ಸ್ಕೆಚ್ ಹಾಕುತ್ತಿದ್ದರು. ಇಂಥ ನಟೋರಿಯಸ್ ಮಂಗಳಮುಖಿಯರ ತಂಡವನ್ನು ಕೊಡಿಗೇಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮೂವರು ಮಂಗಳಮುಖಿಯರ ಜತೆ ಸುಲಿಗೆಯಲ್ಲಿ ಒಬ್ಬ ಆಟೋ ಡ್ರೈವರ್ ಕೂಡ ಸೇರಿಕೊಂಡಿದ್ದು, ನಾಲ್ವರನ್ನೂ ಅರೆಸ್ಟ್ ಮಾಡಲಾಗಿದೆ. ಸ್ನೇಹ, ಅವಿಷ್ಕಾ, ದೀಪಿಕಾ, ಪ್ರಕಾಶ್ ಬಂಧಿತ ಆರೋಪಿಗಳು. ಇವರ ಕೃತ್ಯದ ಸಮಯ ಮುಂಜಾನೆ 5 ಗಂಟೆಯಿಂದ 8 ಗಂಟೆವರೆಗೆ ಆಗಿತ್ತು. ಬೆಳಗ್ಗೆ ಕೆಲಸಕ್ಕೆ ಹೋಗುವ ಟೆಕ್ಕಿಗಳು, ರಸ್ತೆ ಬದಿ ವಾಕಿಂಗ್ ಹೋಗುವ ಜನಗಳನ್ನೇ ಇವರು ಟಾರ್ಗೆಟ್ ಮಾಡುತ್ತಿದ್ದರು. ಹಣ ಕೇಳುವ ನೆಪದಲ್ಲಿ ಹತ್ತಿರ ಬಂದು ಮಾತನಾಡಿಸುತ್ತಿದ್ದರು. ನಂತರ ಆತನೇ ಮೈಮೇಲೆ ಕೈಹಾಕಿದ ಎಂದು ಬೊಬ್ಬೆ ಹಾಕಿ ತಮ್ಮ ತಂಡದವರನ್ನು ಸೇರಿಸುತ್ತಿದ್ದರು. ಇನ್ನಷ್ಟು ಗಲಾಟೆ ಮಾಡುತ್ತೇವೆ, ಪೊಲೀಸರ ಬಳಿಗೆ ಹೋಗುತ್ತೇವೆ ಎಂದೆಲ್ಲಾ ಹೆದರಿಸಿ ಅವರ ಬಳಿ ಇರುವುದನ್ನೆಲ್ಲ ದೋಚುತ್ತಿದ್ದರು.
ಹೀಗೆ ಇವರು ಬೇರೆ ಬೇರೆ ಠಾಣೆ ವ್ಯಾಪ್ತಿಯಲ್ಲಿ ಕೂಡ ಕೃತ್ಯ ಎಸಗಿರುವ ಶಂಕೆ ಇದೆ. ಇತ್ತೀಚೆಗೆ ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದ ಇವರನ್ನು ಕೊಡಿಗೇಹಳ್ಳಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Theft Case: ಮೊಬೈಲ್ ರಾಬರಿಗೆ ಬಂದು ಎಂಟು ಜನರಿಗೆ ಚಾಕು ಹಾಕಿದ ದುಷ್ಕರ್ಮಿಗಳು