ಬೆಂಗಳೂರು: ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ (IPS officer Roopa Moudgil) ಜತೆಗಿನ ವಿವಾದದಿಂದಾಗಿ ಆರು ತಿಂಗಳ ಹಿಂದೆ ಕರ್ತವ್ಯದಿಂದ ವಿಮುಕ್ತರಾಗಿ ಅಜ್ಞಾತವಾಸಕ್ಕೆ ತೆರಳಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini sindhuri) ಅವರನ್ನು ಸರ್ಕಾರ ಹೊಸ ಹುದ್ದೆಗೆ ನಿಯೋಜನೆ ಮಾಡಿದೆ. ಅವರ ಜತೆಗೇ ಯಾವುದೇ ಜವಾಬ್ದಾರಿ ನೀಡದೆ ಮನೆಗೆ ಕಳುಹಿಸಲಾಗಿದ್ದ ರೂಪಾ ಮೌದ್ಗಿಲ್ ಅವರಿಗೆ ಇನ್ನಷ್ಟೇ ಜವಾಬ್ದಾರಿ ನೀಡಬೇಕಾಗಿದೆ. ಅಂದ ಹಾಗೆ ರೋಹಿಣಿ ಸಿಂಧೂರಿ ಅವರ ಹೊಸ ಹುದ್ದೆಯ ಹೆಸರು ಚೀಫ್ ಎಡಿಟರ್ (Chief Editor). ಅವರೀಗ ಕರ್ನಾಟಕ ಗೆಜೆಟಿಯರ್ ಡಿಪಾರ್ಟ್‌ಮೆಂಟ್‌ನ ಮುಖ್ಯ ಸಂಪಾದಕರು!
ರಾಜ್ಯ ಸರ್ಕಾರ ಬುಧವಾರ ಕೆಲವು ಐಐಎಸ್ ಅಧಿಕಾರಿಗಳ ವರ್ಗಾವಣೆಯನ್ನು ಮಾಡಿದ್ದು ಅದರಲ್ಲಿ ರೋಹಿಣಿ ಸಿಂಧೂರಿ ಅವರ ಹೆಸರಿದೆ. ಕಳೆದ ಹಲವು ಸಮಯದಿಂದ ಹುದ್ದೆಗಾಗಿ ಕಾದು ಕುಳಿತಿದ್ದ ರೋಹಿಣಿ ಅವರಿಗೆ ಇದರೊಂದಿಗೆ ಸ್ವಲ್ಪ ಮಟ್ಟಿಗಿನ ನಿರಾಳತೆ ದೊರೆತಂತಾಗಿದೆ.
ಮಂಡ್ಯ, ಹಾಸನದಲ್ಲಿ ಜಿಪಂ ಸಿಇಒ ಆದ ಬಳಿಕ ಮೈಸೂರು ಜಿಲ್ಲಾಧಿಕಾರಿಯಾಗಿ, ಬಳಿಕ ಧಾರ್ಮಿಕ ದತ್ತಿ ಇಲಾಖೆಯ ಕಮೀಷನರ್ ಆಗಿ, ನಂತರ ಕರಕುಶಲ ಮಂಡಳಿಯ ಎಂ.ಡಿ ಆಗಿ ಕೆಲಸ ಮಾಡಿದ್ದ ರೋಹಿಣಿ ಅವರ ವಿರುದ್ಧ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಕೆಲವೊಂದು ಗಂಭೀರ ಆರೋಪಗಳನ್ನು ಮಾಡಿ ಅದು ಬೀದಿ ಜಗಳವಾಗಿ ಪರಿವರ್ತನೆಯಾದಾಗ ರಾಜ್ಯ ಸರ್ಕಾರ ಅವರಿಬ್ಬರನ್ನೂ ಹುದ್ದೆಯಿಂದ ಮುಕ್ತಿಗೊಳಿಸಿ ಅಧಿಕೃತ ರಜೆಯಲ್ಲಿ ಹೋಗುವಂತೆ ತಿಳಿಸಿತ್ತು. ಇದೀಗ ಈ ಆರು ತಿಂಗಳ ಅವಧಿ ಮುಗಿದಿದ್ದು ರೋಹಿಣಿ ಅವರಿಗೆ ಹುದ್ದೆ ತೋರಿಸಲಾಗಿದೆ. ಮುಂದಿನ ಆದೇಶದವರೆಗೂ ಅವರು ಕರ್ನಾಟಕ ಗೆಜೆಟಿಯರ್ ಇಲಾಖೆಯ ಮುಖ್ಯ ಸಂಪಾದಕರು ಹುದ್ದೆ ನಿರ್ವಹಿಸುವಂತೆ ಸೂಚಿಸಲಾಗಿದೆ.
ಐಎಎಸ್ ವರ್ಸಸ್ ಐಪಿಎಸ್ ಜಗಳ ಎಲ್ಲಿಗೆ ಬಂತು?
ಐಪಿಎಸ್ ಅಧಿಕಾರಿಯಾಗಿರುವ ರೂಪಾ ಅವರು 2023ರ ಫೆಬ್ರವರಿ 18 ಮತ್ತು 19ರಂದು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ರೋಹಿಣಿ ಸಿಂಧೂರಿ ಅವರು ಮನೆ ಹಾಳು ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಸಾವನ್ನೂ ತಳುಕು ಹಾಕಿದ ರೂಪಾ ಅವರು ಇತರ ಐಎಎಸ್ ಅಧಿಕಾರಿಗಳಿಗೆ ಅಸಭ್ಯ ಚಿತ್ರಗಳನ್ನು ರಾತ್ತಿ ಹೊತ್ತು ಕಳುಹಿಸುತ್ತಿದ್ದಾರೆ. ಬೇರೆ ಐಎಎಸ್ ಅಧಿಕಾರಿಗಳ ಮನೆ ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದು ಭಾರಿ ಸಂಚಲನವನ್ನು ಸೃಷ್ಟಿಸಿತ್ತು. ಇದರ ವಿರುದ್ಧ ರೋಹಿಣಿ ಸಿಂಧೂರಿ ಅವರು ಕೋರ್ಟ್ ಮೆಟ್ಟಿಲು ಹತ್ತಿದ್ದರು. ಈ ನಡುವೆ, ರಾಜ್ಯ ಸರ್ಕಾರ ಇಬ್ಬರೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಲ್ಲದೆ, ಅವರನ್ನು ಸೇವೆಯಿಂದ ಮುಕ್ತಿಗೊಳಿಸಿ ರಜೆ ಮೇಲೆ ಕಳುಹಿಸಿತ್ತು. ಇದೀಗ ವಾದ-ವಿವಾದಗಳ ಹಂತ ಮುಗಿದು ಇನ್ನು ರೂಪಾ ಮೌದ್ಗಿಲ್ ವಿಚಾರಣೆ ಎದುರಿಸಬೇಕಾಗುವ ಹಂತ ಬಂದಿದೆ. ಕೆಲವು ದಿನಗಳ ಹಿಂದಷ್ಟೇ ಹೈಕೋರ್ಟ್ ಮಾನನಷ್ಟ ಮೊಕದ್ದಮೆ ರದ್ದು ಕೋರಿದ್ದ ರೂಪಾ ಅವರ ಮನವಿಯನ್ನು ತಿರಸ್ಕರಿಸಿತ್ತು.
ಇಲಾಖಾ ತನಿಖೆಯ ಬಿಸಿಯಲ್ಲಿ ರೋಹಿಣಿ ಸಿಂಧೂರಿ
ಅವರಿಗೆ ಹುದ್ದೆ ನೀಡಲಾಗಿದೆ ಎಂದ ಮಾತ್ರಕ್ಕೆ ರೋಹಿಣಿ ಸಿಂಧೂರಿ ಅವರ ಎಲ್ಲ ಸಮಸ್ಯೆಗಳು ನೀಗಿದವು ಅಂತಲ್ಲ. ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ (Mysore District Commissioner) ಕೇಳಿ ಬಂದ ಹಣಕಾಸು ದುರ್ಬಳಕೆ ಮತ್ತು ನಿಯಮ ಉಲ್ಲಂಘನೆ ಪ್ರಕರಣಗಳ ಇಲಾಖಾವಾರು (Departmental Enquiry) ತನಿಖೆಗೆ ರಾಜ್ಯ ಸರ್ಕಾರ ಆದೇಶ (Government order) ಕೆಲವು ದಿನಗಳ ಹಿಂದೆ ಆದೇಶ ನೀಡಿದೆ. ಮೈಸೂರು ಡಿಸಿ ನಿವಾಸ ನವೀಕರಣ, ಬಟ್ಟೆ ಬ್ಯಾಗ್ ಖರೀದಿಯಲ್ಲಿ ನಿಯಮ ಉಲ್ಲಂಘನೆ ಆರೋಪದಲ್ಲಿ ಇಲಾಖಾವಾರು ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದ್ದು, ನಿವೃತ್ತ ಐಎಎಸ್ ಅಧಿಕಾರಿ ಯೋಗೇಂದ್ರ ತ್ರಿಪಾಠಿ, ಬಿಬಿಎಂಪಿ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ ಆಗಿದೆ. ಡಿಪಿಎಆರ್ ಅಧೀನ ಕಾರ್ಯದರ್ಶಿ ಜೇಮ್ಸ್ ತರಕ್ಕನ್ ಅವರು ಈ ಆದೇಶ ಹೊರಡಿಸಿದ್ದಾರೆ. ಇದನ್ನೂ ಕೂಡಾ ರೋಹಿಣಿ ಎದುರಿಸಬೇಕಾಗಿದೆ.
ವರ್ಗಾವಣೆಯಾದ ಇತರ ಅಧಿಕಾರಿಗಳು
- ಪ್ರದೀಪ್ ಜಿ.: ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ (ಸೋಶಿಯಲ್ ಆಡಿಟ್) ನಿರ್ದೇಶಕರು. (ಹುದ್ದೆ ನಿಯೋಜನೆ ಕಾದಿದ್ದರು)
- ಎಸ್ ವಿಕಾಶ್ ಕಿಶೋರ್: ಲೋಕಸೇವಾ ಆಯೋಗ ಕಾರ್ಯದರ್ಶಿ ಆಗಿದ್ದ ಇವರನ್ನು ಬಿಬಿಎಂಪಿ ರಾಜರಾಜೇಶ್ವರಿ ನಗರದ ವಲಯ ಆಯುಕ್ತರಾಗಿ ನೇಮಕ.
- ಲತಾ ಕುಮಾರಿ : ಲೋಕಸೇವಾ ಆಯೋಗದ ಕಾರ್ಯದರ್ಶಿ (ಹುದ್ದೆ ನಿಯೋಜನೆ ಕಾದಿದ್ದರು)
- ಸಿಎಸ್ ಸುಧೀಂದ್ರ: ಕರಕುಶಲ ಮತ್ತು ಕೈಮಗ್ಗ ಇಲಾಖೆ ನಿರ್ದೇಶಕರ ಹುದ್ದೆ (ಹುದ್ದೆ ನಿಯೋಜನೆ ಕಾದಿದ್ದರು)
- ಸಂಗಪ್ಪ: ಕಿಯೋನಿಸ್ಕ್ ನಿರ್ದೇಶಕ
- ಶ್ರೀರೂಪಾ :ರೇಷ್ಮೆ ಸಂಶೋಧನಾ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿದ್ದ ಶ್ರೀರೂಪಾ ಅವರನ್ನು ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ಕಾರ್ಯಕಾರಿ ನಿರ್ದೇಶಕರಾಗಿ ನೇಮಕ.