Site icon Vistara News

ರೋಹಿಣಿ ಸಿಂಧೂರಿ ವಿರುದ್ಧ ಲಕ್ಕಿ ಅಲಿ ಆರೋಪ: ಕಾನೂನು ಕ್ರಮದ ಎಚ್ಚರಿಕೆ ನೀಡಿದ IAS ಅಧಿಕಾರಿ

rohini sinduri warns legal action against lucky ali

ಬೆಂಗಳೂರು: ಖ್ಯಾತ ಬಾಲಿವುಡ್‌ ಗಾಯ ಹಾಗೂ ನಟ ಲಕ್ಕಿ ಅಲಿ ನೀಡಿದ ದೂರನ್ನು ಪೊಲೀಸರು ಪಡೆಯಲಿಲ್ಲ ಎಂಬ ಕುರಿತು ತನಿಖೆ ನಡೆಸುವುದಾಗಿ ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಇದೇ ವೇಳೆ, ಇಡೀ ಪ್ರಕರಣದಲ್ಲಿ ತಮ್ಮನ್ನು ಸುಖಾ ಸುಮ್ಮನೆ ಎಳೆದುತರಲಾಗುತ್ತಿದೆ ಎಂದು ರೋಹಿಣಿ ಸಿಂಧೂರಿ ಬೇಸರ ವ್ಯಕ್ತಪಡಿಸಿದ್ದು, ಲಕ್ಕಿ ಅಲಿ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ರೋಹಿಣಿ ಸಿಂಧೂರಿ, ಈ ಸುದ್ದಿಯನ್ನು ನಾನು ಮಾಧ್ಯಮಗಳಲ್ಲಿ‌ ನೋಡಿದ್ದೇನೆ. ಲಕ್ಕಿ ಅಲಿಯವರ ದೂರಿನ‌ ಬಗ್ಗೆ ಮಾಹಿತಿ ಪಡೆಯುತ್ತೇನೆ. ಡಿಜಿಪಿಯವರ ಜತೆ ಇದರ ಬಗ್ಗೆ ಮಾತಾಡಿ ಮಾಹಿತಿ ಪಡೆಯುತ್ತೇನೆ. ಅವರು ಯಾವ ಠಾಣೆಗೆ ದೂರು‌ ಕೊಟ್ಟಿದ್ದರು, ಯಾವ ಪೊಲೀಸರು ದೂರು ನಿರಾಕರಿಸಿದ್ದರು ಎಂದು ವಿವರ ಪಡೆಯುತ್ತೇನೆ. ನಂತರ ಈ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ರೋಹಿಣಿ ಸಿಂಧೂರಿ ಎಚ್ಚರಿಕೆ
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರೋಹಿಣಿ ಸಿಂಧೂರಿ, ನನ್ನ ವಿರುದ್ಧ ಲಕ್ಕಿ ಅಲ್ಲಿ ಹೊರಿಸಿರುವ ಸಂಪೂರ್ಣ ಸುಳ್ಳು ಆರೋಪದಿಂದಾಗಿ ಆಘಾತವಾಗಿದೆ. ನನ್ನ ಯಾವುದೇ ಪಾತ್ರವು ಇಲ್ಲದಿದ್ದರೂ ದುರುದ್ದೇಶಪೂರ್ವಕವಾಗಿ ನನ್ನನ್ನು ಎಳೆದುತರಲಾಗಿದೆ. ನನಗೆ ತಿಳಿದ ಮಟ್ಟಿಗೆ ಲಕ್ಕಿ ಅಲಿ ಅವರ ವಿರುದ್ಧ ತಾತ್ಕಾಲಿಕ ಇಂಜಂಕ್ಷನ್‌ ಇದೆ ಹಾಗೂ ಪ್ರಕರಣವು ನ್ಯಾಯಾಂಗ ವಿಚಾರಣೆ ಹಂತದಲ್ಲಿದೆ. ಲಕ್ಕಿ ಅಲಿ ಅವರ ಕಲಾ ಸಾಮರ್ಥ್ಯವನ್ನು ನಾನು ಗೌರವಿಸುತ್ತೇನಾದರೂ ನ್ಯಾಯಾಂಗ ವಿಚಾರಣೆ ಇರುವಾಗಲೇ ಇಂತಹ ನಡೆ ಅನಗತ್ಯವಾಗಿತ್ತು. ಸಾರ್ವಜನಿಕ ಸಹಾನುಭೂತಿ ಗಳಿಸಲು ಈ ರೀತಿ ಮಾಡಲಾಗಿದೆ. ಇದರ ವಿರುದ್ಧ ಕಾನೂನು ಕ್ರಮಕ್ಕೆ ಯೋಜಿಸುತ್ತಿರುವೆ ಎಂದಿದ್ದಾರೆ.

ಕಾಂಗ್ರೆಸ್‌ ಟೀಕೆ

ರೋಹಿಣಿ ಸಿಂಧೂರಿ ಅವರ ಪತಿಯ ವಿರುದ್ಧ ದೂರು ಕೇಳಿಬಂದಿರುವ ಕುರಿತು ಕಾಂಗ್ರೆಸ್‌ ಟ್ವೀಟ್‌ ಮಾಡಿದ್ದು, ಸರ್ಕಾರವನ್ನು ಟೀಕಿಸಿದೆ. ಅಧಿಕಾರಿಯ ಪತಿ ವಿರುದ್ಧ ಆರೋಪ ಕೇಳಿ ಬಂದ್ರು ಮೌನವೇಕೆ ಸಿಎಂ? …
IAS ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಪತಿಯ ಕೋಟ್ಯಂತರ ಮೌಲ್ಯದ ಆಸ್ತಿ ಕಬಳಿಕೆಯ ಕೆಲಸಗಳಿಗೆ ಸಹಕರಿಸುತ್ತಿರುವ ಆರೋಪ ಕೇಳಿ ಬಂದಿದೆ. ಸಿಎಂ ಬೊಮ್ಮಾಯಿ ಅವರೇ, ತಮ್ಮ ಸರ್ಕಾರ ರೌಡಿಸಂ, ಲ್ಯಾಂಡ್ ಮಾಫಿಯಾ, 40% ಕಮಿಷನ್‌ಗಳಲ್ಲೇ ಮುಳುಗಿದ್ದರೂ ಯಾವೊಂದು ಸಂಗತಿಯೂ ತಮ್ಮ ಗಮನಕ್ಕೆ ಬರಲಿಲ್ಲವೇ? ಅಥವಾ ಎಲ್ಲವೂ ನಿಮ್ಮ ಅಣತಿಯಲ್ಲೇ ನಡೆಯುತ್ತಿದೆಯೇ? ಎಂದು ಹೇಳಿದೆ.

ಇದನ್ನೂ ಓದಿ | ಜಮೀನು ಕಬಳಿಸಲು ಪತಿಗೆ ಸಹಾಯ: IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಬಾಲಿವುಡ್‌ ಗಾಯಕ ಗಂಭೀರ ಆರೋಪ

Exit mobile version