ಬೆಂಗಳೂರು: ರೌಡಿಶೀಟರ್ ಸಿದ್ದಾಪುರ ಮಹೇಶ್ ಹತ್ಯೆ (Rowdy Murder) ಆರೋಪಿಗಳ ಪತ್ತೆಗೆ ಪೊಲೀಸರು 4 ವಿಶೇಷ ತಂಡಗಳ ರಚನೆ ಮಾಡಿದ್ದು, ಪ್ರಾಥಮಿಕ ಮಾಹಿತಿ ಆಧರಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. 40 ದಿನಗಳಲ್ಲಿ ಬೆಂಗಳೂರಿನಲ್ಲಿ ಇಬ್ಬರು ರೌಡಿಗಳ ಹೆಣ ಬಿದ್ದಿದ್ದು, ರಾಜಧಾನಿಯಲ್ಲಿ ಮತ್ತೆ ಗ್ಯಾಂಗ್‌ವಾರ್‌ಗಳ (Gang war) ಯುಗ ಶುರುವಾಗುತ್ತಿದೆಯಾ ಎಂಬ ಭೀತಿ ಮೂಡಿಸಿದೆ.
ಕೃತ್ಯ ನಡೆದ ಜಾಗದ ಸಿಸಿಟಿವಿ ಪರಿಶಿಲನೆಯನ್ನು ಪರಪ್ಪನ ಅಗ್ರಹಾರ ಪೊಲೀಸರು ನಡೆಸುತ್ತಿದ್ದು, ಟವರ್ ಡಂಪ್ ತೆಗೆದು, ಬೈಕ್ ನಂಬರ್ ಆಧರಿಸಿ ಕೂಡ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ. ಎರಡು ಬೈಕ್‌ಗಳಲ್ಲಿ ಬಂದಿದ್ದ ಆರೋಪಿಗಳು ಮೊದಲಿಗೆ ಡ್ರೈವರ್ ಮೇಲೆ ಹಲ್ಲೆ ನಡೆಸಿದ್ದರು. ಆಗ ಕಾರಿನಿಂದ ಇಳಿದು ಓಡಿದ್ದ ಮಹೇಶನನ್ನು ಅಟ್ಟಾಡಿಸಿಕೊಂಡು ಬಂದು ರಸ್ತೆ ಮಧ್ಯದಲ್ಲಿ ಹತ್ಯೆ ಮಾಡಲಾಗಿದೆ.
ಯಾರು ಸಿದ್ದಾಪುರ ಕಿಂಗ್?
ಸಿದ್ದಾಪುರ ಕಿಂಗ್ ಪಟ್ಟಕ್ಕಾಗಿ ಈ ಹಿಂದೆ ಮದನ್ ಎಂಬ ರೌಡಿಯ ಕೊಲೆಯನ್ನು ಮಹೇಶ ಮಾಡಿದ್ದ. ಮಹೇಶ ಈ ಹಿಂದೆ ಹತ್ಯೆಯಾಗಿರುವ ಶಾಂತಿನಗರ ಲಿಂಗನ ಶಿಷ್ಯನಾಗಿದ್ದು, ಬದುಕಿದ್ದಾಗಲೇ ಮಹೇಶ್@ಸಿದ್ದಾಪುರ ಮಹೇಶ್ ಅನ್ನು ಕಿಂಗ್ ಮಾಡ್ತೀನಿ ಎಂದು ಲಿಂಗ ಹೇಳಿದ್ದ. ಇದೇ ಕಾರಣಕ್ಕೆ 2020ರಲ್ಲಿ ಲಿಂಗನನ್ನು ನಾಗ &ಟೀಂ ಹತ್ಯೆಗೈದಿತ್ತು. ಇದೇ ಕೊಲೆ ಸೇಡಿಗಾಗಿ ನಾಗನಿಗೆ ಸ್ಪಾಟ್ ಫಿಕ್ಸ್ ಮಾಡಲು ಮಹೇಶ್ ಟೀಂ ಸ್ಕೆಚ್ ಹಾಕಿತ್ತು. ಈ ವಿಷಯ ಲೀಕ್ ಆಗಿ ಮಹೇಶ್ ಹತ್ಯೆಗೆ ನಾಗ, ಜೈಲಲ್ಲಿದ್ದುಕೊಂಡೇ ಹುಡುಗರನ್ನು ಸಿದ್ದಗೊಳಿಸಿದ್ದ. ಹೀಗಾಗಿ, ಜೈಲು ಸೇರುವುದು ಸುರಕ್ಷಿತ ಎಂದು ನಿರ್ಧರಿಸಿದ್ದ ಮಹೇಶ್, ಜೈಲು ಸೇರಲು ಕೊಲೆ ಮಾಡಿಯೇ ಹೋಗಬೇಕು ಅಂತ ಸ್ಕೆಚ್ ಹಾಕಿದ್ದ.
ಹೀಗಾಗಿ ನಾಗನಿಗೆ ಫೈನಾನ್ಸ್ ಮಾಡುತ್ತಿದ್ದ ಮದನ್‌ಗೆ ಮುಹೂರ್ತ ಫಿಕ್ಸ್ ಮಾಡಿದ್ದ. ಬಳಿಕ ಮದನ್ ಕೊಲೆಗೆ ಲಿಂಗನ ಶಿಷ್ಯಂದಿರಾದ ಎಸ್‌ಆರ್ ನಗರ ಗಿರಿ, ಪ್ರಕಾಶ್ ಸಾಥ್ ಕೊಟ್ಟಿದ್ದರು. ಮಹೇಶ್ ಈ ಹಿಂದೆ ಕೂಡ ಹಲವು ಕೇಸ್‌ಗಳನಲ್ಲಿ ಜೈಲು ಸೇರಿದ್ದ. ಕೊಲೆಯತ್ನ (307) ಕೇಸ್‌ನಲ್ಲಿ ಸಜೆ ಕೂಡ ಆಗಿತ್ತು. ವರ್ತೂರ್ ಕರಾಟೆ ಶಿವ ಹತ್ಯೆಗೆ 50 ಲಕ್ಷ ಸುಪಾರಿ ಪಡೆದು ಹತ್ಯೆ ಮಾಡಿದ್ದ ಹಾಗೂ ವೈಟ್‌ಫೀಲ್ಡ್ ಸುಹೈಲ್ ಹತ್ಯೆಗೂ ಸುಪಾರಿ ಪಡೆದು ಹತ್ಯೆಗೈದಿದ್ದ ಎನ್ನಲಾಗಿದೆ.
ದಶಕದ ಹಿಂದಿನ ಸೇಡಿನ ಸಮರ
ಗುರು ಶಿಷ್ಯರ ಕಾಳಗಕ್ಕೆ ಬೆಂಗಳೂರು ಪೊಲೀಸ್ (bangalore police) ಬೆಚ್ಚಿಬಿದ್ದಿದ್ದಾರೆ. ಗ್ಯಾಂಗ್‌ವಾರ್ ದ್ವೇಷಕ್ಕೆ 20 ದಿನದಲ್ಲಿ ಎರಡು ಹೆಣ ಬಿದ್ದಿವೆ. ಡಿಜೆಹಳ್ಳಿ ವ್ಯಾಪ್ತಿಯಲ್ಲಿ ರೌಡಿಶೀಟರ್ ಕಫಿಲ್ ಹತ್ಯೆ ನಡೆದಿತ್ತು. ಇದು ಸೈಲೆಂಟ್ ಸುನೀಲ (silent sunil) ಹಾಗೂ ವಿಲ್ಸನ್ ಗಾರ್ಡನ್ ನಾಗನ (Wilson garden naga) ನಡುವಿನ ಗ್ಯಾಂಗ್‌ವಾರ್.
ವಿಲ್ಸನ್ ಗಾರ್ಡನ್ ನಾಗ ಈ ಹಿಂದೆ ಸೈಲೆಂಟ್ ಸುನೀಲನ ಶಿಷ್ಯನೇ ಆಗಿದ್ದ. ರೌಡಿಶೀಟರ್ ಬಬ್ಲಿ ಹಾಗೂ ಮದನ್ ಹತ್ಯೆಗೆ ಅಸಲಿ ಕಾರಣ ಸುನೀಲ ಹಾಗೂ ನಾಗನ ನಡುವಿನ ಗ್ಯಾಂಗ್‌ವಾರ್. ಜುಲೈ 2ರಂದು ಬನಶಂಕರಿ ಮೆಟ್ರೊ ನಿಲ್ದಾಣದ ಬಳಿ ಮದನ್ ಹತ್ಯೆ ಮಾಡಲಾಗಿತ್ತು. ಲಿಂಗನ ಹತ್ಯೆಯ ಪ್ರತೀಕಾರಕ್ಕೆ ಲಿಂಗನ ಶಿಷ್ಯ ಮಹೇಶ್ ಗ್ಯಾಂಗ್‌ನಿಂದ ಮದನ್ ಹತ್ಯೆ ನಡೆದಿತ್ತು. 2020ರ ಡಿಸೆಂಬರ್‌ನಲ್ಲಿ ಚನ್ನರಾಯಪಟ್ಟಣದಲ್ಲಿ ಲಿಂಗನನ್ನು ಮೋಹನ್ ಹತ್ಯೆ ಮಾಡಿದ್ದ. ಮೋಹನ್‌ಗೆ ಇದೇ ಮದನ್ ಹಣ ನೀಡಿದ್ದ. ಮೋಹನ್ ಹಾಗೂ ಮದನ್ ನಾಗನ ಶಿಷ್ಯಂದಿರು. ಲಿಂಗ ಸುನೀಲನ ಖಾಸಾ ಶಿಷ್ಯ. ಲಿಂಗ ಮರ್ಡರ್ ಆಗುತ್ತಿದ್ದಂತೆ ಮಹೇಶ್ & ಗ್ಯಾಂಗ್ ಸುನೀಲನ ಟೀಂ ಸೇರಿತ್ತು. ಜುಲೈ 19ರಂದು ಕೋರಮಂಗಲ ಯೂನಿಯನ್ ಬ್ಯಾಂಕ್‌ನಲ್ಲಿ ಬಬ್ಲಿ ಹತ್ಯೆಯಾಗಿತ್ತು. ಬಬ್ಲಿ ಸೈಲೆಂಟ್ ಸುನೀಲ್ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ. ನಾಗನ ಶಿಷ್ಯ ಪ್ರದೀಪ್ ಆಂಡ್ ಗ್ಯಾಂಗ್ ಬಬ್ಲಿ ಹತ್ಯೆಯಲ್ಲಿ ಪಾಲ್ಗೊಂಡಿತ್ತು.
ಗುರು ಶಿಷ್ಯರ ನಡುವೆ ದ್ವೇಷಕ್ಕೆ ಕಾರಣವಾಗಿದ್ದು ಅದೊಂದು ಪಾರ್ಟಿ!
2017ರ ಕಡಬಗೆರೆ ಸೀನನ ಶೂಟೌಟ್ ಕೇಸ್‌ನಲ್ಲಿ ಸೈಲೆಂಟ್ ಸುನೀಲ, ಒಂಟೆ ರೋಹಿತ, ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ್ ಜೈಲು ಸೇರಿದ್ದರು. ಕೋಗಿಲು ಕ್ರಾಸ್‌ನಲ್ಲಿ ಡಾಬ ಸೀನ ಮೇಲಿನ ದಾಲಿಗೆ ಸುನೀಲ್‌ಗೆ ಕಂಟ್ರಿಮೇಡ್ ಪಿಸ್ತೂಲ್ ಸಪ್ಲೈ ಮಾಡಿದ್ದು ಇದೇ ನಾಗ ಮತ್ತು ಮೋಹನ. ಕಡಬಗೆರೆ ಸೀನನ ಕೇಸ್‌ನಲ್ಲಿ ಜಾಮೀನು ಮೇಲೆ ಹೊರಬಂದ ನಂತರ ಸುನೀಲನಿಂದ ಪಾರ್ಟಿ ಆಯೋಜನೆಯಾಗಿತ್ತು. ಪಾರ್ಟಿಯಲ್ಲಿ ಶಾಂತಿನಗರ ಲಿಂಗ ಹಾಗೂ ನಾಗನ ಮಧ್ಯೆ ಕುಡಿದ ಮತ್ತಿನಲ್ಲಿ ಜಗಳವಾಗಿತ್ತು.
ನಂತರ ವಿಲ್ಸನ್ ಗಾರ್ಡನ್ ನಾಗ ತನ್ನ ಶಿಷ್ಯ ಮೋಹನನಿಗೆ ಸುಪಾರಿ ಕೊಟ್ಟು 2020ರ ಡಿಸೆಂಬರ್‌ನಲ್ಲಿ ಲಿಂಗನ ಹತ್ಯೆ ಮಾಡಿಸಿದ್ದ. ಲಿಂಗ ಹತ್ಯೆಯಾಗುವ ಎರಡು ದಿನ ಮುಂಚೆ ನಾಗ ಜೈಲಿಗೆ ಹೋಗಿದ್ದ. ತನ್ನ ಬಲಗೈನಂತಿದ್ದ ಲಿಂಗನ ಹತ್ಯೆ ಹಿಂದೆ ನಾಗ ಹಾಗೂ ಮೋಹನನ ಕೈವಾಡ ಕಂಡು ಸುನೀಲ ಕೆಂಡವಾಗಿದ್ದ. ಸುನೀಲ್ ಶಿಷ್ಯರಾದ ಮಹೇಶ್ ಗ್ಯಾಂಗ್‌ನಿಂದ ಮದನ್ ಹತ್ಯೆಯಾಗಿತ್ತು. ವಿಲ್ಸನ್ ಗಾರ್ಡನ್ ನಾಗನ ಶಿಷ್ಯ ಪ್ರದೀಪ್ ಗ್ಯಾಂಗ್‌ನಿಂದ ಬಬ್ಲಿ ಹತ್ಯೆಯಾಗಿತ್ತು.
ಇದನ್ನೂ ಓದಿ: Murder Case: ಜೈಲಿನಿಂದ ಹೊರಬರುತ್ತಲೇ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಕೊಲೆ