ಬೆಂಗಳೂರು: ರಾಷ್ಟ್ರ ರಕ್ಷಣಾ ಪಡೆ ನಾಯಕ ಹಾಗೂ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ ಪುನೀತ್ ಕೆರೆಹಳ್ಳಿ (Puneeth Kerehalli) ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿದೆ. ಗೂಂಡಾ ಕಾಯ್ದೆಯಡಿ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
2013ರಿಂದ 2023ರವರೆಗೆ 10 ಪ್ರಕರಣಗಳಲ್ಲಿ ಪುನೀತ್ ಕೆರೆಹಳ್ಳಿ ಭಾಗಿಯಾಗಿದ್ದಾನೆ. ಮೇಲಿಂದ ಮೇಲೆ ಕ್ರಿಮಿನಲ್ ಪ್ರಕರಣಗಳು ಈತನ ಮೇಲೆ ದಾಖಲಾಗುತ್ತಿದ್ದು, ಸಮಾಜದಲ್ಲಿ ಶಾಂತಿ ಕದಡುವ ಯತ್ನ ನಡೆಸಿದ ಆರೋಪ ಈತನ ಮೇಲಿದೆ. ಸಿಸಿಬಿ ಪೊಲೀಸರಿಂದ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸದ್ಯ ಪುನೀತ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುನೀತ್ ಕೆರೆಹಳ್ಳಿ ವಿರುದ್ಧ ಡಿಜೆ ಹಳ್ಳಿ, ಬೇಗೂರು, ಕಗ್ಗಲಿಪುರ, ಹಲಸೂರು ಗೇಟ್, ಚಾಮರಾಜಪೇಟೆ, ಎಲೆಕ್ಟ್ರಾನಿಕ್ ಸಿಟಿ, ಮಳವಳ್ಳಿ ಮತ್ತು ಸಾತನೂರು ಠಾಣೆಗಳಲ್ಲಿ ಪ್ರಕರಣಗಳಿವೆ.
ಕೊಲೆ, ಕೊಲೆಯತ್ನ, ದೊಂಬಿ, ಪ್ರಾಣ ಬೆದರಿಕೆ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ಭಾಗಿಯಾಗಿರುವ ಆರೋಪಗಳಿವೆ. ಕೊಲೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ ಕೆರೆಹಳ್ಳಿ ಇತ್ತೀಚೆಗಷ್ಟೇ ಜಾಮೀನು ಮೂಲಕ ಬಿಡುಗೆಡೆಯಾಗಿದ್ದ. ಜಾಮೀನು ಮೇಲೆ ಬಿಡುಗಡೆಗೊಂಡ ಬಳಿಕ ತನ್ನ ಹಳೇ ಚಾಳಿ ಮುಂದುವರಿಸಿದ್ದ. ಈ ಹಿನ್ನೆಲೆಯಲ್ಲಿ ಕೆರೆಹಳ್ಳಿಗೆ ನೋಟಿಸ್ ನೀಡಿರುವ ಚಿಕ್ಕಪೇಟೆ ಎಸಿಪಿ ಅವರು, ನಿನ್ನ ಮೇಲೆ ಯಾಕೆ ರೌಡಿಶೀಟ್ ತೆರೆಯಬಾರದು ಎಂಬುದಕ್ಕೆ ವಿವರಣೆ ನೀಡಬೇಕು. ಇಲ್ಲದಿದ್ದರೆ, ಯಾವುದೇ ವಿವರಣೆ ಇಲ್ಲ ಎಂದು ಭಾವಿಸಿ ರೌಡಿ ಪಟ್ಟಿ ತೆರೆಯುವುದಾಗಿ ಸೂಚಿಸಿದ್ದರು.
ಈ ಹಿಂದೆ ಭಾರೀ ಸದ್ದು ಮಾಡಿದ್ದ ಹಲಾಲ್ ಕಟ್ ಸೇರಿದಂತೆ ಹಲವು ಗಲಾಟೆಗಳಲ್ಲಿ ಪುನೀತ್ ಕೆರೆಹಳ್ಳಿ ಸಕ್ರಿಯನಾಗಿದ್ದ. ವಿಧಾನಸಭೆ ಚುನಾವಣೆ ಮುಂಚೆ ಗೋ ಸಾಗಾಟಗಾರರನ್ನು ಪೊಲೀಸ್ ಒಪ್ಪಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದಾನೆಂದು ಹೇಳಲಾಗಿತ್ತು. ರಾಮನಗರ ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇತ್ತೀಚೆಗಷ್ಟೇ ಜಾಮೀನು ಮೇಲೆ ಪುನೀತ್ ಕೆರೆಹಳ್ಳಿ ಜೈಲಿನಿಂದ ಹೊರಗೆ ಬಂದಿದ್ದ. ಈಗ ಮತ್ತೆ ಬಂಧಿಸಲಾಗಿದೆ.
ಇದನ್ನೂ ಓದಿ: Assembly Session: ಪುನೀತ್ ಕೆರೆಹಳ್ಳಿ ಮೇಲೆ ಡೌಟ್ ಇದ್ದಿದ್ದಕ್ಕೆ ನೋಟಿಸ್: ಪೂಜೆಗೆ ಪರ್ಮಿಷನ್ ಬೇಡ ಎಂದ ಸರ್ಕಾರ