ಬೆಂಗಳೂರು: ಬೆಂಗಳೂರಿನ ಹೃದಯಭಾಗದಲ್ಲಿರುವ ಮಂತ್ರಿ ಮಾಲ್ ಬಳಿ ರೌಡಿ ಶೀಟರ್ ಗಣೇಶನನ್ನು ಕೊಚ್ಚಿ ಕೊಲೆ ಮಾಡಿದ (Murder Case) ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಹಾಡಹಗಲೇ ಗಣೇಶ ಅಲಿಯಾಸ್ ಕುಂದಾಪ್ರಿ ಗಣೇಶ್ ಎಂಬಾತನ ಮೇಲೆ ಮಚ್ಚು ಲಾಂಗ್‌ಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್ ಬಳಿಯ ನಟರಾಜ ಥಿಯೇಟರ್ ಮುಂದೆ ಘಟನೆ ನಡೆದಿತ್ತು. ಗಣೇಶ ಹೋಂಡಾ ಆಕ್ಟೀವಾದಲ್ಲಿ ಬರುತ್ತಿದ್ದ ವೇಳೆ ಆಟೋದಲ್ಲಿ ಬಂದು ಅಡ್ಡ ಹಾಕಿದ ನಾಲ್ಕು ಜನ, ಮಚ್ಚು ಲಾಂಗ್‌ಗಳನ್ನು ಮನಸೋ ಇಚ್ಛೆ ಬೀಸಿ ಪರಾರಿಯಾಗಿದ್ದರು. ಈ ಕೊಲೆಗೆ ಎರಡು ಗ್ಯಾಂಗ್‌ಗಳ ಮಧ್ಯೆ ನಡೆಯುತ್ತಿದ್ದ ಕಿತ್ತಾಟ ಕಾರಣ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ | NIA Raid | ಟೆರರಿಸ್ಟ್ ಜತೆ ಲಿಂಕ್, ಗ್ಯಾಂಗ್‌ಸ್ಟರ್‌ಗಳಿಗೆ ಸೇರಿದ 60 ಸ್ಥಳಗಳಲ್ಲಿ ಎನ್ಐಎ ರೇಡ್
ಕುಮಾರ್ ಹಾಗೂ ನಾಗರಾಜ್ ಟೀಂಗಳ ನಡುವೆ ಯಾವಾಗಲೂ ಕಿತ್ತಾಟ ಆಗುತ್ತಲೇ ಇರುತ್ತಿತ್ತು. ಇದೀಗ ನಾಗರಾಜನ ಗ್ಯಾಂಗ್‌ನಲ್ಲಿ ಕಾಣಿಸಿಕೊಂಡಿದ್ದ ಗಣೇಶನ ಕೊಲೆ ನಡೆದಿದೆ.
ಕೊರೊನಾ ಸಮಯದಲ್ಲಿ ಗ್ಯಾಂಗ್ ಮಧ್ಯೆ ಊಟ-ತಿಂಡಿ-ಹಾಲಿಗಾಗಿ ಗಲಾಟೆ ನಡೆದಿತ್ತು. ಸ್ಲಂಗಳಿಗೆ ಹಂಚಲು ಕಳುಹಿಸಿದ್ದ ತಿಂಡಿ-ತಿನಿಸಿಗೆ ಗಲಾಟೆ ಮಾಡಿಕೊಂಡಿದ್ದರು. ತಾವೇ ಹಂಚಬೇಕು, ನಮ್ಮವರಿಗೆ ಹೆಚ್ಚು ಆಹಾರ ಪದಾರ್ಥ ಕೊಡಬೇಕು ಎಂದು ಕಿತ್ತಾಡಿಕೊಂಡಿದ್ದರು.
2020ರಲ್ಲೇ ನಾಗರಾಜ್ ಹಾಗೂ ಕುಮಾರ್ ಕಡೆಯವರ ಮೇಲೆ ಕೌಂಟರ್ ಕಂಪ್ಲೇಂಟ್ ದಾಖಲಾಗಿತ್ತು. ಈ ಹಿಂದೆ ದಾಖಲಾಗಿದ್ದ ಕೇಸಲ್ಲಿ ಗಣೇಶ ಎ2 ಆರೋಪಿಯಾಗಿದ್ದ. ನಾಗರಾಜ, ಗಣೇಶ, ಅಜಯ್ ಹಾಗೂ ಕಾಳಿಯಪ್ಪನ ಮೇಲೆ ಎಫ್ ಐಆರ್ ಆಗಿತ್ತು. ಅದೇ ರೀತಿ ಕೌಂಟರ್ ಕಂಪ್ಲೇಂಟ್ ಕೂಡ ದಾಖಲಾಗಿತ್ತು. ವಿನೋದ್ ಕುಮಾರ್, ರಾಜು, ಕಾರ್ತಿಕ್, ಶರತ್, ಅಜಿತ್, ಮಣಿ ಎಂಬವರ ಮೇಲೂ ಎಫ್ ಐಆರ್ ದಾಖಲಾಗಿತ್ತು. ಎರಡೂ ಗುಂಪುಗಳ ನಡುವೆ ಗಲಾಟೆ ನಡೆದು ಚಾಕು ಇರಿತವಾಗಿತ್ತು. ಅದೇ ಹಳೇ ದ್ವೇಷಕ್ಕೆ ರೌಡಿ ಗಣೇಶನನ್ನು ಮರ್ಡರ್ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಐವರು ಆರೋಪಿಗಳನ್ನು ಕೋಲಾರದ ಬಳಿ ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಯನ್ನು ಶೇಷಾದ್ರಿಪುರಂ ಪೊಲೀಸರು ನಡೆಸುತ್ತಿದ್ದಾರೆ.
ಇದನ್ನೂ ಓದಿ | Murder Attempt | ಮಂಗಳೂರಲ್ಲಿ ವ್ಯಕ್ತಿ ಮೇಲೆ ಗಾಂಜಾ ಗ್ಯಾಂಗ್‌ನಿಂದ ದಾಳಿ, ಕೊಲೆ ಯತ್ನ