ಬೆಂಗಳೂರು: ಮಡಿವಾಳದ ರೌಡಿಶೀಟರ್ ಕಪಿಲ್ ಹತ್ಯೆ (Rowdy sheeter Murder) ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಡಿ.ಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ರೌಡಿಸಂ ಬಿಟ್ಟು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದರೂ ಹಳೇ ಅಭ್ಯಾಸದಂತೆ ಹುಡುಗರ ಮೇಲೆ ಕೈ ಮಾಡಿ ಈತ ಕೊಲೆಯಾಗಿದ್ದಾನೆ.
ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಶಿಷ್ಯನಾಗಿದ್ದ ಕಪಿಲ್, ಕಳೆದ ಐದು ವರ್ಷಗಳಿಂದ ರೌಡಿಸಂನಿಂದ ದೂರವಿದ್ದ. ನಂತರ ರಿಯಲ್ ಎಸ್ಟೇಟ್ ಬ್ಯುಸಿನೆಸ್‌ನಲ್ಲಿ ತೊಡಗಿಸಿಕೊಂಡಿದ್ದ. ಇದೀಗ ಸೈಟ್ ವಿವಾದಕ್ಕೆ ಕೈ ಹಾಕಿ ಕೊಲೆಯಾಗಿದ್ದಾನೆ. ಕಳೆದೊಂದು ವರ್ಷದಲ್ಲಿ ಆರ್.ಟಿ.ನಗರ, ಗೋವಿಂದಪುರ, HRBR ಲೇಔಟ್‌ಗಳ ಸೈಟ್ ವ್ಯವಹಾರಗಳಲ್ಲಿ, ತಗಾದೆಗಳ ಪರಿಹಾರದಲ್ಲಿ ಕೈ ಹಾಕಿದ್ದ.
ಇತ್ತೀಚೆಗೆ ಗೋವಿಂದಪುರದ ಸೈಟ್ ವಿಚಾರಕ್ಕೆ ಸಣ್ಣ ಪ್ರಮಾಣದಲ್ಲಿ ಗಲಾಟೆಯಾಗಿತ್ತು. ಅದೇ ಗಲಾಟೆಯಲ್ಲಿ ಎದುರು ಪಾರ್ಟಿ ಕಡೆಯಿಂದ ಬಂದಿದ್ದ ಹುಡುಗರಿಗೆ ಕಪಿಲ್ ಹೊಡೆದು ಕಳಿಸಿದ್ದ. ಕಪಿಲ್ ಕೈಯ್ಯಿಂದ ಬೀದಿಯಲ್ಲಿ ಹೊಡೆಸಿಕೊಂಡವರಿಂದಲೇ ಆತನ ಹತ್ಯೆಯಾಗಿದೆ.
ಕಪಿಲ್ ತನ್ನ ಚಲನವಲನವನ್ನು ತನ್ನ ಸಹಚರರಿಗೂ ತಿಳಿಸುತ್ತಿರಲಿಲ್ಲ. ಸಾಮಾನ್ಯವಾಗಿ ಆರ್‌ಎಕ್ಸ್ ಬೈಕ್‌ನಲ್ಲಿ ಒಬ್ಬನೇ ಬರುತ್ತಿದ್ದ. ಕಪಿಲ್ ಸ್ಥಳಕ್ಕೆ ಹೋಗುವ ಮೊದಲೇ ಸ್ಪಾಟ್‌ಗೆ ತನ್ನ ಹುಡುಗರನ್ನು ಕಳಿಸಿ ಫೀಲ್ಡ್ ಕ್ಲಿಯರೆನ್ಸ್ ಮೆಸೇಜ್ ಪಡೆಯುತ್ತಿದ್ದ. ಮೊನ್ನೆ ಮಾತ್ರ ತನ್ನ ಹುಡುಗರಿಗೆ ತಾನು ಮನೆಗ್ ಹೋಗುತ್ತೇನೆ, ನೀವು ಹೋಗಿ ಎಂದಿದ್ದ. ಸಿಗರೇಟ್ ಸೇದಿ ಇನ್ನೇನು ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ಬೈಕ್‌ನಲ್ಲಿ ಬಂದ ಮೂವರು ದಾಳಿ ನಡೆಸಿದ್ದಾರೆ. ದಾಳಿ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ಆರೋಪಿಗಳು ಕುಟುಂಬಸ್ಥರ ಸಮೇತ ಮನೆಯಿಂದ ಎಸ್ಕೇಪ್ ಆಗಿದ್ದರು. ಪ್ರಕರಣ ಸಂಬಂಧ 20ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Rowdysheeter Murder : ನಡುರಸ್ತೆಯಲ್ಲಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಮರ್ಡರ್