ಬೆಂಗಳೂರು: 2023ನೇ ಮುಂಗಾರು ಹಂಗಾಮಿನಲ್ಲಿ (Monsoon Season) ಬರ ಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಗೆ ಸಂಬಂಧಪಟ್ಟಂತೆ ರೈತರಿಗೆ ಬರ ಪರಿಹಾರ (Drought Relief) ಅನುದಾನವನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಎಸ್‌ಡಿಆರ್‌ಎಫ್ (SDRF Fund) ಅಡಿಯಲ್ಲಿ ಬರ ಪರಿಹಾರವನ್ನು ಬಿಡುಗಡೆ ಮಾಡಿದ ರಾಜ್ಯ ಸರ್ಕಾರವು, ಎಕರೆಗೆ ಗರಿಷ್ಠ ಎರಡು ಸಾವಿರ ರೂಪಾಯಿಯಂತೆ ಅನುದಾನ ನೀಡುವುದಾಗಿ ತಿಳಿಸಿದೆ.
ಎನ್‌ಡಿಆರ್‌ಎಫ್ ಅಡಿಯಲ್ಲಿ ಕೇಂದ್ರ ಪರಿಹಾರ ಬಂದ ಬಳಿಕ ಹೆಕ್ಟೇರ್ ಪ್ರದೇಶಕ್ಕೆ ಅನುಗುಣವಾಗಿ ಪರಿಹಾರ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈಗ ರಾಜ್ಯದ ವಂತಿಗೆಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಈ ಸಂಬಂಧ ಒಟ್ಟು 105 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ಆದೇಶಿಸಲಾಗಿದೆ.
ಕಳೆದ ವಾರ ಈ ಬಗ್ಗೆ ವಿಸ್ತಾರ ನ್ಯೂಸ್ ಸುದ್ದಿ ಮಾಡಿತ್ತು. ಸಿಎಂ ಭರವಸೆ ಕೊಟ್ಟು ಎರಡು ತಿಂಗಳು ಕಳೆದರೂ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ವಿಸ್ತಾರ ನ್ಯೂಸ್ ಸುದ್ದಿಯನ್ನು ಬಿತ್ತರಿಸಿತ್ತು. ಈಗ ಈ ಸುದ್ದಿ ಬೆನ್ನಲ್ಲೇ ರಾಜ್ಯ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ.
ಆದೇಶದಲ್ಲೇನಿದೆ?
ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬರ ಪರಿಹಾರ ಆದೇಶವನ್ನು ನೀಡಿದ್ದು, ಕೇಂದ್ರ ಸರ್ಕಾರದಿಂದ ಬರ ನಿರ್ವಹಣೆಗಾಗಿ ಎನ್‌ಡಿಆರ್‌ಎಫ್ ಅನುದಾನವನ್ನು ನಿರೀಕ್ಷಿಸಿ, ಕೇಂದ್ರ ಸರ್ಕಾರದ ಗೃಹ ಮಂತ್ರಾಲಯವು 17-07-2023ರಲ್ಲಿ ಹೊರಡಿಸಿರುವ ಎಸ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ ಅರ್ಹ ರೈತರಿಗೆ ಬರ ಪರಿಸ್ಥಿತಿಯಿಂದ ಶೇ.33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಂಟಾದ ಬೆಳೆ ಹಾನಿಗೆ ಗರಿಷ್ಠ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ಇನ್‌ಪುಟ್ ಸಬ್ಸಿಡಿಯನ್ನು ನಿಗದಿಪಡಿಸಲಾಗಿದೆ.
ಮಳೆಯಾಶ್ರಿತ ಬೆಳೆ ನಷ್ಟಕ್ಕೆ ಪ್ರತಿ ಹೆಕ್ಟೇರ್‌ಗೆ 8,500 ರೂ., ನೀರಾವರಿ ಬೆಳೆಗೆ 17,000 ರೂ. ಹಾಗೂ ಬಹು ವಾರ್ಷಿಕ ಬೆಳೆ ನಷ್ಟ ಪರಿಹಾರಕ್ಕೆ 22,500 ರೂ. ಪರಿಹಾರವನ್ನು ನಿಗದಿ ಮಾಡಿದೆ. ಇದಕ್ಕಾಗಿ ರಾಜ್ಯ ಸರ್ಕಾರವು 105 ಕೋಟಿ ರೂಪಾಯಿಯನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಿಗೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ: DK Shivakumar : ಕೇಸ್ ವಾಪಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಿಬಿಐ, ಡಿಕೆಶಿಗೆ ಮತ್ತೆ ಸಂಕಷ್ಟ
ಪ್ರತಿ ರೈತರಿಗೆ ಗರಿಷ್ಠ 2000ರವರೆಗೆ ರೈತರಿಗೆ ಪಾವತಿಸಲು 2023-24ನೇ ಸಾಲಿನ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿ ಆದೇಶಿಸಿದೆ.