ಬೆಂಗಳೂರು: ಹೊಸ ವರ್ಷಕ್ಕೆ ಬೆಂಗಳೂರು ಮಹಾ ನಗರ ಪಾಲಿಕೆಯಿಂದ ಸಿಬಂದಿಗಳಿಗೆ ಕೊಡುಗೆ ಲಭಿಸಿದಂತಾಗಿದೆ. ಜನವರಿಯಿಂದ ಪಾಲಿಕೆಯ ಬಿ, ಸಿ, ಡಿ ವರ್ಗದ ನೌಕರರಿಗೆ (New Year Gift) ಮೊದಲು ವೇತನ ವಿತರಣೆಯಾಗಲಿದೆ.
ಇದುವರೆಗೆ ಎಲ್ಲ ಹಂತದ ಅಧಿಕಾರಿ ಮತ್ತು ನೌಕರರಿಗೆ ಒಂದೇ ಹಂತದಲ್ಲಿ ಸಂಬಳವನ್ನು ಬಿಬಿಎಂಪಿ ವಿತರಿಸುತ್ತಿತ್ತು. ಪ್ರತಿ ತಿಂಗಳಿನ ಎರಡನೇ ವಾರದಲ್ಲಿ ಬಿಬಿಎಂಪಿ ವೇತನ ನೀಡುತ್ತಿತ್ತು. ಇದಕ್ಕೆ ಪಾಲಿಕೆ ನೌಕರರು ಬೇಸರ ವ್ಯಕ್ತ ಪಡಿಸಿದ್ದರು. ನೌಕರರ ಈ ಬೇಸರವನ್ನು ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಪರಿಹರಿಸಿದ್ದಾರೆ.
ವೇತನ ಹಂಚಿಕೆಯಲ್ಲಿ ಬದಲಾವಣೆ ಮಾಡಿದ್ದಾರೆ. ಈ ತಿಂಗಳಿನಿಂದ ಮೊದಲು ಕೆಳ ಹಂತದ ನೌಕರರಿಗೆ ವೇತನ ವಿತರಣೆಯಾಗಲಿದೆ. ಪಾಲಿಕೆಯ B,C,D ಹಂತದ ನೌಕರರಿಗೆ ಮೊದಲು ಸಂಬಳ, ಬಳಿಕ ಕಚೇರಿ ನಿರ್ವಹಣೆ ವೆಚ್ಚ, ನಂತರ ಗುತ್ತಿಗೆದಾರರಿಗೆ ಬಿಲ್ ಪಾವತಿ, ಇದಾದ ಬಳಿಕ ಐಎಸ್ ಸೇರಿದಂತೆ ಮೇಲಾಧಿಕಾರಿಗೆ ಸಂಬಳ ವೇತನ ನೀಡಲು ಸೂಚಿಸಲಾಗಿದೆ.