Site icon Vistara News

ಅಡಿಗರ ನಂತರದ ಪ್ರಮುಖ ಸಾಹಿತಿಗಳಲ್ಲಿ ಶಿವರಾಮು ಅವರೂ ಒಬ್ಬರು: ಡಾ. ಜಿ.ಬಿ. ಹರೀಶ್‌

Savarkar award

ಬೆಂಗಳೂರು: ಕನ್ನಡ ಸಾಹಿತ್ಯದಲ್ಲಿ ಗೋಪಾಲಕೃಷ್ಣ ಅಡಿಗರ ನಂತರದ ಶ್ರೇಷ್ಠ ಮತ್ತು ದೊಡ್ಡ ಕವಿಗಳಲ್ಲಿ ಶಿವರಾಮು ಅವರೊಬ್ಬರು ಎಂದು ಲೇಖಕ ಮತ್ತು ಸಾರ್ವಕರ್ ಸಾಹಿತ್ಯ ಸಂಘದ ಅಧ್ಯಕ್ಷ ಡಾ. ಜಿ.ಬಿ. ಹರೀಶ್ ತಿಳಿಸಿದರು.

ಬನಶಂಕರಿಯಲ್ಲಿರುವ ಪುರವಂಕರ ಸುಚಿತ್ರ ಸಭಾಂಗಣದಲ್ಲಿ ಸಾರ್ವಕರ್ ಸಾಹಿತ್ಯ ಸಂಘದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ‘ಸಮಕಾಲೀನ ಹಿಂದು ಸಾಹಿತ್ಯ ಒಂದು ಅವಲೋಕನ ಮತ್ತು ವೀರ ಸಾವರ್ಕರ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗೋಪಾಲಕೃಷ್ಣ ಅಡಿಗರ ನಂತರದಲ್ಲಿ ಎಚ್‌.ಎಸ್‌. ವೆಂಕಟೇಶಮೂರ್ತಿಯವರವರೆಗೆ ಅನೇಕರ ಹೆಸರುಗಳನ್ನು ನಾವು ಕೇಳುತ್ತೇವೆ. ಅವರೆಲ್ಲರೂ ಯೋಗ್ಯರೇ ಆಗಿದ್ದಾರೆ. ಆದರೆ ಅವರ ನಡುವಿನಲ್ಲಿ ಶಿವರಾಮು ಅವರೂ ಇದ್ದಾರೆ ಎಂದು ನಾವು ಮರೆಯಬಾರದು. ಆತ್ಮಾಹುತಿ ಕೃತಿಯ ಮೂಲಕ ಕನ್ನಡಕ್ಕೆ ಸಾವರ್ಕರರನ್ನು ಪರಿಚಯಿಸುವ ಜತೆಗೆ ಕನ್ನಡದಲ್ಲಿ ರಾಷ್ಟ್ರೀಯತೆಯ ಪ್ರವಾಹವನ್ನು ಹರಿಸಿದವರು ಶಿವರಾಮು.

ಸಾಹಿತ್ಯದ ಪ್ರಖರ ದೀಪವಾಗಿದ್ದ ಶಿವರಾಮು ಅವರು ಕವಿತ್ವವನ್ನು ಬಸಿದು ‘ಆತ್ಮಾಹುತಿ’ ಕೃತಿಯನ್ನು ಗದ್ಯ ರೂಪದಲ್ಲಿ ಕೊಟ್ಟಿದ್ದಾರೆ. ಅವರ ಕವನಗಳನ್ನು ಸಂಘದ ಶಾಖೆಗಳಲ್ಲಿ, ಫುಟ್‌ಬಾಲ್ ಮೈದಾನದಲ್ಲಿ ಹಾಡುವುದಷ್ಟೇ ಅಲ್ಲದೇ, ಲಕ್ಷ ಲಕ್ಷ ಜನರನ್ನು ಸೇರಿಸಿ ಅವರ ಕವನಗಳ ವಾಚನ ಮಾಡಬೇಕು. ಆಗ ಅಲ್ಲಿ ಸೇರಿದವರೆಲ್ಲ ಗದ್ಗದಿತರಾಗಿ ಕಣ್ಣು ತುಂಬಿಕೊಂಡು ಮನೆಗೆ ಹೋಗುತ್ತಾರೆ. ಅಂತಹ ಶಕ್ತಿ ಶಿವರಾಮು ಅವರ ಕವನಗಳಲ್ಲಿವೆ. ಶಿವರಾಮು ಅವರೂ ಸೇರಿ ಎಲ್ಲ ಕವಿತೆಗಳನ್ನೂ, ಕವಿತೆಗಳನ್ನೂ ಮೇಲೆತ್ತಿದರೆ ಭಾರತ ಜಗದ್ಗುರುವಾಗುತ್ತದೆ. ಈ ಕಾರಣಕ್ಕಾಗಿ ಶಿವರಾಮು ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಧನ್ಯರಾಗಿದ್ದೇವೆ ಎಂದರು.

ಇದನ್ನೂ ಓದಿ | ತುಮಕೂರಲ್ಲಿ ಸಾವರ್ಕರ್‌ ಪಾರ್ಕ್‌ ಸ್ಥಾಪಿಸಿದ್ದೇ ಕಾಂಗ್ರೆಸ್‌, ಸ್ವಾತಂತ್ರ್ಯ ವೀರ ಅಂದಿದ್ದರು ಕಾಂಗ್ರೆಸ್‌ ನಾಯಕರು!

ಸಾಹಿತಿ ಡಾ. ಬಾಬು ಕೃಷ್ಣಮೂರ್ತಿ ಮಾತನಾಡಿ, ರಾಜ್ಯದಲ್ಲಿ ಶಿವರಾಮು ಅವರು ದೇಶಭಕ್ತಿಯ ಕೃತಿಗಳನ್ನು ರಚಿಸಲು ತಮ್ಮ ಸರ್ವಸ್ವವನ್ನೂ ಅರ್ಪಿಸಿದ್ದಾರೆ. ಅವರು ಬರೆದ ಕವನಗಳನ್ನು ಹಾಡುತ್ತಿದ್ದರೆ ಭಾರತದ ಶ್ರೇಷ್ಠತೆ ಕಣ್ಣಮುಂದೆ ಬರುತ್ತದೆ. ಅವರು ಬರವಣಿಗೆಯ ಮೂಲಕ ಉಪದೇಶ ಮಾಡಲಿಲ್ಲ. ದೇಶದ ಲಕ್ಷಾಂತರ ಯುವಕರಲ್ಲಿ ದೇಶ ಭಕ್ತಿಯ ಚಿಲುಮೆ ಚಿಮ್ಮುವಂತೆ ಮಾಡಿದ್ದಾರೆ ಎಂದು ಹೇಳಿದರು.

ವಾಗ್ದೇವಿ ವಿಲಾಸ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ. ಹರೀಶ್ ಮಾತನಾಡಿ, ನಮಗೆ ರಾಜಕೀಯ ಸ್ವಾತಂತ್ರ್ಯ ಬಂದಿದ್ದರೂ, ವೈಚಾರಿಕ ಸ್ವಾತಂತ್ರ್ಯ ಇನ್ನೂ ಬರಬೇಕಿದೆ. ಬಹುತೇಕರಲ್ಲಿ ಮಾನಸಿಕ ದಾಸ್ಯ ಈಗಲೂ ಉಳಿದಿದೆ. ರಾಷ್ಟ್ರ ನಿರ್ಮಾಣ ಯಾರೋ ಒಬ್ಬರು ಮಾಡುವಂತಹದ್ದಲ್ಲ. ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕಾಗಿದೆ. ರಾಷ್ಟ್ರಪ್ರಜ್ಞೆ ಎಲ್ಲರಲ್ಲೂ ಜಾಗೃತರಾಗಬೇಕಿದೆ ಎಂದರು.
ದಿ. ಶಿವರಾಮು ಅವರಿಗೆ ನೀಡುವ ವೀರ ಸಾವರ್ಕರ್ ರಾಷ್ಟ್ರೀಯ ಪ್ರಶಸ್ತಿಯನ್ನು ಪತ್ನಿ ಶಾರದಾ ಶಿವರಾಮು ಅವರು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಡಾ. ಎಸ್.ಆರ್. ಲೀಲಾ, ಸಾವರ್ಕರ್ ಸಾಹಿತ್ಯ ಸಂಘದ ಟ್ರಸ್ಟಿ ಹರ್ಷ ಸಮೃದ್ಧ ಮತ್ತಿತರರಿದ್ದರು.

ಇದನ್ನೂ ಓದಿ | Savarkar Photo | ಸಾವರ್ಕರ್‌ ಗಣೇಶೋತ್ಸವ: ರಾಜ್ಯದೆಲ್ಲೆಡೆ ಹಬ್ಬುತ್ತಿದೆ ಕಾವು

Exit mobile version