ಬೆಂಗಳೂರು: ಖಾಸಗಿ ಶಾಲೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳ ಪ್ರವೇಶಾತಿಗಾಗಿ (School Admissions) ಪರದಾಡುತ್ತಿರುವ ಖಾಸಗಿ ಶಾಲೆಗಳು ಹೊಸದೊಂದು ಆಫರ್ ನೀಡಲು ಮುಂದಾಗಿದ್ದು, ಸದ್ಯ ಈ ಆಫರ್‌ಗೆ ಪೋಷಕರು ಅಸಮಾಧಾನಗೊಂಡಿದ್ದಾರೆ.
ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತದೆ. ಆದರೆ ಕೆಲವು ಖಾಸಗಿ ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಡ್ವಾನ್ಸ್ ಆಗಿ ಈಗಲೇ ಪ್ರವೇಶಾತಿಗಾಗಿ ಮುಂದಾಗುತ್ತಿವೆ. ಈಗಂತೂ ಗಲ್ಲಿಗೊಂದು ಖಾಸಗಿ ಶಾಲೆಗಳು ಹುಟ್ಟಿಕೊಳ್ಳುತ್ತಿವೆ. ಅದರಲ್ಲಿ ಕೆಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳೇ ಇಲ್ಲದೆ ಪರದಾಡುತ್ತಿವೆ. ಹೀಗಾಗಿ ವಿದ್ಯಾರ್ಥಿಗಳಿಗೆ ಆಮಿಷವೊಡ್ಡಿ ಕೆಲವು ಆಫರ್‌ಗಳನ್ನು ಕೊಡಲು ಮುಂದಾಗಿದೆ.
ಹಲವು ಖಾಸಗಿ ಶಾಲೆಗಳು ಆರಂಭಿಕ ಪ್ರವೇಶಕ್ಕಾಗಿ ಶುಲ್ಕ ವಿನಾಯಿತಿಯ ಭರವಸೆಯನ್ನು ನೀಡುತ್ತಿವೆ. ಗಡುವಿನೊಳಗೆ ಪ್ರವೇಶವನ್ನು ಖಚಿತಪಡಿಸಿದರೆ ಪ್ರವೇಶ ಶುಲ್ಕವನ್ನು ಮನ್ನಾ ಮಾಡಲಾಗುವುದು ಎಂದು ಆಡಳಿತ ಮಂಡಳಿ ಪೋಷಕರಿಗೆ ಭರವಸೆ ನೀಡುತ್ತಿವೆ. ಈ ಶಾಲೆಗಳಲ್ಲಿ ಪ್ರವೇಶ ಶುಲ್ಕ 10,000 ರೂ. ಯಿಂದ 25,000 ರೂ. ಇರಲಿದೆ. ಹಲವಾರು ಶಾಲೆಗಳು ವಿದ್ಯಾರ್ಥಿಗಳನ್ನು ಆಕರ್ಷಿಸಲು ರಿಯಾಯಿತಿಗಳ ಜತೆಗೆ ವಿದ್ಯಾರ್ಥಿವೇತನವನ್ನು ಸಹ ನೀಡುತ್ತಿವೆ.
ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಕೊರತೆ ಕೂಡ ಇದೆ. ಹೀಗಾಗಿ ಶಾಲೆಗಳ ಪ್ರವೇಶಾತಿಯಲ್ಲಿ ಪರಸ್ಪರ ಪೈಪೋಟಿ ನಡೆಸುತ್ತಿವೆ. ಸಾಮಾನ್ಯವಾಗಿ ಶಿಫಾರಸ್ಸು ಮೂಲಕ ಪ್ರವೇಶಾತಿ ಪಡೆಯುವುದನ್ನು ನೋಡಿದ್ದೇವೆ. ಆದರೆ ಈ ರೀತಿಯ ಅಡ್ವಾನ್ಸ್ ನೋಂದಣಿಯಿಂದ ವಿಧ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಗ್ಗಿದಂತಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಇಂತಹ ಮಾರ್ಕೆಟಿಂಗ್ ತಂತ್ರಗಾರಿಕೆಗಳು ವಿದ್ಯಾರ್ಥಿಗಳ ಶೈಕ್ಷಣಿಕಕ್ಕೆ ಮಾರಕವಾಗದೆ ಇರಲಿ ಎನ್ನುತ್ತಿದ್ದಾರೆ ಪೋಷಕರು. ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಪೋಷಕರ ಡೇಟಾವನ್ನು ತೆಗೆದುಕೊಳ್ಳುವ ಶಾಲೆಗಳಿವೆ. ಆದರೆ ಈ ರೀತಿ ಅಡ್ವಾನ್ಸ್ ನೋಂದಣಿಯ ಆಮಿಷ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಮೂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ