ಬೆಂಗಳೂರು: ಸುಂಕದಕಟ್ಟೆಯಲ್ಲಿ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆದು ಎಂಟು ದಿನ ಕಳೆದೂ ಆರೋಪಿ ನಾಗೇಶ್ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಸುಮಾರು 40ಕ್ಕೂ ಹೆಚ್ಚು ಪೊಲೀಸರು ಆತನ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ನಡುವೆ, ಆತನ ಮೇಲಿನ ಆರೋಪ ಸಾಬೀತಾದರೆ ಯಾವ ಶಿಕ್ಷೆ ವಿಧಿಸಲು ಅವಕಾಶವಿದೆ ಎಂಬ ಬಗ್ಗೆ ಚರ್ಚೆ ಆರಂಭಗೊಂಡಿದೆ.
ಆರೋಪಿ ನಾಗೇಶ್ ವಿರುದ್ಧ ಪೊಲೀಸರು ಪ್ರಸಕ್ತ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 326 ಎ ಮತ್ತು 307ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೆಕ್ಷನ್ 326 ಎನ್ನುವುದು ಉದ್ದೇಶಪೂರ್ವಕ ದಾಳಿಗೆ ವಿಧಿಸುವ ಸೆಕ್ಷನ್. ಒಂದೊಮ್ಮೆ ಈ ಆರೋಪ ಸಾಬೀತಾದರೆ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದು.
ಪೊಲೀಸರು ದಾಖಲಿಸಿಕೊಂಡಿರುವ ಇನ್ನೊಂದು ಸೆಕ್ಷನ್ 307. ಇದು ಕೊಲೆ ಯತ್ನಕ್ಕೆ ಸಂಬಂಧಿಸಿದ್ದು. 307 ಸೆಕ್ಷನ್ ಹಾಕಿದ್ದರಿಂದ ಆರೋಪಿಗೆ ಜಾಮೀನು ಸಿಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಆರೋಪಿಯು ತನಗೆ ಯುವತಿಯನ್ನು ಕೊಲೆ ಮಾಡೋ ಉದ್ದೇಶವಿರಲಿಲ್ಲ ಮತ್ತು ಕೊಲೆ ಯತ್ನವನ್ನೂ ಮಾಡಿಲ್ಲ. ಆಕೆಯ ಸೌಂದರ್ಯ ಹಾಳು ಮಾಡೋ ಉದ್ದೇಶದಿಂದ ಆ್ಯಸಿಡ್ ದಾಳಿ ನಡೆಸಿದ್ದೆ ಎಂದು ಹೇಳಿದರೆ ಅದು ಗಂಭೀರ ಪ್ರಕರಣವೆಂದು ದಾಖಲಾಗದಿರುವ ಸಾಧ್ಯತೆ ಇದೆ.
ಈ ವಿಧಿಯ ಪ್ರಕಾರ ಯುವತಿಗೆ ಚಿಕಿತ್ಸೆಗೆ ಬೇಕಾಗುವಂತಹ ವೆಚ್ಚವನ್ನು ಆರೋಪಿಯೇ ಭರಿಸಬೇಕಾಗುತ್ತದೆ.
ಗರಿಷ್ಠ ಶಿಕ್ಷೆಗೆ ಒತ್ತಡ
ಈ ನಡುವೆ, ಆರೋಪಿ ವಿರುದ್ಧ ಜೀವಾವಧಿ ಅಥವಾ ಮರಣ ದಂಡನೆ ಶಿಕ್ಷೆಯಾಗುವ ರೀತಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಒತ್ತಡ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ. ಪೊಲೀಸರು ತಕ್ಷಣ ಜಾಮೀನು ಸಿಗದಂತೆ ನೋಡಿಕೊಳ್ಳಬೇಕು. ಕಠಿಣ ಸೆಕ್ಷನ್‌ಗಳನ್ನು ಹಾಕಿ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂಬ ಬೇಡಿಕೆ ಹೆಚ್ಚಾಗಿದೆ.
ಇದನ್ನೂ ಓದಿ | ಯುವತಿ ಆ್ಯಸಿಡ್ ಪ್ರಕರಣ : ನಾಗೇಶನ ಮೇಲೆ ಅವನ ಕುಟುಂಬದವರ ಹಿಡಿ ಶಾಪ
ಘಟನೆಯ ಹಿನ್ನೆಲೆ :
ಏಪ್ರಿಲ್ 28ರ ಗುರುವಾರ ಬೆಳಗ್ಗೆ 8-30ರ ವೇಳೆಯಲ್ಲಿ ಯುವತಿಯನ್ನು ಆಕೆಯ ತಂದೆ, ಸುಂಕದಕಟ್ಟೆಯ ಮುತ್ತೂಟ್ ಮಿನಿ ಫೈನಾನ್ಸ್ ಕಚೇರಿಗೆ ಡ್ರಾಪ್ ಮಾಡಿದರು. ಮೊದಲನೇ ಮಹಡಿಯಲ್ಲಿದ್ದ ಕಚೇರಿಗೆ ಮೆಟ್ಟಿಲು ಹತ್ತಿಕೊಂಡು ಹೋಗಬೇಕಿತ್ತು. ಕಚೇರಿಗೆ ಇನ್ನೂ ಯಾರೂ ಬಾರದೆ ಇದ್ದದ್ದರಿಂದ ಕಚೇರಿ ಬಾಗಿಲ ಹತ್ತಿರ ನಿಂತುಕೊಂಡಿದ್ದರು. ಈ ಸಮಯದಲ್ಲಿ ಆರೋಪಿ ನಾಗೇಶ್ ಹತ್ತಿರಕ್ಕೆ ಬಂದಿದ್ದಾನೆ. ಒಂದು ಕೈ ಕವರ್‌ನಲ್ಲಿ ಏನನ್ನೋ ಹಿಡಿದಿರುವುದಾಗಿ ಗಮನಿಸಿದ ಯುವತಿ ಕೆಳಗೆ ಓಡಲು ಪ್ರಯತ್ನಿಸಿದ ಕೂಡಲೆ ನಾಗೇಶ ಹಿಂಬಾಲಿಸಿಕೊಂಡು ಬಂದು ಆಸಿಡ್ ಅನ್ನು ಯುವತಿಯ ಮೈ ಮೇಲೆ ಹಾಕಿ ಓಡಿ ಹೋಗಿದ್ದ.ಎದೆ, ಕೈಗಳು , ಹಾಗು ಬೆನ್ನಿಗೆ ಆ್ಯಸಿಡ್ ಬಿದ್ದು ಗಾಯಗಳಾಗಿದ್ದು, ಯುವತಿ ಕೂಡಲೆ ತಂದೆಗೆ ಕರೆ ಮಾಡಿ ಸ್ಥಳಕ್ಕೆ ಬರಲು ತಿಳಿಸಿದ್ದಳು. ನಂತರ ಆ್ಯಂಬುಲೆನ್ಸ್ ಮೂಲಕ ಯುವತಿಯನ್ನು ಮೊದಲಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ, ನಂತರ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.ನಾಗೇಶ ಸುಮಾರು ಏಳು ವರ್ಷಗಳ ಹಿಂದೆ ಯುವತಿಯ ದೊಡ್ಡಮ್ಮನ ಮನೆಯಲ್ಲಿ ಬಾಡಿಗೆಗೆ ಇದ್ದ. ತನ್ನನ್ನು ಪ್ರೀತಿ ಮಾಡುವಂತೆ ಹಿಂಸೆ ಮಾಡುತ್ತಿದ್ದ. ಪ್ರೀತಿ ಮಾಡುವುದಿಲ್ಲ ಎಂದು ತಿಳಿಸಿದಾಗ ಸುಮ್ಮನಾಗಿದ್ದ. ಆದರೆ ಮತ್ತೆ ಒಂದು ವಾರದಿಂದ ಹಿಂಬಾಲಿಸಿಕೊಂಡು ಬಂದು, ಪ್ರೀತಿ ಮಾಡುವಂತೆ ಬಲವಂತ ಮಾಡುತ್ತಿದ್ದ. ಇದಕ್ಕೂ ಒಪ್ಪದಿದ್ದಾಗ ಆ್ಯಸಿಡ್ ದಾಳಿ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ | ಆ್ಯಸಿಡ್ ದಾಳಿ | ಕ್ರೌರ್ಯಕ್ಕೆ ತಕ್ಕಂತೆ ಶಿಕ್ಷೆ ಎಂದ ಸಚಿವ ಸುಧಾಕರ್