ಬೆಂಗಳೂರು: ʻʻʻದಯವಿಟ್ಟು ವಿಧಾನ ಸೌಧವನ್ನು (Vidhana soudha) ಪಾಕಿಸ್ತಾನ ಮಾಡಬೇಡಿ. ಪಾಕಿಸ್ತಾನದವರನ್ನು ಕರೆತಂದು ವಿಧಾನ ಸೌಧವನ್ನು ಉಗ್ರರ ಸ್ಲೀಪರ್ ಸೆಲ್ (Terrorists Sleeper Cell) ಮಾಡಬೇಡಿʼʼ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಆರ್. ಆಶೋಕ್ (R Ashok) ಹೇಳಿದರು.
ರಾಜ್ಯಸಭಾ ಚುನಾವಣೆಯಲ್ಲಿ (Rajyasabha Election) ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳ ವಿಜಯೋತ್ಸವದ ಸಂದರ್ಭದಲ್ಲಿ ಮಂಗಳವಾರ ಸಂಜೆ ವಿಧಾನ ಸೌಧದ ಆವರಣದಲ್ಲೇ ಪಾಕಿಸ್ತಾನ್ ಜಿಂದಾಬಾದ್ (Pakistan Zindabad) ಘೋಷಣೆ ಕೂಗಿದವರ ಮೇಲೆ 40 ಗಂಟೆಗಳ ಮೇಲೂ ಕ್ರಮ ಕೈಗೊಳ್ಳಲಾಗಿಲ್ಲ (Sedition Case) ಎಂದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ವಿಧಾನಸಭಾ ಅಧಿವೇಶನ ಸಭಾತ್ಯಾಗ ಮಾಡಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪ್ರತಿಭಟನೆ ನಡೆಸಿದರು. ಬಳಿಕ ರಾಜಭವನಕ್ಕೆ ಪಾದಯಾತ್ರೆ ನಡೆಸಿ ದೂರು ನೀಡಿದರು. ಪಾದಯಾತ್ರೆಗೆ ಮುನ್ನ ಮಾತನಾಡಿದ ಆರ್. ಅಶೋಕ್ ಅವರು ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದರೂ ಕ್ರಮ ಕೈಗೊಂಡಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
ʻʻಮಾಧ್ಯಮದವರು ನಿರ್ಭೀತಿಯಿಂದ ಕೆಲಸ ಮಾಡುತ್ತಿದ್ದಾರೆ. ಸತ್ಯವನ್ನು ಹೇಳುತ್ತಿದ್ದಾರೆ. ಆದರೆ, ಈಗ ಅವರನ್ನೂ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ವಿಧಾನಸಭೆಯ ಟಿವಿಯಲ್ಲಿ ಕೇವಲ ಆಡಳಿತ ಪಕ್ಷದವರ ವಿಡಿಯೋ ಮಾತ್ರ ತೋರಿಸಲಾಗುತ್ತಿದೆʼʼ ಎಂದು ಅಶೋಕ್ ಆರೋಪಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ದೇಶದ್ರೋಹಿಗಳ ರಕ್ಷಣೆ ನೀಡುವ ಮೂಲಕ ಗಡಿಯಲ್ಲಿ ಹಗಲು ರಾತ್ರಿ ಕಾವಲು ಕಾಯುತ್ತಿರುವ ಸೈನಿಕರಿಗೂ ಅನ್ಯಾಯ ಮಾಡುತ್ತಿದೆ ಎಂದು ಅಶೋಕ್ ಆರೋಪಿಸಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದರೂ ಕ್ರಮ ಕೈಗೊಳ್ಳದೆ ಕೆಲವರನ್ನು ಕರೆಸಿ ವಿಚಾರಣೆ ನಡೆಸಿ ವಾಪಸ್ ಕಳುಹಿಸಿದ್ದಾರೆ. ದೇಶದ್ರೋಹಿಗಳಿಗೆ ಬಿರ್ಯಾನಿ ಕೊಟ್ಟು ಕಳಿಸಿದ್ದೀರಾ.? ಶಿವಾಜಿನಗರ ಬಿರ್ಯಾನಿನಾ.? ಎಂದು ಆಕ್ರೋಶದಿಂದ ಕೇಳಿದರು.
ರಿಪೋರ್ಟ್ ಬರುವ ಮೊದಲೇ ಕ್ಲೀನ್ ಚಿಟ್
ಮಾಧ್ಯಮದವರಿಂದ ಫೋರ್ಸ್ ಮಾಡಿ ವಿಡಿಯೋ ಪಡೆಯುತ್ತಿದ್ದಾರೆ. ಈಗಾಗಲೇ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಹಿರಿಯ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಈಗಾಗಲೇ FSL ರಿಪೋರ್ಟ್ ಬಂದಿದೆ, ಅದರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿಲ್ಲ ಅಂತ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಅಶೋಕ್ ಆಕ್ಷೇಪಿಸಿದರು.
ಇದನ್ನೂ ಓದಿ : Budget Session : 40 ಗಂಟೆ ಕಳೆದರೂ ಜಿಂದಾಬಾದ್ ಉಗ್ರರ ಸೆರೆ ಇಲ್ಲ; ಬಿಜೆಪಿ ವಾಕೌಟ್
ಸಂವಿಧಾನ ವಿರೋಧಿ ಸರ್ಕಾರ ವಜಾ ಮಾಡಲು ರಾಜ್ಯಪಾಲರಿಗೆ ಮನವಿ: ಬೊಮ್ಮಾಯಿ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನ ಪ್ರಕಾರ ನಡೆದುಕೊಳ್ಳುತ್ತಿಲ್ಲ. ದೇಶವಿರೋಧಿಗಳ ರಕ್ಷಣೆ ಮಾಡುತ್ತಿದೆ. ಈ ಸರ್ಕಾರ ವಜಾವನ್ನು ಮಾಡುವಂತೆ ರಾಜ್ಯಪಾಲರಿಗೆ ಮನವಿ ಮಾಡುವುದಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ತೆರಳುವ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ. ಮುಖ್ಯಮಂತ್ರಿ ಮಂಡಿಸಿರುವ ಬಜೆಟ್ ಸತ್ಯಕ್ಕೆ ದೋರವಾಗಿದೆ. ಈಗ ಪಾಕಿಸ್ತಾನ ಪರ ಘೋಷಣೆ ಕೂಗಿದವರ ರಕ್ಷಣೆ ಮಾತನಾಡುತ್ತ ನೈತಿಕವಾಗಿ ದಿವಾಳಿಯಾಗಿದ್ದಾರೆ. ಇವರು ಪ್ರಜಾಪ್ರಭುತ್ವ ಕ್ಕೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ವಿಧಾನ ಸೌಧದಲ್ಲಿಯೇ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು, ದೇಶದ ರಕ್ಷಣೆಗೆ ಇದು ಆಪತ್ತಿದೆ. ಅಧಿವೇಶವನ ಮುಗಿದ ತಕ್ಷಣ ಇದೆಲ್ಲ ಮರೆತು ಹೋಗುತ್ತಾರೆ ಎಂದು ಕಾಂಗ್ರೆಸ್ ನವರು ಅಂದುಕೊಂಡಿದ್ದಾರೆ. ಆದರೆ, ಇದನ್ನು ರಾಜ್ಯದ ಜನರು ಮರೆಯುವುದಿಲ್ಲ. ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.
ಪಾಕ್ ಪರವಾಗಿ ಸರ್ಕಾರ ನಿಲ್ಲುತ್ತದೆ ಅಂದರೆ, ಈ ಸರ್ಕಾರ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ. ಈ ಸರ್ಕಾರ ಎಷ್ಟು ಬೇಗ ತೊಲಗುತ್ತದೆ ರಾಜ್ಯಕ್ಕೆ ಅಷ್ಟು ಒಳ್ಳೆಯದಾಗುತ್ತದೆ. ಪಾಕಿಸ್ತಾನದ ಪರ ಘೊಷಣೆ ಕೂಗಿರುವುದು ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ. ಇವರು ಎಫ್ ಎಸ್ ಎಲ್ ವರದಿ ಕತೆ ಏಕೆ ಹೇಳುತ್ತಿದ್ದಾರೆ. ಈ ಪ್ರಕರಣ ಮುಚ್ಚಿ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಘಟನೆ ನಡೆದು 48 ಗಂಟೆ ಕಳೆದರೂ ಯಾರನ್ನೂ ಬಂಧಿಸಿಲ್ಲ. ಬೇರೆ ಘಟನೆ ನಡೆದಾಗ ಎಫ್ ಎಸ್ ಎಲ್ ವರದಿಗಾಗಿ ಕಾಯದೇ ಮೊದಲು ಬಂಧಿಸುತ್ತಿದ್ದರು. ಇದರಲ್ಲಿ ಏನೂ ಇಲ್ಲ ಅಂದರೆ ಪೊಲಿಸರು ಏಕೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡರು. ರಾಜ್ಯದ ಜನರು ಪಾಕಿಸ್ತಾನ ಪರವಾದವನ್ನು ಆಯ್ಕೆ ಮಾಡಿಲ್ಲ. ಇದು ಕನ್ನಡಿಗರ ಹಾಗೂ ಭಾರತೀಯರ ಹಾಗೂ ಸಂವಿಧಾನ ವಿರೋಧಿ ಸರ್ಕಾರ ಈ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.